ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಹೊಗಳಿದ ಕೋವಿಂದ್‌

‘ಮೈಸೂರು ಹುಲಿ’ಯ ಗುಣಗಾನ ಮಾಡಿದ ರಾಷ್ಟ್ರಪತಿ
Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಲ್ಲಿ ವೀರಮರಣವನ್ನು ಅಪ್ಪಿದ ಟಿಪ್ಪುಸುಲ್ತಾನ್‌ ಅಭಿವೃದ್ಧಿಯ ಹರಿಕಾರ. ಯುದ್ಧದಲ್ಲಿ ಮೈಸೂರು ರಾಕೆಟ್‌ ಬಳಸಿದ ಮೊದಲಿಗ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಬುಧವಾರ ಬಣ್ಣಿಸಿದರು.

ರಾಜ್ಯ ಸರ್ಕಾರದ ವತಿಯಿಂದ ನವೆಂಬರ್‌ 10ರಂದು ಟಿಪ್ಪು ಜಯಂತಿ ಆಚರಿಸುವ ಕುರಿತು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿರುವಾಗಲೇ ರಾಷ್ಟ್ರಪತಿಗಳು ಟಿಪ್ಪು ಗುಣಗಾನ ಮಾಡಿದ್ದಾರೆ.

ವಿಧಾನಸೌಧ ವಜ್ರ ಮಹೋತ್ಸವದ ಅಂಗವಾಗಿ ವಿಧಾನಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಬುಧವಾರ ಕೋವಿಂದ್ ಹೀಗೆ ಮಾತನಾಡುತ್ತಿದ್ದಂತೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಮೇಜು ಕುಟ್ಟಿ ಹರ್ಷೋದ್ಗಾರ ಮಾಡಿದರು.

ಟಿಪ್ಪು, ಕರ್ನಾಟಕದ ಅಭಿವೃದ್ಧಿಯ ಮುಂಗೋಳಿಯಾಗಿದ್ದರು. ಟಿಪ್ಪು ಬಳಸಿದ ರಾಕೆಟ್ ತಂತ್ರಜ್ಞಾನವನ್ನು ಯುರೋಪಿಯನ್ನರು ಆನಂತರದ ದಿನಗಳಲ್ಲಿ ಅಳವಡಿಸಿಕೊಂಡರು ಎಂದೂ ಅವರು ಸ್ಮರಿಸಿದರು.

ಜಯಿಸಲು ಅಸಾಧ್ಯವಾದ ಸಾಮರ್ಥ್ಯ ಹೊಂದಿದ್ದ ಅನೇಕ ವೀರಯೋಧರ ಕರ್ಮಭೂಮಿ ಕರ್ನಾಟಕ. ವಸಾಹತು ಶಾಹಿ ಆಳ್ವಿಕೆ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಇದೇ ನೆಲದವರು. ಭಾರತೀಯರ ನೆನಪಿನಲ್ಲಿ ಅಚ್ಚಳಿಯದೇ ಉಳಿದ ವಿಜಯನಗರದ ಅರಸ ಕೃಷ್ಣದೇವರಾಯ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರ ಕೊಡುಗೆಯನ್ನೂ ಮರೆಯಲಾಗದು ಎಂದು ಕೋವಿಂದ್‌ ಹೇಳಿದರು.

ಸಿದ್ಧಪಡಿಸಿದ ಭಾಷಣ: ಬಿಜೆಪಿ ಆರೋಪ

‘ಟಿಪ್ಪು ಸುಲ್ತಾನ್‌ ಹೊಗಳಿ ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಷ್ಟ್ರಪತಿಗಳು ಓದಿದ್ದಾರೆ.  ರಾಷ್ಟ್ರಪತಿಗಳ ಮುದ್ರಿತ ಭಾಷಣದ ಪ್ರತಿಯನ್ನು ಎಲ್ಲ ಸದಸ್ಯರಿಗೂ ನೀಡುವುದು ಸಂಪ್ರದಾಯ. ಆದರೆ, ಸರ್ಕಾರ ತರಾತುರಿಯಲ್ಲಿ ಭಾಷಣ ಸಿದ್ಧಪಡಿಸಿದ್ದರಿಂದಲೇ ಮುದ್ರಿತ ಪ್ರತಿ ನೀಡಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.

‘ಇಂತಹ ಕೆಟ್ಟ ಸರ್ಕಾರವನ್ನು ಉತ್ತಮ ಸರ್ಕಾರ ಎಂದು ರಾಷ್ಟ್ರಪತಿಗಳು ಹೇಳಿರುವುದನ್ನು ನೋಡಿದರೆ ಖಂಡಿತಾ ಇದು ಸರ್ಕಾರವೇ ಸಿದ್ಧಪಡಿಸಿದ ಭಾಷಣ. ಭಾಷಣದ ಪ್ರತಿ ನೀಡುವುದು ತಡವಾದ್ದರಿಂದ 20 ನಿಮಿಷ ವಿಳಂಬವಾಗಿ ಕಾರ್ಯಕ್ರಮ ಆರಂಭವಾಯಿತು’ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ದೂರಿದರು.

‘ಬಿಜೆಪಿಯವರಿಗೆ ತಿಳಿವಳಿಕೆ ಕಡಿಮೆ’

‘ಬಿಜೆಪಿ ನಾಯಕರಿಗೆ ತಿಳಿವಳಿಕೆ ಕಡಿಮೆ ಇದ್ದಂತೆ ಕಾಣುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.

‘ಜಂಟಿ ಅಧಿವೇಶನವಾದರೆ ಸರ್ಕಾರ ಭಾಷಣ ಸಿದ್ಧಪಡಿಸಿಕೊಡುತ್ತದೆ. ಇದು ವಜ್ರಮಹೋತ್ಸವ ಕಾರ್ಯಕ್ರಮವೇ ವಿನಾ ಜಂಟಿ ಅಧಿವೇಶನವಲ್ಲ. ಭಾಷಣದ ವಿಷಯದಲ್ಲಿ ಸರ್ಕಾರದ ಪಾತ್ರವಿಲ್ಲ’ ಎಂದೂ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

‘ರಾಷ್ಟ್ರಪತಿಯವರಿಗೆ ನಾವು ಭಾಷಣ ಬರೆದುಕೊಡಲು ಸಾಧ್ಯವೇ. ಸ್ವಂತ ಭಾಷಣವನ್ನು ಅವರು ಓದಿದ್ದಾರೆ. ಮುಖ್ಯಮಂತ್ರಿ ಸಚಿವಾಲಯ, ಮುಖ್ಯ ಕಾರ್ಯದರ್ಶಿ, ನಮ್ಮ ಆಪ್ತರು ಯಾರೂ ಭಾಷಣ ಬರೆದು ಕಳುಹಿಸಿಲ್ಲ. ಭಾಷಣಕ್ಕೂ ನಮಗೂ ಸಂಬಂಧವೇ ಇಲ್ಲ’ ಎಂದು ಪ್ರತಿಪಾದಿಸಿದರು.

‘ಟಿಪ್ಪು ಸುಲ್ತಾನ್ ಅವರ ಬಗ್ಗೆ ಚರಿತ್ರೆಯಲ್ಲಿ ಇರುವ ಸತ್ಯವನ್ನು ರಾಷ್ಟ್ರಪತಿ ಹೇಳಿದ್ದಾರೆ. ಸುಳ್ಳನ್ನೇ ಹೇಳುತ್ತಿರುವ ಬಿಜೆಪಿಯವರಿಗೆ ಅದನ್ನು ಸಹಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ರಾಜಕೀಯ ಬಣ್ಣ ಕೊಡಲು ಮುಂದಾಗಿದ್ದಾರೆ. ರಾಷ್ಟ್ರಪತಿಗಳ ಭಾಷಣವನ್ನು ಟೀಕಿಸುತ್ತಿರುವುದು ಖಂಡನೀಯ’ ಎಂದು ಅವರು ಹೇಳಿದರು.

‘ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಷೇಕ್ ಅಲಿ ಅವರು ಟಿಪ್ಪುಸುಲ್ತಾನ್ ಕುರಿತು ಬರೆದ ಪುಸ್ತಕಕ್ಕೆ ಜಗದೀಶ ಶೆಟ್ಟರ್ ಮುನ್ನುಡಿ ಬರೆದು, ಟಿಪ್ಪು ಅವರನ್ನು ಹಾಡಿ ಹೊಗಳಿದ್ದಾರೆ. ಈಗ ಆ ಮುನ್ನುಡಿಯನ್ನು ಶೆಟ್ಟರ್ ಮುಖಕ್ಕೆ ಹಿಡಿಯಿರಿ’ ಎಂದು ಮಾಧ್ಯಮದವರಿಗೆ ಸಿದ್ದರಾಮಯ್ಯ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT