ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ಸೌಕರ್ಯ ಬಳಸಲು ಕಂಪೆನಿಗಳ ಹಿಂದೇಟು

ಸುರಂಗ ಮಾರ್ಗದಲ್ಲಿ ಸಿಗುತ್ತಿಲ್ಲ ಮೊಬೈಲ್‌ ಸಿಗ್ನಲ್‌
Last Updated 26 ಅಕ್ಟೋಬರ್ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಸುರಂಗ ಮಾರ್ಗಗಳಲ್ಲಿ ಮೊಬೈಲ್‌ ಸಿಗ್ನಲ್‌ ಒದಗಿಸುವ ಮೂಲಸೌಕರ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಅಳವಡಿಸಿದ್ದರೂ, ಮೊಬೈಲ್‌ ಸೇವಾ ಕಂಪೆನಿಗಳು ಇದನ್ನು ಬಳಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಪ್ರಯಾಣಿಕರಿಗೆ ಈ ಸೌಲಭ್ಯದ ಪೂರ್ಣ ಪ್ರಯೋಜನ ಲಭಿಸುತ್ತಿಲ್ಲ.

ಸುರಂಗ ಮಾರ್ಗದಲ್ಲಿ ಮೊಬೈಲ್‌ ಸಿಗ್ನಲ್‌ ಸಿಗುವಂತೆ ಮಾಡಲು ಲೀಕಿ ಕೇಬಲ್‌ ತಂತ್ರಜ್ಞಾನ ಬಳಸಲಾಗುತ್ತದೆ. ಇದನ್ನು ಅಳವಡಿಸಲು ನಿಗಮವು ಟೆಂಡರ್‌ ಆಹ್ವಾನಿಸಿತ್ತು. ಇದರ ಗುತ್ತಿಗೆ ಪಡೆದ ಅಮೆರಿಕನ್‌ ಟವರ್‌ ಕಾರ್ಪೊರೇಷನ್‌ (ಎಟಿಸಿ) ಕಂಪೆನಿ ಲೀಕಿ ಕೇಬಲ್‌ಗಳನ್ನು ಅಳವಡಿಸಿದೆ. ಆದರೆ, ಬಹುತೇಕ ಮೊಬೈಲ್‌ ಸೇವಾ ಕಂಪೆನಿಗಳು ಈ ಸೌಕರ್ಯ ಬಳಸಿಕೊಂಡಿಲ್ಲ. ಸದ್ಯಕ್ಕೆ  ಜಿಯೊ ಕಂಪೆನಿ ಮಾತ್ರ ಈ ಸೌಲಭ್ಯ ಬಳಸಿಕೊಂಡು ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಪ್ರಮುಖ ಮೊಬೈಲ್‌ ಸೇವಾ ಕಂಪೆನಿಗಳ ವಕ್ತಾರರು ನಿರಾಕರಿಸಿದ್ದಾರೆ.

ಲೀಕಿ ಕೇಬಲ್‌ ಸೌಲಭ್ಯ ಬಳಸಿಕೊಳ್ಳಲು ಮೊಬೈಲ್‌ ಸೇವಾ ಕಂಪೆನಿಗಳು ಎಟಿಸಿ ಕಂಪೆನಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಶುಲ್ಕ ದುಬಾರಿಯಾಗಿರುವುದರಿಂದ ಕಂಪೆನಿಗಳು ಅದನ್ನು ಬಳಸಲು ಹಿಂದೇಟು ಹಾಕುತ್ತಿವೆ ಎಂದು ಮೂಲಗಳು ತಿಳಿಸಿವೆ.

‘ಸುರಂಗ ಮಾರ್ಗದಲ್ಲಿ ಮೂಲಸೌಕರ್ಯ (ಲೀಕಿ ಕೇಬಲ್‌) ಅಳವಡಿಸಲು ಮೊಬೈಲ್‌ ಸೇವಾ ಕಂಪೆನಿಗಳಿಗೂ ಬಿಎಂಆರ್‌ಸಿಎಲ್‌ ಮುಕ್ತ ಅವಕಾಶ ಕಲ್ಪಿಸಬೇಕಿತ್ತು. ಆದರೆ, ಅವರು ಟೆಂಡರ್‌ ಆಹ್ವಾನಿಸಿ ಒಂದೇ ಕಂಪೆನಿಗೆ ಇದರ ಗುತ್ತಿಗೆ ನೀಡಿ, ಅದರಿಂದ ಆರ್ಥಿಕ ಲಾಭ ಮಾಡಿಕೊಳ್ಳಲು ಮುಂದಾದರು. ಗುತ್ತಿಗೆ ಪಡೆದ ಕಂಪೆನಿ ಈ ಸೌಲಭ್ಯ ಬಳಸಿಕೊಳ್ಳಲು ದುಬಾರಿ ಶುಲ್ಕ ನಿಗದಿ ಪಡಿಸಿದೆ. ಇಷ್ಟೊಂದು ಮೊತ್ತ ಪಾವತಿಸಿ ಗ್ರಾಹಕರಿಗೆ ಸೇವೆ ಒದಗಿಸಲು ಸಾಧ್ಯವಾಗುವುದಿಲ್ಲ’ ಎಂದು ಮೊಬೈಲ್‌ ಸೇವಾ ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮೊಬೈಲ್‌ ಸಿಗ್ನಲ್‌ ಒದಗಿಸುವಂತೆ ಪ್ರಯಾಣಿಕರು ಸಂಬಂಧ ಪಟ್ಟ ಸೇವಾ ಕಂಪೆನಿಯನ್ನೇ ಕೇಳಬೇಕು’ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

ಸುರಂಗ ಮಾರ್ಗದಲ್ಲಿ ಮೊಬೈಲ್‌ ಸಿಗ್ನಲ್‌ ಸಿಗುವಂತೆ ಮಾಡುವುದು ಬಿಎಂಆರ್‌ಸಿಎಲ್ ಜವಾಬ್ದಾರಿ ಎಂಬುದು ಪ್ರಯಾಣಿಕರು ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT