‘ಕನ್ನಡದಲ್ಲೂ ಪ್ರಯಾಣದ ಮಾಹಿತಿ ನೀಡಿ’

ಶನಿವಾರ, ಮೇ 25, 2019
33 °C
ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆ ಅನುಷ್ಠಾನ ಕುರಿತು ಪರಿಶೀಲನೆ

‘ಕನ್ನಡದಲ್ಲೂ ಪ್ರಯಾಣದ ಮಾಹಿತಿ ನೀಡಿ’

Published:
Updated:
‘ಕನ್ನಡದಲ್ಲೂ ಪ್ರಯಾಣದ ಮಾಹಿತಿ ನೀಡಿ’

ಬೆಂಗಳೂರು: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್‌) ಧ್ವನಿವರ್ಧಕಗಳ ಮೂಲಕ ಪ್ರಯಾಣದ ಮಾಹಿತಿಯನ್ನು ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ಘೋಷಿಸಲಾಗುತ್ತಿದೆ. ಅದನ್ನು ಕನ್ನಡ ಭಾಷೆಯಲ್ಲೂ ಘೋಷಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಸೂಚಿಸಿದರು.

ಕೆಐಎಎಲ್‌ನಲ್ಲಿ ಕನ್ನಡ ಭಾಷೆ ಬಳಕೆ ಕುರಿತು ಗುರುವಾರ ಪರಿಶೀಲಿಸಿದ ಅವರು, ‘ವಿಮಾನಗಳು, ಬಸ್‌ಗಳು ಸಾಂಸ್ಕೃತಿಕ ರಾಯಭಾರಿಗಳು. ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರ ಇದ್ದಂತೆ. ಇಲ್ಲಿನ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಕ್ಕಿದೆ. ಆದರೆ, ಪ್ರಯಾಣದ ಮಾಹಿತಿ ನೀಡುವ ಸಂದರ್ಭದಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗಿದೆ’ ಎಂದು ದೂರಿದರು.

‘ರಾಜ್ಯದ ಸಾಕಷ್ಟು ಮಂದಿ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ತಂದೆ–ತಾಯಿಗಳ ಪೈಕಿ ಕೆಲವರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಹೀಗಾಗಿ, ಕನ್ನಡದ ಬಳಕೆಗೂ ಒತ್ತು ನೀಡಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಐಎಎಲ್‌ ವಿಮಾನ ನಿಲ್ದಾಣ ಕಾರ್ಯಾಚರಣೆಯ ಅಧ್ಯಕ್ಷ ಹರಿ ಮರಾರ್, ‘ಕನ್ನಡದಲ್ಲಿ ಮಾಹಿತಿ ನೀಡಲು ಕೂಡಲೇ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

‘ರನ್ನಿಂಗ್‌ ಡಿಸ್ಪ್ಲೆಗಳಲ್ಲಿ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಚಿತ್ರ ಹಾಗೂ ಮಾಹಿತಿಯನ್ನು ಪ್ರಸಾರ ಮಾಡಬೇಕು. ನಿಲ್ದಾಣದಲ್ಲಿರುವ ಹೋಟೆಲ್‌, ಮಳಿಗೆಗಳಲ್ಲಿ ಕನ್ನಡದ ನಾಮಫಲಕಗಳಿಲ್ಲ. ಈ ನಾಮಫಲಕಗಳ ಬಳಕೆ ಮಾಡುವಂತೆ ಟೆಂಡರ್‌ನ ನಿಯಮಾವಳಿಗಳನ್ನು ರೂಪಿಸಬೇಕು. ಕೆಐಎಎಲ್‌ ವೆಬ್‌ಸೈಟ್‌ ಅನ್ನು ಇಂಗ್ಲಿಷ್‌ ಜತೆಗೆ ಕನ್ನಡದಲ್ಲೂ ರೂಪಿಸಬೇಕು. ಇದಕ್ಕೆ ಗಣಕ ಪರಿಷತ್ತು ತಾಂತ್ರಿಕ ಸಹಕಾರ ನೀಡಲಿದೆ’ ಎಂದು ಸಿದ್ಧರಾಮಯ್ಯ ಹೇಳಿದರು.

‘ತಿಂಡಿ–ಊಟದ ಮೆನು ಕನ್ನಡದಲ್ಲಿರಲಿ’

‘ವಿಮಾನಗಳಲ್ಲಿ ನೀಡುವ ತಿಂಡಿ–ಊಟ, ಪಾನೀಯಗಳ ಮೆನು ಕನ್ನಡದಲ್ಲೂ ಇರಲಿ. ದುಬೈನ ಎಮಿರೆಟ್ಸ್ ಏರ್‌ಲೈನ್ಸ್ ಆ ಕೆಲಸ ಮಾಡಿದೆ. ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಈ ಕುರಿತು ಸೂಚನೆ ನೀಡಬೇಕು’ ಎಂದು ಸಿದ್ಧರಾಮಯ್ಯ ಸೂಚಿಸಿದರು.

ಇದಕ್ಕೆ ಸ್ಪಂದಿಸಿದ ಮರಾರ್‌, ‘ಮೆನುವಿನಲ್ಲಿ ಕನ್ನಡ ಭಾಷೆಗೂ ಆದ್ಯತೆ ನೀಡುತ್ತೇವೆ’ ಎಂದರು.

ಕವಿ ಸಿದ್ಧಲಿಂಗಯ್ಯ, ನಟ ‘ಮುಖ್ಯಮಂತ್ರಿ' ಚಂದ್ರು, ಗಣಕ ಪರಿಷತ್ತಿನ ನರಸಿಂಹಮೂರ್ತಿ ಇದ್ದರು.

**

‘ಎರಡನೇ ಟರ್ಮಿನಲ್‌ ಕನ್ನಡಮಯ’

‘ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್‌ ನಿರ್ಮಿಸಲಾಗುತ್ತಿದ್ದು, ಅಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುತ್ತೇವೆ. ಇಡೀ ಟರ್ಮಿನಲ್‌ ಅನ್ನು ಕನ್ನಡಮಯ ಮಾಡುತ್ತೇವೆ. ಕನ್ನಡೇತರರಿಗೆ ಕನ್ನಡ ಕಲಿಸಲು ಕಲಿಕಾ ಕೇಂದ್ರವನ್ನು ಮೂರು ತಿಂಗಳಲ್ಲಿ ಆರಂಭಿಸುತ್ತೇವೆ’ ಎಂದು ಹರಿ ಮರಾರ್‌ ಹೇಳಿದರು.

‘ಕಲಿಕಾ ಕೇಂದ್ರಕ್ಕೆ ಅಗತ್ಯ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಪ್ರಾಧಿಕಾರದಿಂದ ಕಳುಹಿಸಿಕೊಡುತ್ತೇವೆ’ ಎಂದು ಸಿದ್ಧರಾಮಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry