ಶುಕ್ರವಾರ, ಸೆಪ್ಟೆಂಬರ್ 20, 2019
25 °C
ಪಿಇಎಸ್‌ ವಿಶ್ವವಿದ್ಯಾಲಯ

‘ಓದು ಸಾರ್ಥಕ ಎನಿಸಿಕೊಳ್ಳುವ ಸಂದರ್ಭ’

Published:
Updated:
‘ಓದು ಸಾರ್ಥಕ ಎನಿಸಿಕೊಳ್ಳುವ ಸಂದರ್ಭ’

ಬೆಂಗಳೂರು: ‘ನಮ್ಮ ಓದು ಸಾರ್ಥಕ ಎನಿಸಿಕೊಳ್ಳುವ ಸಂದರ್ಭಗಳಲ್ಲಿ ಇದೂ ಒಂದು. ಕಲಿಕೆಗೆ ಉತ್ತಮ ವಾತಾವರಣ ಇರುವುದರಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಬಿ.ಆರ್ಕ್‌ ಎರಡನೇ ಸೆಮಿಸ್ಟರ್‌ ವಿದ್ಯಾರ್ಥಿನಿ ಅನಘಾ ಅರುಣ್‌ ಕುಮಾರ್‌ ಸಂತಸ ಹಂಚಿಕೊಂಡರು.

ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೊ. ಸಿ.ಎನ್‌.ಆರ್‌. ರಾವ್‌ ಮತ್ತು ಪ್ರೊ ಎಂ.ಆರ್‌.ಡಿ ಪ್ರತಿಭಾ ಪುರಸ್ಕಾರ ಪಡೆದು ಅವರು ಮಾತನಾಡಿದರು.

‘ಮೊದಲ ಸೆಮಿಸ್ಟರ್‌ನಲ್ಲಿಯೂ ಎರಡೂ ವಿದ್ಯಾರ್ಥಿ ವೇತನ ಪಡೆದಿದ್ದೆ. ಈ ಬಾರಿಯೂ ಬಂದಿದೆ. ವಾರ್ಷಿಕ ಪ್ರಶಸ್ತಿಗಿಂತ ಪ್ರತಿ ಸೆಮಿಸ್ಟರ್‌ಗೆ ಈ ರೀತಿ ಪುರಸ್ಕಾರ ನೀಡುವುದು ಓದಿಗೆ ಪ್ರೇರಣೆಯಾಗುತ್ತದೆ’ ಎಂದು ಹೇಳಿದರು.

ಬಿ.ಡಿಸೈನ್‌ ವಿಭಾಗದ ಪೂಜಿನಾ ಪ್ರಸನ್ನ, ‘ಸೆಮಿಸ್ಟರ್‌ನಿಂದ ಸೆಮಿಸ್ಟರ್‌ಗೆ ಸ್ಪರ್ಧೆ ಹೆಚ್ಚಾಗುತ್ತಿದೆ. ಇಲ್ಲಿನ ಶಿಕ್ಷಕರ ವರ್ಗ ಅತ್ಯತ್ತಮವಾಗಿದೆ. ಅದರೊಂದಿಗೆ ಈ ರೀತಿಯ ವಿದ್ಯಾರ್ಥಿ ವೇತನ ನೀಡುವ ಪ್ರಕ್ರಿಯೆ ನಮ್ಮನ್ನು ಇನ್ನೂ ಓದಿನಡೆಗೆ ಆಕರ್ಷಿಸುತ್ತದೆ’ ಎಂದು ಹೇಳಿದರು.

ಬಿಬಿಎ ಎರಡನೇ ಸೆಮಿಸ್ಟರ್‌ ವಿದ್ಯಾರ್ಥಿ ಅಭಿಮಾನ್, ‘ಕಾಲೇಜಿನಲ್ಲಿಯೇ ಉತ್ತಮ ಶಿಕ್ಷಣ ದೊರೆಯುತ್ತಿರುವುದರಿಂದ ಮತ್ತೆ ಮನೆಯಲ್ಲಿ ತಾಸುಗಟ್ಟಲೇ ಪುಸ್ತಕದ ಮುಂದೆಯೇ ಕೂರುವ ಅಗತ್ಯವಿಲ್ಲ. ಈ ಬಾರಿ ಎರಡು ವಿದ್ಯಾರ್ಥಿ ವೇತನ ಪಡೆದಿದ್ದೇನೆ. ಆದರೆ, ವೇದಿಕೆಯಲ್ಲಿ ಒಂದನ್ನು ಮಾತ್ರ ಘೋಷಿಸಿದ್ದಾರೆ. ಯಾಕೆ ಎಂದು ತಿಳಿಯಲಿಲ್ಲ’ ಎಂದು ಆಂತಕ ವ್ಯಕ್ತಪಡಿಸಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ಈಗಿನ ಯುವಜನತೆ ಸುಲಭವಾಗಿ ಪ್ರಚೋದನೆಗೆ ಒಳಗಾಗುತ್ತಾರೆ. ಆ ಪ್ರವೃತ್ತಿ ಕಡಿಮೆಯಾಗಬೇಕು’ ಎಂದು  ಸಲಹೆ ನೀಡಿದರು.

‘ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ನಮ್ಮೊಂದಿಗೆ ನಮ್ಮ ಕುಟುಂಬವೂ ಇರುತ್ತದೆ ಎನ್ನುವ ಅರಿವು ಇರಬೇಕು. ಒಬ್ಬನ ಪ್ರಾಣ ತೆಗೆಯಲು ಒಂದು ಹನಿ ವಿಷ ಸಾಕು. ಹಾಗಾಗಿ ಯೋಚಿಸದೆ ಯಾವುದೇ ನಿರ್ಧಾರ ಕೈಗೊಳ್ಳಬೇಡಿ’ ಎಂದು ಸಲಹೆ ನೀಡಿದರು.

‘ನಡವಳಿಕೆ, ಸಂಸ್ಕಾರ ಮತ್ತು ಮನೋಭಾವ ಮೂರು ಸೇರಿ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಉತ್ತಮ ಮನೋಭಾವ ರೂಢಿಸಿಕೊಳ್ಳುವುದು ಬಹಳ ಮುಖ್ಯ. ಅದಿಲ್ಲದಿದ್ದರೆ ಎಲ್ಲವೂ ಶೂನ್ಯ. ಸಮಾಜದಿಂದ ಪಡೆಯುವುದಷ್ಟೇ ಅಲ್ಲ, ಕೊಡುಗೆ ನೀಡುವುದನ್ನು ತಿಳಿದಿರಬೇಕು. ಸಮಾಜಸೇವೆಗೆ ಹಣವೊಂದೇ ಮಾನದಂಡವಲ್ಲ’ ಎಂದು ಹೇಳಿದರು.

1,023 ವಿದ್ಯಾರ್ಥಿಗಳಿಗೆ ಪುರಸ್ಕಾರ

ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ 1,023 ವಿದ್ಯಾರ್ಥಿಗಳಿಗೆ ಸಿ.ಎನ್‌.ಆರ್. ರಾವ್‌ ಹಾಗೂ ಎಂ.ಆರ್‌.ಡಿ. ವಿದ್ಯಾರ್ಥಿವೇತನ ನೀಡಲಾಯಿತು. ವಿದ್ಯಾರ್ಥಿವೇತನದ ಒಟ್ಟು ಮೊತ್ತ ₹ 2.19 ಕೋಟಿ.

ಪ್ರೊ. ಸಿ.ಎನ್‌.ಆರ್‌. ರಾವ್‌ ವಿದ್ಯಾರ್ಥಿವೇತನ ಕನಿಷ್ಠ ₹ 8,000 ದಿಂದ ಗರಿಷ್ಠ ₹ 90,000ದವರೆಗೆ ಇದೆ. ಇನ್ನು ಸಂಶೋಧನಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ಪ್ರತಿ ವಿಭಾಗದ 5 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ.

Post Comments (+)