ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಯೋಗವನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ’

ಕಾಂಗ್ರೆಸ್‌ ವಿರುದ್ಧ ಮತ್ತೆ ಹರಿಹಾಯ್ದ ಪ್ರಧಾನಿ ಮೋದಿ
Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಡೋದರಾ: ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕ ಪ್ರಕಟಿಸುವಾಗಲೇ ಗುಜರಾತ್‌ ಚುನಾವಣೆಯ ವೇಳಾಪಟ್ಟಿ ಪ್ರಕಟಿಸದ ಚುನಾವಣಾ ಆಯೋಗವನ್ನು ಪ್ರಶ್ನಿಸಿರುವ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಸಾಂವಿಧಾನಿಕ ಸಂಸ್ಥೆಯನ್ನು ಪ್ರಶ್ನಿಸುವ ನೈತಿಕ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದು ಅವರು ಹೇಳಿದರು.

ಹಿಮಾಚಲ ಪ್ರದೇಶದ ವಿಧಾನಸಭೆಯ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಅಕ್ಟೋಬರ್‌ 12ರಂದು ಘೋಷಿಸಿತ್ತು. ಆದರೆ ಗುಜರಾತ್‌ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿರಲಿಲ್ಲ. ಡಿಸೆಂಬರ್‌ 18ರ ಒಳಗೆ ಗುಜರಾತ್‌ನಲ್ಲೂ ಚುನಾವಣೆ ನಡೆಯಲಿದೆ ಎಂದಷ್ಟೇ ಹೇಳಿತ್ತು.

ಆಯೋಗದ ಈ ನಿರ್ಧಾರವನ್ನು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ನಾಯಕ ಪಿ. ಚಿದಂಬರಂ ಹಾಗೂ ಪಕ್ಷದ ಇತರ ಮುಖಂಡರು ಪ್ರಶ್ನಿಸಿದ್ದರು.

ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮುನ್ನ ಪ್ರಧಾನಿ ಅವರು ತಮ್ಮ ತವರು ರಾಜ್ಯಕ್ಕೆ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲು ಅವಕಾಶ ನೀಡುವುದಕ್ಕಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸದಂತೆ ಚುನಾವಣಾ ಆಯೋಗದ ಮೇಲೆ ಕೇಂದ್ರ ಸರ್ಕಾರ ಒತ್ತಡ ಹಾಕಿದೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದರು.

‘ದೀಪಾವಳಿಯ ನಂತರ ಮೋದಿ ಯಾಕೆ ಗುಜರಾತ್‌ಗೆ ಭೇಟಿ ನೀಡುತ್ತಿದ್ದಾನೆ ಎಂದು ವಿರೋಧ ಪಕ್ಷದಲ್ಲಿ ಕೆಲವರು ಕಳವಳಗೊಂಡಿದ್ದಾರೆ. ಅವರಿಗೆ ನನ್ನ ಬಗ್ಗೆ ಏನೂ ಹೇಳಲು ಆಗುವುದಿಲ್ಲ. ಹಾಗಾಗಿ, ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂದು ಹೇಳಿದ ಮೋದಿ, ‘ನೀವೇ ಹೇಳಿ, ನಾನು ವಡೋದರಾಕ್ಕೆ ಬರಬಾರದಾ’ ಎಂದು ಸಭಿಕರನ್ನು ಪ್ರಶ್ನಿಸಿದರು.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡ ಅಹ್ಮದ್‌ ಪಟೇಲ್‌ ಅವರು ಬಲವಂತ ಸಿನ್ಹ ರಜಪೂತ್‌ ವಿರುದ್ಧ ಗೆದ್ದುದನ್ನೂ ಅವರು ಪ್ರಸ್ತಾಪಿಸಿದರು.

‘ಇತ್ತೀಚಿನ ಚುನಾವಣೆಯಲ್ಲಿ ಮತಗಳ ಎಣಿಕೆ ಮುಗಿದಿತ್ತು. ಗೆದ್ದವರು ಯಾರು ಎಂದು ಸುದ್ದಿ ವಾಹಿನಿಗಳು ತೋರಿಸುತ್ತಿದ್ದವು. ಆದರೆ ಕಾಂಗ್ರೆಸ್‌ನವರು ನಂತರ ಏನೋ ಮಾಡಿದರು. ಆ ಬಳಿಕ ಮರು ಎಣಿಕೆ ನಡೆಯಿತು. ಅದರಲ್ಲಿ ಅವರು ಗೆದ್ದರು’ ಎಂದರು.

‘ಮೋದಿ ಯಾಕೆ ಗುಜರಾತ್‌ಗೆ ಹೋಗುತ್ತಾರೆ ಎಂದು ಮರು ಎಣಿಕೆಯಲ್ಲಿ ಗೆದ್ದವರು ಈಗ ಚುನಾವಣಾ ಆಯೋಗವನ್ನು ಕೇಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ವಡೋದಾರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ‘ವಿರೋಧ ಪಕ್ಷದವರು ಇದುವರೆಗೆ ಇಂತಹ ಅಭಿವೃದ್ಧಿ ಕಾರ್ಯಗಳನ್ನು ನೋಡಿಲ್ಲ, ಕೇಳಿಲ್ಲ. ಇವುಗಳನ್ನು ಜೀರ್ಣಿಸಲು ಅವರು ಕಷ್ಟಪಡುತ್ತಿದ್ದಾರೆ ಎಂದರು.

‘2014ರ ಲೋಕಸಭಾ ಚುನಾವಣೆಗಿಂತಲೂ ಮೊದಲು, ಒಂದು ಪಕ್ಷವು ತನ್ನ ಚುನಾವಣಾ ಭರವಸೆಗಳ ಬಗ್ಗೆ ನಿರ್ಧರಿಸಲು ಆಂತರಿಕ ಸಭೆ ನಡೆಸಿತ್ತು. ಅದು ಕೈಗೊಂಡ ತೀರ್ಮಾನ ಏನು ಗೊತ್ತೇ? ಒಂಬತ್ತರ ಬದಲಾಗಿ 12 ಸಬ್ಸಿಡಿ ಅಡುಗೆ ಸಿಲಿಂಡರ್‌ಗಳನ್ನು ನೀಡುತ್ತೇವೆ ಎಂದು ಅದು ಘೋಷಿಸಿತು’ ಎಂದು ಹೇಳಿದರು.

‘ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ಅವರಿಂದ ಯೋಚಿಸಲು ಸಾಧ್ಯವಿಲ್ಲ. ಆದರೆ, ಬೇರೆ ಕೆಲವು ಕೆಲಸಗಳನ್ನು ಮಾಡುವ ಸಾಮರ್ಥ್ಯ ಅವರಿಗೆ ಖಂಡಿತ ಇದೆ... 2013ಕ್ಕೂ ಮೊದಲಿನ ದಿನಪತ್ರಿಕೆಗಳ ತಲೆಬರಹಗಳನ್ನು ನೋಡಿ. ಪ್ರತಿ ದಿನವೂ ಹಗರಣಗಳ ಬಗ್ಗೆಯೇ ಸುದ್ದಿ ಬರುತ್ತಿತ್ತು’ ಎಂದು ಕಾಂಗ್ರೆಸ್‌ ಮುಖಂಡರನ್ನು ಟೀಕಿಸಿದರು.

ಈ ಸಂದರ್ಭದಲ್ಲಿ ₹1,141 ಕೋಟಿಯ ವಿವಿಧ ಯೋಜನೆಗಳಿಗೆ ಅವರು ಚಾಲನೆ ನೀಡಿದರು.

ರೋಡ್‌ ಷೋ: ಕಾರ್ಯಕ್ರಮದ ಬಳಿಕ ಮೋದಿ ಅವರು ವಡೋದರಾದ ನಾವ್‌ಲಖಿ ಮೈದಾನದಿಂದ ವಡೋದರಾ ವಿಮಾನ ನಿಲ್ದಾಣದ ವರೆಗೆ ರೋಡ್‌ ಷೋ ನಡೆಸಿದರು.

‘ಅಭಿವೃದ್ಧಿ ವಿರೋಧಿ ರಾಜ್ಯಗಳಿಗೆ ನೆರವಿಲ್ಲ’

‘ಸಾರ್ವಜನಿಕರ ಹಣವನ್ನು ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ನಮ್ಮ ಸರ್ಕಾರ ದೃಢವಾಗಿ ನಂಬಿದೆ. ಅಭಿವೃದ್ಧಿಗೆ ಆದ್ಯತೆ ನೀಡುವ ರಾಜ್ಯಗಳಿಗೆ ನಮ್ಮ ಸರ್ಕಾರ ಎಲ್ಲ ರೀತಿಯ ನೆರವನ್ನೂ ನೀಡಲಿದೆ. ಆದರೆ, ಅಭಿವೃದ್ಧಿಯನ್ನು ವಿರೋಧಿಸುವ ರಾಜ್ಯಗಳಿಗೆ ನಾವು ಏನೂ ಕೊಡುವುದಿಲ್ಲ’ ಎಂದು ಪ್ರಧಾನಿ ಮೋದಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT