ದಾರದೊಂದಿಗೆ ರಮ್ಯ ಸಾಂಗತ್ಯ

ಶುಕ್ರವಾರ, ಜೂನ್ 21, 2019
22 °C

ದಾರದೊಂದಿಗೆ ರಮ್ಯ ಸಾಂಗತ್ಯ

Published:
Updated:
ದಾರದೊಂದಿಗೆ ರಮ್ಯ ಸಾಂಗತ್ಯ

ಒಂದಿಲ್ಲೊಂದು ಆಸಕ್ತಿಯನ್ನು ಮೈಗೂಡಿಸಿಕೊಳ್ಳುವುದು ಮನುಷ್ಯನ ಸಹಜ ಗುಣ. ಆಸಕ್ತಿಯ ಬೆನ್ನು ಹತ್ತಿ ಹೊಸತನ್ನು ತಯಾರಿಸುವ ಉಮೇದು ಅಲ್ಲಿಂದ ಶುರುವಾಗುತ್ತದೆ. ಹವ್ಯಾಸದ ಈ ಉಮೇದಿಗೆ ಹೆಚ್ಚು ಜನ ತೆರೆದುಕೊಂಡಿದ್ದು ರೇಷ್ಮೆ ದಾರಗಳಿಗೆ.

ಆಭರಣ ಪ್ರಿಯ ಮನಸ್ಸುಗಳು ತಮ್ಮ ಕೆಲಸದ ಒತ್ತಡದಲ್ಲಿಯೂ ತುಸು ಸಮಯ ಮಾಡಿಕೊಂಡು ರೇಷ್ಮೆ ದಾರದಿಂದ ಆಭರಣ ತಯಾರಿಸುವುದನ್ನು ಪ್ರಾರಂಭಿಸಿದ್ದಾರೆ. ಇನ್ನು ಕೆಲವರು ಒತ್ತಡದ ಕಚೇರಿ ಕೆಲಸದಿಂದ ವಿಮುಖಗೊಂಡು ಸಮಾಧಾನ ಕೊಡುವ ಆಭರಣ ಲೋಕದಲ್ಲಿಯೇ ಒಂದಾಗುತ್ತಿದ್ದಾರೆ. ಅಂಥವರಲ್ಲಿ ನಗರದ ರಮ್ಯಾ ಕೂಡ ಒಬ್ಬರು.

ಕುಂದಾಪುರ ಮೂಲದ ರಮ್ಯಾ ಹತ್ತು ವರ್ಷಗಳ ಹಿಂದೆ ಪದವಿ ಮುಗಿಸಿ ಬೆಂಗಳೂರಿಗೆ ಬಂದರು. ಎಸಿಸಿ ಸಿಮೆಂಟ್‌ ಕಂಪೆನಿಯಲ್ಲಿ ಐದು ವರ್ಷ ಅಕೌಂಟೆಂಟ್‌ ಆಗಿ ಕೆಲಸ ಮಾಡಿದರು. ಇನ್ನೆರಡು ವರ್ಷ ಹೋಂಡಾ ಶೋ ರೂಂನಲ್ಲಿಯೂ ಕೆಲಸ ಮಾಡಿದರು. ಯಾವುದಕ್ಕೂ ಬಿಡುವು ಸಿಗದ ಬ್ಯುಸಿ ಕೆಲಸವದು. ಹೀಗಾಗಿ ಅವರ ಬಹುದಿನದ ಆಸೆಯಾಗಿದ್ದ ಟೇಲರಿಂಗ್‌ ಕಲಿಯುವುದು ಸಾಧ್ಯವಾಗಲೇ ಇಲ್ಲ.

ಕಚೇರಿ ಕೆಲಸದಲ್ಲಿ ಹಣ ಸಂಪಾದನೆ ಇದೆಯಾದರೂ ಮನಸ್ಸಿಗೆ ನೆಮ್ಮದಿ ಇಲ್ಲ ಎಂಬುದು ಅವರ ಕೊರಗಾಗಿತ್ತು. ಅದೂ ಅಲ್ಲದೆ ಮನಸ್ಸು ಬಯಸುವ ಯಾವ ಹವ್ಯಾಸದಲ್ಲಿಯೂ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಅವರಲ್ಲಿ ಮನೆ ಮಾಡಿತ್ತು. ಅದೇ ಸಮಯಕ್ಕೆ ಅವರ ಮನಸ್ಸು ಪ್ರವೇಶಿಸಿದ್ದು ರೇಷ್ಮೆ ದಾರದಿಂದ ಆಭರಣ ತಯಾರಿಸುವುದು.

‘ಆರು ತಿಂಗಳಿನ ಹಿಂದೆ ಯೂಟ್ಯೂಬ್‌ನಲ್ಲಿ ರೇಷ್ಮೆ ದಾರಗಳಿಂದ ಆಭರಣ ತಯಾರಿಸುವುದರ ಬಗ್ಗೆ ನೋಡಿದೆ. ನಾನು ಆಸೆ ಪಟ್ಟ ಟೇಲರಿಂಗ್‌, ಗುರುವಿಲ್ಲದೆ ಕಲಿಯುವುದು ಅಸಾಧ್ಯ. ಅದಕ್ಕೆ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಂಗಡಿಯಲ್ಲಿ ಸಿಗುವ ಕೆಲವು ಉಪಕರಣಗಳನ್ನು ಜೋಡಿಸಿ ಆಭರಣವನ್ನು ಸುಲಭವಾಗಿ ತಯಾರಿಸಬಹುದು ಎನ್ನುವುದು ಅರಿವಿಗೆ ಬಂತು. ಎಲ್ಲಕ್ಕಿಂತ ಮುಖ್ಯವಾಗಿ ಈ ಕಲೆ ಅರಿಯಲು ಗುರುವೇ ಬೇಕೆಂದಿಲ್ಲ. ಯೂಟ್ಯೂಬ್‌ ಗುರುವಾಯಿತು’ ಎನ್ನುತ್ತಾರೆ.

ಕೆಲಸದ ನಡುವೆಯೂ ಸಮಯ ಮಾಡಿಕೊಂಡು ಆಭರಣ ತಯಾರಿಸುತ್ತಿದ್ದ ರಮ್ಯಾ ಎರಡು ತಿಂಗಳ ಹಿಂದೆ ಕೆಲಸವನ್ನೂ ಬಿಟ್ಟಿದ್ದಾರೆ. ತನಗೆ ಬೇಕಾದ ಆಭರಣಗಳನ್ನು ತಾನೇ ತಯಾರಿಸಿಕೊಂಡು ಖುಷಿ ಪಡುತ್ತಾರೆ. ಇತ್ತೀಚೆಗೆ ಸಂಬಂಧಿಗಳು, ಸ್ನೇಹಿತರೂ ಆಭರಣದ ಸೌಂದರ್ಯ ಕಂಡು ಮೆಚ್ಚಿ ನುಡಿಯುತ್ತಾರೆ. ತಮಗೂ ಮಾಡಿಕೊಡುವಂತೆ ಬೇಡಿಕೆ ಇಡುತ್ತಾರೆ.

ಹೀಗೆ ನಿಧಾನವಾಗಿ ತಮ್ಮ ಕಲೆಗೆ ಪ್ರೋತ್ಸಾಹ ಸಿಗುತ್ತಿರುವುದನ್ನು ಮನಗಂಡ ಅವರು ಇದನ್ನೇ ವೃತ್ತಿಯಾಗಿಸಿಕೊಳ್ಳುವ ಯೋಚನೆಯಲ್ಲೂ ಇದ್ದಾರೆ. ‘ಇಂದಿನ ಪೀಳಿಗೆಗೆ ಕೃತಕ ಆಭರಣಗಳ ಬಗೆಗೆ ಒಲವು ಜಾಸ್ತಿ. ಎಲ್ಲ ದಿರಿಸುಗಳೊಂದಿಗೆ ಈ ಆಭರಣ ಹೊಂದಿಕೊಳ್ಳುವುದರಿಂದ ಎಲ್ಲ ವಯೋಮಾನದವರಿಗೂ ಇಷ್ಟವಾಗಿದೆ. ಅಂದಹಾಗೆ ನೀಲಿ ಬಣ್ಣದ ಆಭರಣಗಳಿಗೆ ಹೆಚ್ಚು ಬೇಡಿಕೆ ಇದೆ’ ಎನ್ನುವ ರಮ್ಯಾ ಸಿಲ್ಕ್‌ ಥ್ರೆಡ್‌ನಲ್ಲಿ ಕಿವಿಯೋಲೆ, ಬಳೆ, ನೆಕ್ಲೆಸ್‌ಗಳನ್ನು ಮಾಡಬಲ್ಲರು. ₹100ರಿಂದ ₹800ವರೆಗೆ ಅವರು ಆಭರಣಗಳಿಗೆ ಬೆಲೆ ನಿಗದಿ ಮಾಡಿದ್ದಾರೆ.

‘ಬದುಕಿಗೆ ದುಡ್ಡಿಗಿಂತ ತೃಪ್ತಿ ಮುಖ್ಯ. ಕಾಲೇಜು ಮುಗಿದಂದಿನಿಂದ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಇದ್ದ ನನಗೆ ಹವ್ಯಾಸ ನೆಮ್ಮದಿ ತಂದುಕೊಟ್ಟಿದೆ’ ಎನ್ನುವ ರಮ್ಯಾ ಸಮಯ ಹಾಳು ಮಾಡುವ ಬದಲು ವಿಭಿನ್ನ ಕಲೆಯಲ್ಲಿ ತೊಡಗಿಕೊಳ್ಳುವುದು ಮುಖ್ಯ ಎಂಬ ಕಿವಿಮಾತನ್ನೂ ನೀಡುತ್ತಾರೆ. → ಇಮೇಲ್- surajramya2008@yahoo.com

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry