ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ನಗರಗಳಿಗೆ ಬೈಪಾಸ್‌

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ಬೆಂಗಳೂರು, ಬೆಳಗಾವಿ ಮತ್ತು ಚಿತ್ರದುರ್ಗ ನಗರಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ‘ಭಾರತಮಾಲಾ’ ಯೋಜನೆ ಅಡಿ ವರ್ತುಲ ರಸ್ತೆ (ರಿಂಗ್‌ ರೋಡ್‌) ನಿರ್ಮಿಸಲಾಗುವುದು ಎಂದು ಕೇಂದ್ರದ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ರಾಜ್ಯದ ಬಳ್ಳಾರಿ, ರಾಯಚೂರು, ಹೊಸಪೇಟೆ, ಬಾಗಲಕೋಟೆ ನಗರಗಳಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಹಾಗೂ ತುಮಕೂರು ನಗರದ ಸಂಚಾರ ದಟ್ಟಣೆಯನ್ನು ಪರಿಗಣಿಸಿ ಮುಂಬೈ– ಚೆನ್ನೈ ಕಾರಿಡಾರ್‌ಗೆ ಹೆಚ್ಚುವರಿ ಪಥ ಸೇರಿಸಲು ನಿರ್ಧರಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ₹ 6.92 ಲಕ್ಷ ಕೋಟಿ ಅನುದಾನ ಮೀಸಲಿರಿಸಲಾಗಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಹೊಸ 44 ಕಾರಿಡಾರ್‌ಗಳೂ ಒಳಗೊಂಡಂತೆ ರಾಷ್ಟ್ರದಾದ್ಯಂತ ಒಟ್ಟು 83,677 ಕಿಲೋಮೀಟರ್‌ನಷ್ಟು ರಸ್ತೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಇದರಿಂದ ದೇಶದ ಶೇ 80ರಷ್ಟು ಸರಕು ಸಾಗಣೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಈಗಾಗಲೇ 25,000 ಕಿಲೋ ಮೀಟರ್‌ನಷ್ಟು ಹೆದ್ದಾರಿಯ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಬಹುತೇಕ ಕಾಮಗಾರಿ 2018ರ ಡಿಸೆಂಬರ್‌ಗೆ ಮೊದಲೇ ಪೂರ್ಣಗೊಳ್ಳಲಿದೆ ಅವರು ತಿಳಿಸಿದರು.

ಸಂಚಾರ ದಟ್ಟಣೆಯನ್ನು ಸಾಧ್ಯವಾದಷ್ಟು ಪ್ರಮಾಣದಲ್ಲಿ ಕಡಿತಗೊಳಿಸುವ ಉದ್ದೇಶದಿಂದ ದೇಶದ 28 ಕಡೆ ವರ್ತುಲ ರಸ್ತೆಗಳು, 45 ಕಡೆ ಬೈಪಾಸ್‌ ರಸ್ತೆಗಳು ಹಾಗೂ 34 ಕಡೆಗಳಲ್ಲಿ ರಸ್ತೆಗಳ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಬೆಂಗಳೂರಿನಲ್ಲಿ ಈಗಾಗಲೇ ನಿರ್ಮಿಸಿರುವ ಕಾರಿಡಾರ್‌ನಲ್ಲಿನ ವಾಹನಗಳ ದಟ್ಟಣೆಯನ್ನು ತಗ್ಗಿಸಲು ಬಹು ಮಾದರಿ ಲಾಜಿಸ್ಟಿಕ್ಸ್ ಪಾರ್ಕ್ ನಿರ್ಮಿಸಲಾಗುವುದು. ಇದರಲ್ಲಿ ಸರಕು ಸಂಗ್ರಹಣೆ, ಬಹು ಮಾದರಿ ಸರಕು ಸಾಗಣೆ ಮತ್ತು ಗೋದಾಮು ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಜೊತೆಗೆ ಕಸ್ಟಮ್ ಅನುಮತಿಯಂತಹ ಮೌಲ್ಯ-ವರ್ಧಿತ ಸೇವೆಯೂ ಸುಲಭದಲ್ಲಿ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಪ್ರಮುಖ ಉತ್ಪನ್ನಗಳ ಸಾಗಣೆ ಮತ್ತು ಬಳಕೆಯ ಕೇಂದ್ರಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಘೋಷಿಸಲಾಗಿರುವ ಹೊಸ 44 ಆರ್ಥಿಕ ಕಾರಿಡಾರ್‌ಗಳ ಪಟ್ಟಿಯಲ್ಲಿ ಬೆಂಗಳೂರು– ಮಲಪ್ಪುರ (323 ಕಿ.ಮೀ), ಬೆಂಗಳೂರು– ಮಂಗಳೂರು (319 ಕಿ.ಮೀ), ಬೆಂಗಳೂರು– ನೆಲ್ಲೂರು (286 ಕಿ.ಮೀ), ಮಂಗಳೂರು– ರಾಯಚೂರು (461 ಕಿ.ಮೀ) ಹಾಗೂ ಸೊಲ್ಲಾಪುರ– ಬಳ್ಳಾರಿ– ಗುತ್ತಿ (434 ಕಿ.ಮೀ) ನಡುವಣ ಕಾರಿಡಾರ್ ನಿರ್ಮಾಣವೂ ಸೇರಿವೆ. ಆಯಾ ಜಿಲ್ಲೆಯಿಂದ ದೇಶದ ಇತರೆಡೆ ಸಾಗಣೆಯಾಗುವ ಸರಕಿನ ಪ್ರಮಾಣದ ಕುರಿತು ಅಧ್ಯಯನ ನಡೆಸಿದ ನಂತರವೇ ಹೊಸ ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಗಡ್ಕರಿ ತಿಳಿಸಿದರು.

ಭಾರತಮಾಲಾ ಯೋಜನೆಯ ಮೊದಲ ಹಂತದಲ್ಲಿ 24,800 ಕಿ.ಮೀ ರಸ್ತೆಯ ಅಭಿವೃದ್ಧಿ ಮತ್ತು ನಿರ್ಮಾಣ ಹಾಗೂ ಬಾಕಿ ಉಳಿದಿರುವ 10,000 ಕಿ.ಮೀ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಇದರೊಂದಿಗೆ ಈಶಾನ್ಯ ರಾಜ್ಯಗಳ 48,877 ಕಿ.ಮೀ ರಸ್ತೆಯನ್ನು ವಿವಿಧ ಯೋಜನೆಗಳಡಿ ಅಭಿವೃದ್ಧಿಪಡಿಸಲು ಸರ್ಕಾರ ರೂಪುರೇಷೆ ಸಿದ್ಧಪಡಿಸಿದೆ. ದೇಶದಲ್ಲಿರುವ ಒಟ್ಟು 600 ಜಿಲ್ಲೆಗಳ ಪೈಕಿ 550 ಜಿಲ್ಲೆಗಳ ನಡುವಣ ಸಂಪರ್ಕಕ್ಕಾಗಿ ಚತುಷ್ಪಥ ರಸ್ತೆ ನಿರ್ಮಿಸಲಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT