ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯಕ್ಕೆ ಹಾದಿ ತೋರಿದ ‘ಸಂಧಾನ’

Last Updated 27 ಅಕ್ಟೋಬರ್ 2017, 4:58 IST
ಅಕ್ಷರ ಗಾತ್ರ

ಜಮಖಂಡಿ: ತಾಲ್ಲೂಕಿನ ಮುತ್ತೂರ ಗ್ರಾಮದ ದಲಿತರಿಗೆ ಸವರ್ಣೀಯರು ಹಾಕಿದ್ದರು ಎನ್ನಲಾದ ಸಾಮಾಜಿಕ ಬಹಿಷ್ಕಾರವನ್ನು ಹಿಂದಕ್ಕೆ ಪಡೆಯುವಂತೆ ಮಾಡುವಲ್ಲಿ ಜಿಲ್ಲಾಡಳಿತ ಗುರುವಾರ ಸಂಜೆ ಯಶಸ್ವಿಯಾಗಿದೆ.

ಸಾಮಾಜಿಕ ಬಹಿಷ್ಕಾರದ ಹಿನ್ನೆಲೆಯಲ್ಲಿ ದಲಿತರಿಗೆ ಸವರ್ಣೀಯರು ಕೂಲಿ ಕೆಲಸ ಕೊಡುತ್ತಿಲ್ಲ. ಕೂಲಿ ಕೆಲಸ ಇಲ್ಲದ್ದರಿಂದ ಜಾನುವಾರುಗಳಿಗೆ ಮೇವು ದೊರೆಯುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಪಡೆಯಲು ಬಿಡುತ್ತಿಲ್ಲ. ಕ್ಷೌರಿಕರು ಕ್ಷೌರ ಮಾಡುತ್ತಿಲ್ಲ ಎಂಬ ಆರೋಪಗಳು ದಲಿತರಿಂದ ಕೇಳಿ ಬಂದವು.

ಹಿಟ್ಟಿನ ಗಿರಣಿ, ಕಿರಾಣಿ ಅಂಗಡಿಗಳಲ್ಲಿ ದಲಿತರಿಗೆ ನಿಷೇಧ ಹೇರಲಾಗಿದೆ. ಬಹಿಷ್ಕಾರ ಘಟನೆ ನಡೆದು ನಾಲ್ಕು ದಿನಗಳು ಕಳೆದರೂ 34 ಮಂದಿ ಸವರ್ಣೀಯರ ವಿರುದ್ಧ ದಾಖಲಿಸಲಾಗಿದ್ದ ಜಾತಿ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪಗಳು ಪ್ರಮುಖವಾಗಿ ಕೇಳಿ ಬಂದವು.

ಎನ್‌ಆರ್‌ಇಜಿ ಯೋಜನೆ ಅಡಿಯಲ್ಲಿ ಜಾಬ್ ಕಾರ್ಡ್‌ ಮಾಡಿಸಿ ಗ್ರಾಮ ಪಂಚಾಯ್ತಿ ಮೂಲಕ ಕೆಲಸ ಕೊಡಿಸುವ, ಬರುವ 2017 ರ ನವೆಂಬರ್‌ 16 ರೊಳಗಾಗಿ ದಲಿತ ಕಾಲೊನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವ ಭರವಸೆಯನ್ನು ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ನೀಡಿದರು.

ವೈಯಕ್ತಿಕ ಒಡೆತನದ ಶೌಚಾಲಯಗಳನ್ನು 2017 ರ ನವೆಂಬರ್‌ 30 ರೊಳಗಾಗಿ ನಿರ್ಮಿಸಿ ಕೊಡುವ ಹಾಗೂ ಒಂದು ತಿಂಗಳ ಅವಧಿಯೊಳಗೆ ಕೃಷ್ಣಾನದಿ ದಡದಲ್ಲಿ ದಲಿತರಿಗಾಗಿ ದೋಬಿಘಾಟ್ ನಿರ್ಮಿಸಿ ಕೊಡುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.

ಯಾರಾದರೂ ದಲಿತರು ಮುಂದೆ ಬಂದರೆ ಅಂಬೇಡ್ಕರ್‌ ನಿಗಮದ ಮೂಲಕ ಹಿಟ್ಟಿಣ ಗಿರಣಿ ಹಾಗೂ ಖಾರ ಕುಟ್ಟುವ ಮಷಿನ್‌ ಸ್ಥಾಪಿಸಲು ಸಾಲ ಮಂಜೂರು ಮಾಡಿಸಿ ಕೊಡುವ ವಾಗ್ದಾನ ಮಾಡಲಾಯಿತು.

ದಲಿತರ ಕಾಲೊನಿಯಲ್ಲಿ ನಡೆದ ಸಭೆಗೆ ಗ್ರಾಮದ ಪ್ರಮುಖರಾದ ಸಂಗಪ್ಪ ಹಿಪ್ಪರಗಿ, ಮಹಾವೀರ ಪಾಟೀಲ ಆಗಮಿಸಿ ದಲಿತರಿಗೆ ಕೂಲಿ ಕೆಲಸ ಕೊಡುವ ಹಾಗೂ ಜಾನುವಾರುಗಳಿಗೆ ಮೇವು ನೀಡುವ ಭರವಸೆ ನೀಡಿದರು. ಮೇವು ನೀಡುವುದಿಲ್ಲ ಎಂದು ಯಾರಾದರೂ ಹೇಳಿದರೆ ನಮ್ಮ ಗಮನಕ್ಕೆ ತನ್ನಿ. ಅದನ್ನು ಸರಿಪಡಿಸುವ ವಾಗ್ದಾನ ಮಾಡಿದರು.

ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ದಲಿತ ಯುವಕರಾದ ರಮೇಶ ಮಾಂಗ, ಮುತ್ತಣ್ಣ ಕಾಂಬಳೆ, ಗಣಪತಿ ಗೋಟಡಕಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ತಲಾ ₹ 25 ಸಾವಿರ ಪರಿಹಾರಧನ ಚೆಕ್‌ ಅನ್ನು ಸಭೆಯಲ್ಲಿ ವಿತರಿಸಲಾಯಿತು.

ಶಂಕರ ಕುಂಚನೂರ, ಗೋಪಿನಾಥ ಮೀಸಿ, ಸಂಜೀವ ಐಹೊಳಿ, ಶಿವಾನಂದ ಬಬಲೇಶ್ವರ, ಸಂಗಮೇಶ ಕಾಂಬಳೆ ಮಾತನಾಡಿದರು. ಜಿಲ್ಲಾಡಳಿತ ನೀಡಿದ ಭರವಸೆಗಳನ್ನು ಕೂಡಲೇ ಈಡೇರಿಸದಿದ್ದರೆ ಉಗ್ರ ಹೋರಾಟ ರೂಪಿಸುವ ಹಾಗೂ ಹೋರಾಟಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದಲಿತ ನಾಯಕರು ಪಾಲ್ಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಸವರ್ಣೀಯರ ಸಭೆಯಲ್ಲಿ ಮುತ್ತಣ್ಣ ಹಿಪ್ಪರಗಿ, ಭೀಮಪ್ಪ ಹಿಪ್ಪರಗಿ ಮಾತನಾಡಿ, 34 ಮಂದಿ ಸವರ್ಣೀಯರ ವಿರುದ್ಧ ದಾಖಲಿಸಲಾಗಿರುವ ದೌರ್ಜನ್ಯ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರಲ್ಲದೆ ಈ ಮೊದಲು ದಲಿತರೊಂದಿಗೆ ನಡೆಸಿದ ಸಹಬಾಳ್ವೆಯನ್ನು ಮುಂದುವರಿಸುವುದಾಗಿ ಹೇಳಿದರು.

ಎಸ್ಪಿ ಸಿ.ಬಿ. ರಿಷ್ಯಂತ್‌, ಸಿಇಒ ವಿಕಾಸ ಸುರುಳಕರ, ಎಸಿ ರವೀಂದ್ರ ಕರಲಿಂಗಣ್ಣವರ, ಡಿವೈಎಸ್ಪಿ ರಾಮನಗೌಡ ಹಟ್ಟಿ, ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಸಿಪಿಐ ಅಶೋಕ ಸದಲಗಿ, ಟಿಪಿಇಒ ಎನ್.ವೈ. ಬಸರಿಗಿಡದ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಚೈತ್ರಾ ಪಿ.ವಿ., ಎಇಇ ಎಸ್‌.ಎಲ್‌. ವಾರಣಾಸಿ, ಪಿಎಸ್‌ಐ ಪಿ.ಎನ್‌. ಮನಗೂಳಿ, ಪಿಎಸ್‌ಐ ಪುಂಡಲೀಕ ಪಟಾತರ, ಸಮಾಜ ಕಲ್ಯಾಣ ಇಲಾಖೆಯ ಟಿ.ವಿ. ಮಂಟೂರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT