ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ರೇವಣ್ಣ ವಜಾಗೊಳಿಸಲು ಒತ್ತಾಯ

Last Updated 22 ಅಕ್ಟೋಬರ್ 2017, 7:10 IST
ಅಕ್ಷರ ಗಾತ್ರ

ರಾಯಚೂರು: ಹೈದರಾಬಾದ್‌ ಕರ್ನಾಟಕದ ಪ್ರದೇಶದ ಮೀಸಲಾತಿ ಸರ್ಕಾರಕ್ಕೆ ಸಮಸ್ಯೆ ಎಂದು ಹೇಳಿಕೆ ನೀಡಿರುವ ಸಚಿವ ಎಚ್.ಎಂ.ರೇವಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜನಾಂದೋಲನಗಳ ಮಹಾಮೈತ್ರಿ ಜಿಲ್ಲಾ ಘಟಕದ ಸದಸ್ಯರು ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಎಚ್‌.ಎಂ.ರೇವಣ್ಣ ಭಾವಚಿತ್ರ ಸುಟ್ಟು ಶನಿವಾರ ಪ್ರತಿಭಟನೆ ನಡೆಸಿದರು.

ಸಚಿವ ರೇವಣ್ಣ ಅವರು ಸಂವಿಧಾನದ 371 ಜೆ ಕಾಯ್ದೆ ಸರ್ಕಾರಕ್ಕೆ ಸಮಸ್ಯೆಯಾಗಿದೆ. ಇದರ ಬಗ್ಗೆ ಚರ್ಚೆ ನಡೆಸುವ ಅವಶ್ಯಕತೆಯಿದೆ ಎಂದು ಹೇಳುವ ಮೂಲಕ ಸಂವಿಧಾನಕ್ಕೆ ಬಹಿರಂಗವಾಗಿ ಸವಾಲೆಸೆದಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ಸಂವಿಧಾನದ ಮೇಲೆ ಪ್ರಮಾಣ ಮಾಡಿ ದೇಶದ ಸಂವಿಧಾನದ ಹಾಗೂ ಸರ್ಕಾರದ ಕಾನೂನುಗಳನ್ನು ಜಾರಿಗೊಳಿಸುವುದು ಅವರ ಜವಾಬ್ದಾರಿ. ಆದರೂ, ಇಂತಹ ಹೇಳಿಕೆ ನೀಡಿರುವುದು ದುಷ್ಟತನವಾಗಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ಸಚಿವರು ಹೈದರಾಬಾದ್‌ ಕರ್ನಾಟಕದ ಮೀಸಲಾತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ’ ಎಂದರು.

‘ಸಂವಿಧಾನದ 371 ಜೆ ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಕೊರಗುತ್ತಿರುವ ಸಂದರ್ಭದಲ್ಲಿ ಸಚಿವರು ನೀಡಿದ ಹೇಳಿಕೆಯಿಂದ ಈ ಭಾಗದ ಜನರಿಗೆ ಅಘಾತವಾಗಿದೆ. ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಪ್ರಚಾರ ಪಡೆಯುತ್ತಿರುವ ಸರ್ಕಾರದ ಸಚಿವರು ಇಂತಹ ಬಾಲಿಶತನದ ಹೇಳಿಕೆ ನೀಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾರಿಗೆ ಇಲಾಖೆಯ ಅಂತರ ನಿಗಮ ವರ್ಗಾವಣೆ ಪರಿಣಾಮದಿಂದ 2348 ನೌಕರರು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯಿಂದ ಬೇರೆ ನಿಗಮಗಳಿಗೆ ವರ್ಗಾವಣೆಯಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಆದರೆ, ಬಿಎಂಟಿಸಿಯಲ್ಲಿ ಕೆಲಸ ಮಾಡುವ ಚಾಲಕರು ಮತ್ತು ನಿರ್ವಾಹಕರಲ್ಲಿ ಶೇ 80ರಷ್ಟು ನೌಕರರು ಉತ್ತರ ಕರ್ನಾಟಕ ಭಾಗದವರಾಗಿದ್ದಾರೆ. ಇವರು ಕೆಲಸ ಮಾಡಬಾರದು ಎಂದು ನಿರ್ಧರಿಸಿದರೆ ಬಿಎಂಟಿಸಿ ಮುಚ್ಚಬೇಕಾಗುತ್ತದೆ. ಸರ್ಕಾರ ಕಾಯ್ದೆಯನ್ನು ತೆಗೆದುಹಾಕುವ ಹುನ್ನಾರ ನಡೆಸುತ್ತಿದೆಯೇ ಮತ್ತು ಯಾವ ಅಧಿಕಾರದ ಅಡಿಯಲ್ಲಿ ಚರ್ಚೆ ನಡೆಸಲು ಬಯಸುತ್ತಿದ್ದಾರೆ ಎಂದು ತಿಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ಬೇಡಿಕೆ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಖಂಡರಾದ ರಾಘವೇಂದ್ರ ಕುಷ್ಟಗಿ, ಡಾ.ವಿ.ಎ.ಮಾಲಿಪಾಟೀಲ, ಭೀಮರಾಯ ಜರದಬಂಡಿ, ಜೆ.ಬಿ.ರಾಜು, ಎಂ.ಆರ್.ಬೇರಿ, ಜಾನ್‌ವೆಸ್ಲಿ, ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT