ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರತ್ತು ವಿಧಿಸಿದ ಹಾರ್ದಿಕ್ ಪಟೇಲ್

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಮುಂಬರುವ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸುವಂತೆ ಆಹ್ವಾನ ನೀಡಿರುವ ಕಾಂಗ್ರೆಸ್‌ಗೆ ಪಟೇಲ್‌ ಮೀಸಲಾತಿ ಹೋರಾಟಗಾರರ ಮುಖಂಡ ಹಾರ್ದಿಕ್‌ ಪಟೇಲ್‌ ಅವರು ಹಲವು ಷರತ್ತುಗಳನ್ನು ಮುಂದಿಟ್ಟಿದ್ದಾರೆ.

ಚುನಾವಣೆಯಲ್ಲಿ ಬೆಂಬಲಿಸಬೇಕಾದರೆ ಸರ್ಕಾರಿ ಕೆಲಸಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪಟೇಲ್‌ ಸಮುದಾಯದವರಿಗೆ ಮೀಸಲಾತಿ ನೀಡುವ ಭರವಸೆಯನ್ನು ನೀಡಬೇಕು ಎಂಬ ಪ್ರಮುಖ ಷರತ್ತನ್ನು ಹಾರ್ದಿಕ್‌ ಹಾಕಿದ್ದಾರೆ.

ಪಟೇಲರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್‌ ನೀಡಬೇಕು ಎಂದು ಅವರು ಹೇಳಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ‌ಗುಜರಾತ್‌ನಲ್ಲಿ ಪಕ್ಷದ ಉಸ್ತುವಾರಿ ಅಶೋಕ್‌ ಗೆಹ್ಲೋಟ್‌ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಹಾರ್ದಿಕ್‌ ಈ ಬೇಡಿಕೆಗಳನ್ನು ಇಟ್ಟಿದ್ದಾರೆ.

ರಾಜಕೀಯವಾಗಿ ಪ್ರಭಾವಿಯಾಗಿರುವ ಪಟೇಲ್‌ ಸಮುದಾಯ ಈವರೆಗೆ ಬಿಜೆಪಿಯನ್ನು ಬೆಂಬಲಿಸುತ್ತಿತ್ತು. ಈಗ ಕಾಂಗ್ರೆಸ್‌ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು ಎಂದು ಹಾರ್ದಿಕ್‌ ಅವರು ಕೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಸ್ತುತ, ಗುಜರಾತ್‌ ಕಾಂಗ್ರೆಸ್‌ನಲ್ಲಿ ಪಟೇಲ್‌ ಸಮುದಾಯಕ್ಕೆ ಅತ್ಯಂತ ಕಡಿಮೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ಹಾರ್ದಿಕ್‌ ಪಟೇಲ್‌ ತಿಳಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಪಟೇಲ್‌ ಸಮುದಾಯಕ್ಕೆ ನೀಡಲಾಗುವ ಮೀಸಲಾತಿಯನ್ನು ನ್ಯಾಯಾಂಗ ಪರಿಶೀಲನಾ ಪ್ರಕ್ರಿಯೆಯಿಂದ ಹೊರಗಿಡುವುದಕ್ಕಾಗಿ ಮೀಸಲಾತಿಯ ನಿಯಮಗಳಿಗೆ ಸಾಂವಿಧಾನಿಕ ರಕ್ಷಣೆಯನ್ನೂ ನೀಡಬೇಕು ಎಂದೂ ಹಾರ್ದಿಕ್‌ ಕೇಳಿಕೊಂಡಿದ್ದಾರೆ.

‘ಹಾರ್ದಿಕ್‌ ಪಟೇಲ್‌ ಹಾಗೂ ಅವರ ಸಹವರ್ತಿಗಳೊಂದಿಗೆ ನಡೆಸಿದ ಮಾತುಕತೆ ಉತ್ತಮವಾಗಿತ್ತು’ ಎಂದು ಗೆಹ್ಲೋಟ್‌ ಸೋಮವಾರ ರಾತ್ರಿ ಟ್ವೀಟ್‌ ಮಾಡಿದ್ದರು.

ಗೆಹ್ಲೋಟ್‌ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾಗಿ ಹಾರ್ದಿಕ್‌ ಪಟೇಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ರಾಹುಲ್‌ ಭೇಟಿಯಾಗಿಲ್ಲ’

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ತಾವು ಸೋಮವಾರ ರಹಸ್ಯವಾಗಿ ಭೇಟಿ ಮಾಡಿರುವುದಾಗಿ ಮಾಧ್ಯಮಗಳಲ್ಲಿ ಬಂದ ವರದಿಗೆ ಸ್ಪಷ್ಟನೆ ನೀಡಿರುವ ಹಾರ್ದಿಕ್‌ ಪಟೇಲ್‌, ರಾಹುಲ್‌ ಅವರನ್ನು ತಾವು ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಮುಂದಿನ ಬಾರಿ ಗುಜರಾತ್‌ಗೆ ಬಂದಾಗ ಅವರನ್ನು ಭೇಟಿಯಾಗುವುದಾಗಿ ಅವರು ಹೇಳಿದ್ದಾರೆ.

ಪಂಚತಾರಾ ಹೋಟೆಲ್‌ನಲ್ಲಿ ಗೆಹ್ಲೋಟ್‌ ಅವರೊಂದಿಗೆ ಮಾತುಕತೆ ನಡೆಸಲು ಹಾರ್ದಿಕ್‌ ಪಟೇಲ್‌ ಹೋಗಿದ್ದಾಗ ಅದೇ ಹೋಟೆಲ್‌ನಲ್ಲಿದ್ದ ರಾಹುಲ್‌ ಗಾಂಧಿ ಅವರೊಂದಿಗೂ ಮಾತುಕತೆ ನಡೆಸಿದ್ದರು ಎಂಬ ವದಂತಿ ಹಬ್ಬಿತ್ತು.

ಹಾರ್ದಿಕ್‌ ಅವರು ಹೋಟೆಲ್‌ ಪ್ರವೇಶಿಸುವ ಮತ್ತು ಅಲ್ಲಿಂದ ತೆರಳುವ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದ್ದ ಸುದ್ದಿ ವಾಹಿನಿಗಳು, ಹಾರ್ದಿಕ್‌ ಅವರು ರಹಸ್ಯವಾಗಿ ರಾಹುಲ್‌ ಅವರನ್ನೂ ಭೇಟಿ ಮಾಡಿದ್ದಾರೆ ಎಂದು ವರದಿ ಮಾಡಿದ್ದವು.

ದೃಶ್ಯಾವಳಿಗಳು ಪ್ರಸಾರವಾಗುತ್ತಿದ್ದಂತೆ ಟ್ವೀಟ್‌ ಮಾಡಿದ ಅಶೋಕ್‌ ಗೆಹ್ಲೋಟ್‌, ಹಾರ್ದಿಕ್‌ ಅವರು ತಮ್ಮನ್ನು ಭೇಟಿ ಮಾಡಲು ಬಂದಿದ್ದರು ಎಂದು ಹೇಳಿದ್ದಾರೆ.

ನಂತರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಗೆಹ್ಲೋಟ್‌, ಬಿಜೆಪಿಯು ಕಾಂಗ್ರೆಸ್‌ ಮುಖಂಡರನ್ನು ಹಿಂಬಾಲಿಸುತ್ತಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT