ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾರೇ ಕೂಗಾಡಲಿ... ಎಮ್ಮೆ ನಿನಗೆ ಸಾಟಿ ಇಲ್ಲ...’

ಟೀಕಾಕಾರರಿಗೆ ಟಾಂಗ್‌ ಕೊಟ್ಟ ವಿಧಾನಸಭೆ ಅಧ್ಯಕ್ಷ ‌ಕೆ.ಬಿ.ಕೋಳಿವಾಡ!
Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾರೇ ಕೂಗಾಡಲಿ, ಊರೇ ಹೋರಾಡಲಿ, ನಿನ ನೆಮ್ಮದಿಗೆ ಭಂಗವಿಲ್ಲ... ಎಮ್ಮೆ ನಿನಗೆ ಸಾಟಿ ಇಲ್ಲ...’ ಎಂಬ ರಾಜ್‌ಕುಮಾರ್‌ ಅಭಿನಯದ ಸಂಪತ್ತಿಗೆ ಸವಾಲ್‌ ಚಿತ್ರದ ಈ ಹಾಡನ್ನು ವಿಧಾನಸಭೆಯ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರು ಹಾಡಿದರೆ ಹೇಗಿರುತ್ತೆ!

ಕೋಳಿವಾಡ ಗುರುವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ಅಕ್ಷರಶಃ ಈ ಹಾಡು ಹಾಡಿ ಮಾಧ್ಯಮ ಪ್ರತಿನಿಧಿಗಳನ್ನು ರಂಜಿಸಿದರು. ಬುಧವಾರ ನಡೆದ ವಿಧಾನಸೌಧದ ವಜ್ರ ಮಹೋತ್ಸವದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಮಾಧ್ಯಮ ಪ್ರತಿನಿಧಿಗಳನ್ನು ಕರೆದಿದ್ದರು.

ವಜ್ರ ಮಹೋತ್ಸವದ ಖರ್ಚುವೆಚ್ಚ ಕುರಿತು ವ್ಯಾಪಕ ಟೀಕೆಗಳು ಬರುತ್ತಿರುವ ಕುರಿತು ಕೋಳಿವಾಡ ಅವರನ್ನು ಪ್ರಶ್ನಿಸಿದಾಗ, ‘ನನ್ನ ವಿರುದ್ಧ ಯಾವುದೇ ಟೀಕೆಗಳು ಬಂದಾಗ ರಾಜಕುಮಾರ್ ಹಾಡಿರುವ ‘ಯಾರೇ ಕೂಗಾಡಲಿ, ಊರೇ ಹೋರಾಡಲಿ, ನಿನ ನೆಮ್ಮದಿಗೆ ಭಂಗವಿಲ್ಲ... ಎಮ್ಮೆ ನಿನಗೆ ಸಾಟಿ ಇಲ್ಲ...’ ಎಂಬ ಹಾಡು ನೆನಪಾಗುತ್ತೆ ಎಂದು ಆ ಹಾಡನ್ನು ಹಾಡಿಯೇಬಿಟ್ಟರು.

‘ನಾನು ಹಾಡಿದ್ದು ಸರಿಯಾಗಿದೆಯೇ’ ಎಂದು ಪಕ್ಕದಲ್ಲಿ ಕುಳಿತಿದ್ದ ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಸ್‌. ಮೂರ್ತಿ ಅವರನ್ನು ಕೇಳಿದರು. ‘ಸರಿಯಾಗಿದೆ’ ಎಂದು ಅವರು ತಲೆಯಾಡಿಸಿದರು. ‘ನೀವು ಹಾಡಿದ್ದು ಸರಿಯಿದೆ’ ಎಂದು ಪತ್ರಕರ್ತರು ಸರ್ಟಿಫೈ ಮಾಡಿದರು. 

‘ನನ್ನ ಅವಧಿಯಲ್ಲಿ ವಿಧಾನಸೌಧದ ವಜ್ರಮಹೋತ್ಸವ ಆಚರಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಹಿಂದಿನ 19 ಮಂದಿ ವಿಧಾನಸಭಾಧ್ಯಕ್ಷರಿಗೆ ಈ ಅವಕಾಶ ಸಿಕ್ಕಿರಲಿಲ್ಲ. ಒಂದು ದೊಡ್ಡ ಕಾರ್ಯಕ್ರಮ ಮಾಡಿದಾಗ ಕೆಲವರು ಟೀಕೆಗಳನ್ನು ಮಾಡುವುದು ಸ್ವಾಭಾವಿಕ. ಮಹಾತ್ಮಾಗಾಂಧಿ ಅವರನ್ನೂ ಕೆಲವರು ಟೀಕಿಸಿದ್ದರು. ಇನ್ನು ನಾನ್ಯಾವ ಲೆಕ್ಕ’ ಎಂದು ಮಾರ್ಮಿಕವಾಗಿ ಕೇಳಿದರು.

ಒಂದು ಊಟಕ್ಕಾಗಿ ₹ 3,000ಕ್ಕೂ ಅಧಿಕ ವೆಚ್ಚ ಮಾಡಿದ್ದೀರಿ ಎಂಬ ಪ್ರಶ್ನೆಗೆ, ‘ನಿನ್ನೆಯಷ್ಟೆ ಕಾರ್ಯಕ್ರಮ ಮುಗಿದಿದೆ. ಅಲ್ಲಿ ತಿಂದಿದ್ದು ಇನ್ನೂ ಜೀರ್ಣ ಆಗಿಲ್ಲ. ಈಗಲೇ ಲೆಕ್ಕ ಕೇಳಿದರೆ ಹೇಗೆ? ಕೆಲವೇ ದಿನಗಳಲ್ಲಿ ಇಡೀ ವಜ್ರಮಹೋತ್ಸವಕ್ಕೆ ಆಗಿರುವ ಎಲ್ಲ ಖರ್ಚು ವೆಚ್ಚಗಳನ್ನು ನಿಮ್ಮ ಮುಂದೆ ಇಡುತ್ತೇನೆ’ ಎಂದರು.

‘ವಿಧಾನಸಭೆ ಸಚಿವಾಲಯ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಲೆಕ್ಕಪತ್ರಗಳಲ್ಲಿ ಲೋಪಗಳಾಗಿಲ್ಲ. ಖರ್ಚು ವೆಚ್ಚದ ವಿವರಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿ ವರದಿ ನೀಡುತ್ತಾರೆ. ಏನಾದರೂ ವ್ಯತ್ಯಾಸಗಳಿದ್ದರೂ ತಿಳಿಸಿರುತ್ತಾರೆ. ವರದಿ ಬಂದಾಗ ನನ್ನ ವಿರುದ್ಧ ಆರೋಪಗಳಿದ್ದರೆ ತೋರಿಸಿ’ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಕ್ಷಮೆ: ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯೊಂದಿಗೆ ಎಲ್ಲ ಶಾಸಕರು ಫೋಟೊ ತೆಗೆಸಿಕೊಳ್ಳುವ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಸನವನ್ನು ಎರಡನೇ ಸಾಲಿನಲ್ಲಿ ಹಾಕಿದ್ದು ಸರಿಯಲ್ಲ. ಈ ಸಂಬಂಧ ಅವರಿಗೆ ಕರೆ ಮಾಡಿ ಕ್ಷಮೆ ಕೇಳಿದ್ದೇನೆ’ ಎಂದು ಕೋಳಿವಾಡ ತಿಳಿಸಿದರು.

‘ಕುಮಾರಸ್ವಾಮಿ ಅವರಿಗೆ ಮೊದಲ ಸಾಲಿನಲ್ಲಿಯೇ ಆಸನ ಮೀಸಲಿಡಲಾಗಿತ್ತು. ಆದರೆ, ಅಲ್ಲೊಬ್ಬ ಶಾಸಕರು ಎಡವಿಬಿದ್ದು ಗೊಂದಲವಾದ್ದರಿಂದ ಆ ಜಾಗದಲ್ಲಿ ಬೇರೆಯವರು ಕುಳಿತರು. ಕುಮಾರಸ್ವಾಮಿ ಹೆಸರಿನ ಫಲಕ ಕಿತ್ತು ಹಿಂದಿನ ಸಾಲಿನ ಸೀಟಿಗೆ ಅಂಟಿಸಿದ್ದರು. ಇದನ್ನು ನಮ್ಮ ಸಿಬ್ಬಂದಿಯಾದರೂ ಸರಿಪಡಿಸಬೇಕಿತ್ತು. ನಮ್ಮಿಂದ ತಪ್ಪಾಗಿದೆ. ಈ ಸಂಬಂಧ ಸಿಬ್ಬಂದಿಯಿಂದಲೂ ವಿವರಣೆ ಕೇಳಿದ್ದೇನೆ’ ಎಂದರು.

ಭಾಷಣ ಸಿದ್ಧ‍ಪಡಿಸಿದ್ದು ರಾಷ್ಟ್ರಪತಿ ಕಚೇರಿ

‘ವಿಧಾನಸೌಧ ವಜ್ರಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮಾಡಿದ ಭಾಷಣದ ಸಿದ್ಧತೆಗೆ ನಾವೂ ಕೆಲವು ಪೂರಕ ಟಿಪ್ಪಣಿಯನ್ನು ಕಳುಹಿಸಿದ್ದೆವು. ಆದರೆ, ಅವರ ಭಾಷಣದಲ್ಲಿ ನಮ್ಮ ಯಾವ ಅಂಶಗಳೂ ಇರಲಿಲ್ಲ. ರಾಷ್ಟ್ರಪತಿ ಕಚೇರಿಯೇ ಭಾಷಣ ಸಿದ್ಧಪಡಿಸಿದೆ’ ಎಂದೂ ಕೋಳಿವಾಡ ಸ್ಪಷ್ಟಪಡಿಸಿದರು.

‘ರಾಷ್ಟ್ರಪತಿ ಬರುವುದು ಖಾತ್ರಿಯಾದ ಬಳಿಕ ಅಲ್ಲಿನ ಸಿಬ್ಬಂದಿ ನಮ್ಮ ಕಚೇರಿಯನ್ನು ಸಂಪರ್ಕಿಸಿ ಕೆಲವೊಂದು ಮಾಹಿತಿಗಳ ಸಮೇತ ಟಿಪ್ಪಣಿ ಕಳುಹಿಸುವಂತೆ ಕೇಳಿದರು. ಈ ಸಂಬಂಧ ಟಿಪ್ಪಣಿಯೊಂದನ್ನು ಸಿದ್ಧಪಡಿಸಿ, ಅದಕ್ಕೆ ನಾನು ಮತ್ತು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸಹಿ ಹಾಕಿ ಕಳುಹಿಸಿದ್ದೆವು. ಆದರೆ, ರಾಷ್ಟ್ರಪತಿಯವರ ಭಾಷಣಕ್ಕೂ ನಮ್ಮ ಟಿಪ್ಪಣಿಗೂ ಸಾಮ್ಯತೆ ಇರಲಿಲ್ಲ’ ಎಂದು ಅವರು ತಿಳಿಸಿದರು.

‘ರಾಷ್ಟ್ರ‍‍‍ಪತಿಯವರು ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದ್ದು ಕೆಲವರಿಗೆ ಕಸಿವಿಸಿ ಉಂಟಾಗಿದೆ.  ದೇಶದ ಪ್ರಥಮ ಪ್ರಜೆ ಮಾಡಿದ ಭಾಷಣವನ್ನು ಟೀಕಿಸುವುದು ಸರಿಯಲ್ಲ. ಇದು ಅತ್ಯುನ್ನತ ಸ್ಥಾನಕ್ಕೆ ಅವಮಾನ ಮಾಡಿದಂತೆ’ ಎಂದರು.

ವಿಧಾನಸೌಧಕ್ಕೆ ವಿದ್ಯುತ್ ಅಲಂಕಾರ

‘ವಿಧಾನಸೌಧಕ್ಕೆ ಪ್ರತಿ ಶನಿವಾರ ಮತ್ತು ಭಾನುವಾರ ದೀಪಾಲಂಕಾರ ಮಾಡಿ ಪ್ರವಾಸಿಗರನ್ನು ಸೆಳೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದೇನೆ’ ಎಂದು ವಿಧಾನಸಭೆ ಅಧ್ಯಕ್ಷರು ಹೇಳಿದರು.

‘ವಜ್ರಮಹೋತ್ಸವಕ್ಕಾಗಿ ಮಾಡಿದ ವಿದ್ಯುತ್ ಅಲಂಕಾರ ಕಂಡು ಅನೇಕರು ಇಷ್ಟಪಟ್ಟಿದ್ದಾರೆ. ಇದು ಹೀಗೆ ಮುಂದುವರಿಯಬೇಕು. ವಿದ್ಯುತ್ ಬಿಲ್‌ ದುಬಾರಿಯಾಗುತ್ತದೆ ಎಂದಾದರೆ ವಿಧಾನಸೌಧದ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಬಹುದು’ ಎಂದೂ ಹೇಳಿರುವುದಾಗಿ ವಿವರಿಸಿದರು.

‘ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ವೇಳೆ ಶಾಸಕರ ಹೋಟೆಲ್ ವಾಸ್ತವ್ಯಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಅದರ ಬದಲು ಬೆಳಗಾವಿಯಲ್ಲೊಂದು ಶಾಸಕರ ಭವನ ನಿರ್ಮಿಸಬೇಕು, ನಾಲ್ಕಾರು ಇಲಾಖೆಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು ಮತ್ತು ಆ ಕಟ್ಟಡವನ್ನು ವರ್ಷಪೂರ್ತಿ ಉಪಯೋಗಿಸುವಂತಾಗಬೇಕು ಎಂಬುದು ನನ್ನ ಆಸೆ. ಇದಕ್ಕಾಗಿ ಅನೇಕ ಶಿಫಾರಸುಗಳನ್ನು ಮಾಡಿದ್ದೇನೆ. ಆದರೆ, ಅವುಗಳನ್ನು ಜಾರಿ ಮಾಡುವ ಅಧಿಕಾರ ನನಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT