ಬುಧವಾರ, ಸೆಪ್ಟೆಂಬರ್ 18, 2019
21 °C

ಹಾಳಾದ ರಸ್ತೆ: ಸಂಚಾರಕ್ಕೆ ಅಡಚಣೆ

Published:
Updated:

ಲಕ್ಷ್ಮೇಶ್ವರ: ‘ತಾಲ್ಲೂಕಿನಲ್ಲಿ ಬಹುತೇಕ ಎಲ್ಲ ಪ್ರಮುಖ ರಸ್ತೆಗಳು ಹಾಳಾಗಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಇಷ್ಟಾದರೂ ಶಾಸಕರು ಹಾಗೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ’ ಎಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಅಣ್ಣಿಗೇರಿ ಆರೋಪಿಸಿದರು.

ಗುರುವಾರ ಈ ಕುರಿತು ಪತ್ರಿಕೆಗೆ ತಿಳಿಸಿದ ಅವರು, ‘ತಾಲ್ಲೂಕಿನ ಸೂರಣಗಿ–ಬೂದಿಹಾಳ, ಪುಟಗಾಂವ್‌ಬಡ್ನಿ–ಆದರಳ್ಳಿ, ಗೋವನಾಳ–ಶಿಗ್ಲಿ, ಅಡರ ಕಟ್ಟಿ–ಪುಟಗಾಂವ್‌ಬಡ್ನಿ, ಹರದಗಟ್ಟಿ–ಮಲ್ಲಾಪುರ ಸೇರಿ ವಿವಿಧ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಡಾಂಬರ್‌ ಕಿತ್ತು ಹೋಗಿದ್ದು, ದೊಡ್ಡ ಗುಂಡಿಗಳು ಬಿದ್ದಿವೆ. ಶಾಸಕರ ವಾಹನ ಹದಗೆಟ್ಟು ಹೋಗಿರುವ ರಸ್ತೆಯಲ್ಲಿ ಸಂಚರಿಸಿದರೂ, ಈ ರಸ್ತೆಗಳ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ‘ ಎಂದರು.

‘ಗುಂಡಿ ಬಿದ್ದ ರಸ್ತೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಈ ರಸ್ತೆಗಳನ್ನು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಇಲ್ಲದಿದ್ದರೆ, ಪಕ್ಷದ ಕಾರ್ಯಕರ್ತರೊಂದಿಗೆ ಹೋರಾಟ ನಡೆಸಲಾಗುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಿತ್ತು ಹೋದ ರಸ್ತೆ

ಡಂಬಳ: ಸತತ ಮಳೆಯಾಗಿದ್ದರಿಂದ ಡಂಬಳ–ಮುಂಡರಗಿ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ತುಂಬ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

‘ಗ್ರಾಮದ ದೊಡ್ಡಬಸವೇಶ್ವರ ದೇವಸ್ಥಾನದ ಹತ್ತಿರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆ ಕೂಡ ಹದಗೆಟ್ಟಿದೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಕ್ಕಳು, ಮಹಿಳೆಯರು, ವೃದ್ಧರು ರಸ್ತೆಯಲ್ಲಿ ಸಂಚರಿಸುವ ವೇಳೆ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ.

ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರಾದ ಕುಬೇರಪ್ಪ ಬಂಡಿ, ಸುರೇಶ ಗಡಗಿ ಹೇಳಿದರು.

‘ರಸ್ತೆ ಮೇಲೆ ಚರಂಡಿ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ’ ಎಂದು ಗ್ರಾಮಸ್ಥರಾದ ಸಿದ್ದಪ್ಪ ಕರಿಗಾರ, ಗವಿಸಿದ್ದಪ್ಪ ಹಾದಿಮನಿ ಅವರು ಆತಂಕ ವ್ಯಕ್ತಪಡಿಸಿದರು.

Post Comments (+)