ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಳಿಯಾರ್: ಸರ್ಕಾರಿ ಬಸ್ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ

Last Updated 25 ಅಕ್ಟೋಬರ್ 2017, 8:40 IST
ಅಕ್ಷರ ಗಾತ್ರ

ಮುಡಿಪು: ಬೋಳಿಯಾರ್ ಪ್ರದೇಶಕ್ಕೆ ಮತ್ತೆ ಸರ್ಕಾರಿ ಬಸ್ ಪುನಾರಂಭಗೊಳಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಸೋಮವಾರ ಬೋಳಿಯಾರ್‌ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಮಾತನಾಡಿ, ‘ನಾವು ಖಾಸಗಿ ಬಸ್‌ ಮಾಲೀಕರ ವಿರೋಧಿಗಳಲ್ಲ. ಯಾರ ವಿರುದ್ಧವೂ ಪ್ರತಿಭಟನೆ ಅಲ್ಲ. ನಮ್ಮ ಹೋರಾಟ ಸರ್ಕಾರಿ ಬಸ್‌ ಮತ್ತೆ ಬರಬೇಕು ಎನ್ನುವುದು. ಬೋಳಿಯಾರ್‌ನ ಅಮ್ಮೆಂಬಳ ದರ್ಗಾ ಬಳಿಯಿಂದ ಮಂಗಳೂರಿಗೆ ಹೋಗಲು ಪರ್ಯಾಯ ಸರ್ಕಾರಿ ಬಸ್‌ ಸಂಚಾರ ಪುನಾರಂಭಗೊಳ್ಳಬೇಕು ಇಲ್ಲದಿದ್ದರೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

‘ಅಮ್ಮೆಂಬಳ ದರ್ಗಾಕ್ಕೆ ಬಸ್‌ ಸಂಚಾರ ಆರಂಭಗೊಂಡಿದ್ದರೂ ಕೇವಲ 45 ದಿನಗಳಲ್ಲೇ ಸಂಚಾರ ರದ್ದುಗೊಂಡಿದೆ. ಕೋರ್ಟ್‌ನಿಂದ ತಡೆಯಿಲ್ಲ, ಜನಸಂಚಾರ ಆಧರಿಸಿ ಸಂಚಾರ ಆರಂಭಿಸುವಂತೆ ಸೂಚನೆ ನೀಡಿದ್ದರೂ ಜಿಲ್ಲಾಡಳಿತ ತಡೆಯಾಜ್ಞೆ ಬಗ್ಗೆ ಹೇಳುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ವಿಮರ್ಶಿಸಬೇಕು. ಈ ಭಾಗಕ್ಕೆ 2009ರಿಂದಲೂ 25 ಸರ್ಕಾರಿ ಬಸ್‌ಗಳ ಪರವಾನಿಗೆ ಇದ್ದರೂ ತಡೆಯಿಂದ ಸಂಚಾರ ಸಾಧ್ಯವಾಗಿಲ್ಲ’ ಎಂದು ಹೋರಾಟಗಾರ ಜಗದೀಶ ಆಳ್ವ ಕೂವೆತ್ತಬೈಲ್ ತಿಳಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬೋಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಆಚಾರ್ಯ ಮಾತನಾಡಿ, ‘ಹೋರಾಟದಲ್ಲಿ ನಾನು ಗ್ರಾಮಸ್ಥರ ಜೊತೆಗಿದ್ದು, 12 ವರ್ಷಗಳ ಹಿಂದೆಯೂ ಇಂತಹದ್ದೇ ಹೋರಾಟ ನಡೆಸಿದ್ದೇನೆ. ಸಂಸದ, ಶಾಸಕ, ತಾಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರೂ ಸಹಕಾರ ನೀಡಲಿ’ ಎಂದರು.

ಕುರ್ನಾಡು ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಬೋಳಿಯಾರ್ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ ಗಟ್ಟಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಅಸ್ಗರ್ ಸಾಂಬಾರ್‍ತೋಟ, ರಿಯಾಝ್ ರಂತಡ್ಕ, ಪಾವುಲ್ ಡಿಸೋಜ, ವಿಜಯಾ ಶೆಟ್ಟಿ, ಕುರ್ನಾಡ್ ಗ್ರಾ.ಪಂ. ಉಪಾಧ್ಯಕ್ಷ ನಿತಿನ್ ಗಟ್ಟಿ, ಸದಸ್ಯ ಶಿವಶಂಕರ್ ಭಟ್, ಮುಖಂಡರಾದ ಇಸ್ಮಾಯಿಲ್ ಕಡುವಾಯಿ, ಭಾಸ್ಕರ ಶೆಟ್ಟಿ, ಅಬೂಬಕ್ಕರ್, ಜಯಂತ್ ಪಾದಲ್ಪಾಡಿ, ಅಶ್ರಫ್, ಅಬೂಬಕ್ಕರ್ ರಂತಡ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT