ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಗೂಗಲ್‌ ಆ್ಯಪ್‌ ಹಿಸ್ಟರಿ ಕ್ಲಿಯರ್‌ ಮಾಡುವುದು ಹೇಗೆ?

Published:
Updated:
ಗೂಗಲ್‌ ಆ್ಯಪ್‌ ಹಿಸ್ಟರಿ ಕ್ಲಿಯರ್‌ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ನಿಮ್ಮ ಹುಡುಕಾಟ, ಚಲನವಲನ, ಅಭಿರುಚಿಗಳನ್ನು ನೆನಪಿಟ್ಟುಕೊಳ್ಳುವ ಗೂಗಲ್‌ ಆ್ಯಪ್ ಅದರ ಆಧಾರದ ಮೇಲೆ ನಿಮ್ಮ ನೆರವಿಗೂ ಬರುತ್ತಿರುತ್ತದೆ. ನೀವು ಕಚೇರಿಗೆ ಹೊರಡುವ ವೇಳೆಗೆ ನೀವು ಸಾಗುವ ಮಾರ್ಗದ ಸಂಚಾರ ದಟ್ಟಣೆ ಮಾಹಿತಿಯಿಂದ ಹಿಡಿದು ಯಾವ ಯಾವ ಆಫರ್‌ಗಳು ನಿಮಗೆ ಇಷ್ಟವಾಗಬಹುದು ಎಂಬುದರವರೆಗೆ ಗೂಗಲ್‌ ಆ್ಯಪ್‌ ನಿಮಗೆ ಅಪ್‌ಡೇಟ್‌ಗಳನ್ನು ನೀಡುತ್ತಿರುತ್ತದೆ.

ನಿಮ್ಮ ಇತ್ತೀಚಿನ ಗೂಗಲ್‌ ಹುಡುಕಾಟದ ವೆಬ್‌ಪೇಜ್‌ಗಳು ಗೂಗಲ್‌ ಆ್ಯಪ್‌ನಲ್ಲಿ ಸ್ಕ್ರೀನ್‌ ಶಾಟ್‌ ಆಗಿ ಸೇವ್‌ ಆಗಿರುತ್ತವೆ. ಈ ಹುಡುಕಾಟದ ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ.

ನಿಮ್ಮ ಡಿವೈಸ್‌ನಲ್ಲಿರುವ ಗೂಗಲ್‌ ಆ್ಯಪ್‌ನಲ್ಲಿ ಇತ್ತೀಚಿನ ಹುಡುಕಾಟ Recent ವಿಭಾಗದಲ್ಲಿ ಸೇವ್‌ ಆಗಿರುತ್ತದೆ. ಇದನ್ನು ನೋಡಲು ಗೂಗಲ್‌ ಆ್ಯಪ್‌ ತೆರೆಯಿರಿ. ಹೋಮ್‌ ಪೇಜ್‌ನಲ್ಲಿ ಎಡಕ್ಕೆ ಕಾಣುವ ಮೂರು ಗೆರೆಗಳ ಮೆನು ಮೇಲೆ ಕ್ಲಿಕ್‌ ಮಾಡಿ. ಈಗ ಕಾಣುವ ಆಯ್ಕೆಗಳಲ್ಲಿ ಮೊದಲಿಗೆ ಕಾಣುವ Recent ಮೇಲೆ ಕ್ಲಿಕ್ಕಿಸಿ. ಈಗ ನೀವು ಇತ್ತೀಚೆಗೆ ಭೇಟಿ ನೀಡಿರುವ ವೆಬ್‌ಪೇಜ್‌ಗಳ ಸ್ಕ್ರೀನ್‌ಶಾಟ್‌ಗಳು ಒಂದರ ಪಕ್ಕ ಒಂದು ಕಾಣಿಸಿಕೊಳ್ಳುತ್ತವೆ. ಈ ಸ್ಕ್ರೀನ್‌ ಶಾಟ್‌ಗಳನ್ನು ಮೇಲಕ್ಕೆ ಎಳೆದರೆ (ಸ್ವೈಪ್‌) ಆ್ಯಪ್‌ನ Recent ವಿಭಾಗದ ಹಿಸ್ಟರಿ ಕ್ಲಿಯರ್‌ ಆಗುತ್ತದೆ.

ನಿಮ್ಮ ಡಿವೈಸ್‌ ಮೂಲಕ ಗೂಗಲ್‌ ಗಮನಿಸಿರುವ ಈ ಹಿಂದಿನ ನಿಮ್ಮ ಎಲ್ಲಾ ಚಟುವಟಿಕೆ (ಆ್ಯಕ್ಟಿವಿಟಿ) ನೋಡಬೇಕೆಂದರೆ Recent ವಿಭಾಗದಲ್ಲಿ ಕೊನೆಗೆ ಕಾಣುವ GO TO MY ACTIVITY ಮೇಲೆ ಕ್ಲಿಕ್ಕಿಸಿ. ಅಲ್ಲಿ ನಿಮ್ಮ ಡಿವೈಸ್‌ನ ಎಲ್ಲಾ ಚಟುವಟಿಕೆಗಳು ದಾಖಲಾಗಿರುತ್ತವೆ. ಇಲ್ಲಿ ಯಾವ ಚಟುವಟಿಕೆ ಅಥವಾ ಹುಟುಕಾಟದ ಹಿಸ್ಟರಿ ಕ್ಲಿಯರ್‌ ಮಾಡಬೇಕೋ ಅದರ ಬಲ ಭಾಗದ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣುವ Delete ಮೇಲೆ ಒತ್ತಿದರೆ ಆ ಚಟುವಟಿಕೆಯ ಮಾಹಿತಿ ಗೂಗಲ್‌ ಆ್ಯಪ್‌ನಿಂದ ಅಳಿಸಿ ಹೋಗುತ್ತದೆ.

Post Comments (+)