ಸೋಮವಾರ, ಸೆಪ್ಟೆಂಬರ್ 16, 2019
26 °C

ವಿಚಾರಣೆಗೆ ಕರೆದ ಪೊಲೀಸರ ಸಮವಸ್ತ್ರ ಹರಿದ!

Published:
Updated:
ವಿಚಾರಣೆಗೆ ಕರೆದ ಪೊಲೀಸರ ಸಮವಸ್ತ್ರ ಹರಿದ!

ಬೆಂಗಳೂರು: ಬಾಡಿಗೆದಾರ ಯುವತಿ ಜತೆ ಅನುಚಿತವಾಗಿ ವರ್ತಿಸಿದ ಹಾಗೂ ಆ ಪ್ರಕರಣದ ವಿಚಾರಣೆಗೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಹಾಕಿದ ಆರೋಪಗಳಡಿ ಆದಿನಾರಾಯಣ (41) ಎಂಬಾತನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ನ್ಯೂ ಬಿಇಎಲ್ ಸಮೀಪದ ಚಿಕ್ಕಮಾರನಹಳ್ಳಿ ನಿವಾಸಿಯಾದ ಆದಿನಾರಾಯಣ ವಿರುದ್ಧ 25 ವರ್ಷದ ಯುವತಿಯೊಬ್ಬರು ಅ.20ರ ರಾತ್ರಿ ದೂರು ಕೊಟ್ಟಿದ್ದರು.

‘ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ನಾನು, ಮೂರು ವರ್ಷಗಳಿಂದ ಆದಿನಾರಾಯಣ ಅವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದೇನೆ. ದೀಪಾವಳಿ ಪ್ರಯುಕ್ತ ಅ.20ರ ರಾತ್ರಿ ನನ್ನ ಭಾವಿಪತಿ ಮನೆಗೆ ಬಂದಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಮನೆ ಬಳಿ ಬಂದ ಮಾಲೀಕರು, ‘ಇದು ವೇಶ್ಯೆಯ ಮನೆಯಲ್ಲ’ ಎಂದು ಗಲಾಟೆ ಪ್ರಾರಂಭಿಸಿದರು. ನನ್ನ ಭಾವಿಪತಿ ಮೇಲೆ ಹಲ್ಲೆ ನಡೆಸಿ ಅವರನ್ನು ಮನೆಯಿಂದ ಹೊರಹಾಕಿ, ‘ನಾನೇ ಇರುವಾಗ ಅವನನ್ನೇಕೆ ಕರೆಸಿಕೊಂಡೆ’ ಎಂದೆಲ್ಲ ಅಶ್ಲೀಲವಾಗಿ ಮಾತನಾಡಿದರು. ಅಲ್ಲದೆ, ನನ್ನ ಬಟ್ಟೆ ಹಿಡಿದು ಎಳೆದಾಡಿದರು’ ಎಂದು ಯುವತಿ ಆರೋಪಿಸಿದ್ದರು.

ರಾತ್ರಿ 10.45ರ ಸುಮಾರಿಗೆ ಭಾವಿಪತಿ ಜತೆ ಸದಾಶಿವನಗರ ಠಾಣೆಗೆ ತೆರಳಿದ ಸಂತ್ರಸ್ತೆಯು ಮಾಲೀಕನ ವಿರುದ್ಧ ದೂರು ಕೊಟ್ಟರು. ಲೈಂಗಿಕ ಕಿರುಕುಳ (ಐಪಿಸಿ 354, 354ಎ) ಹಾಗೂ ಬೆದರಿಕೆ (506) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡ ಸದಾಶಿವನಗರ ಪೊಲೀಸರು, ಆರೋಪಿಯನ್ನು ವಿಚಾರಣೆಗೆ ಕರೆಯಲು ಅದೇ ರಾತ್ರಿ ಮನೆ ಹತ್ತಿರ ತೆರಳಿದ್ದರು.

ಸಮವಸ್ತ್ರ ಹರಿದ ಆರೋಪ: ‘ಪಿಂಕ್ ಹೊಯ್ಸಳ ಚಾಲಕ ಮಟ್ಟಪ್ಪ ವಡ್ಡರ್ ಹಾಗೂ ಮಹಿಳಾ ಕಾನ್‌ಸ್ಟೆಬಲ್ ಹೊನ್ನಮ್ಮ ಅವರು ಸಂತ್ರಸ್ತೆಯನ್ನು ಕರೆದುಕೊಂಡು ರಾತ್ರಿ 11.15ರ ಸುಮಾರಿಗೆ ಮನೆ ಹತ್ತಿರ ಹೋಗಿದ್ದರು. ಈ ವೇಳೆ ಆರೋಪಿ, ‘ಮನೆ ಹತ್ತಿರ ಬರುವುದಕ್ಕೆ ಯಾರೋ ನಿಮಗೆ ಹೇಳಿದ್ದು. ಠಾಣೆಗೆ ಬರಲು ಆಗುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಕೂಗಾಡಿದ್ದ. ಅಲ್ಲದೆ, ಮಟ್ಟಪ್ಪ ಅವರ ಕೊರಳಪಟ್ಟಿ ಹರಿದು ಹಾಕಿದ್ದ. ಸಿಬ್ಬಂದಿಯ ರಕ್ಷಣೆಗೆ ಧಾವಿಸಿದ ಹೊನ್ನಮ್ಮ ಅವರ ಸಮವಸ್ತ್ರವನ್ನೂ ಎಳೆದಾಡಿದ್ದ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ತಕ್ಷಣ ಠಾಣೆಗೆ ಕರೆ ಮಾಡಿದ ಮಟ್ಟಪ್ಪ, ಹೆಚ್ಚುವರಿ ಸಿಬ್ಬಂದಿಯನ್ನು ಕಳುಹಿಸುವಂತೆ ಕೋರಿದರು. ಅಂತೆಯೇ ಸ್ಥಳಕ್ಕೆ ತೆರಳಿದ ಎಸ್‌ಐ ಧನಂಜಯ್, ಹೆಡ್‌ಕಾನ್‌ಸ್ಟೆಬಲ್‌ಗಳಾದ ರಮೇಶ್ ಹಾಗೂ ನಾಗರಾಜ್ ಅವರ ಮೇಲೂ ಹಲ್ಲೆಗೆ ಯತ್ನಿಸಿ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದ. ಆ ನಂತರ ಸಿಬ್ಬಂದಿ ಆತನನ್ನು ಠಾಣೆಗೆ ಕರೆದುಕೊಂಡು ಬಂದರು’ ಎಂದು ಮಾಹಿತಿ ನೀಡಿದರು.

ಹೊಯ್ಸಳ ಚಾಲಕ ದೂರು

‘ತಮ್ಮ ಮೇಲೆ ಹಲ್ಲೆ ನಡೆಸಿದ ಸಂಬಂಧ ಹೊಯ್ಸಳ ಚಾಲಕ ಮಟ್ಟಪ್ಪ ಅವರು ದೂರು ಕೊಟ್ಟಿದ್ದಾರೆ. ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಜತೆಗೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಹಾಗೂ ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ (ಐಪಿಸಿ 504) ಆರೋಪಗಳಡಿಯೂ ಮತ್ತೊಂದು ಎಫ್ಐಆರ್ ದಾಖಲಿಸಿ ಆದಿನಾರಾಯಣನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Post Comments (+)