ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಗೊಬ್ಬರಕ್ಕೆ ಭಾರಿ ಬೇಡಿಕೆ

Last Updated 27 ಅಕ್ಟೋಬರ್ 2017, 6:34 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ರೈತರು ಈಚೆಗೆ ಸಾವಯವ ಕೃಷಿಯತ್ತ ಆಸಕ್ತಿ ತೋರಿಸುತ್ತಿದ್ದು, ಪರಿಣಾಮ ತಿಪ್ಪೆ ಗೊಬ್ಬರ ಮತ್ತು ಕುರಿ ಹಿಕ್ಕೆ ಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ತಾಲ್ಲೂಕಿನಲ್ಲಿ ತಯಾರಿಸುವ ಕುರಿ ಹಿಕ್ಕೆ ಗೊಬ್ಬರಕ್ಕೆ ಮಲೆನಾಡು ಭಾಗದಲ್ಲಿ ಭಾರಿ ಬೇಡಿಕೆ ಇದ್ದು, ಅಲ್ಲಿಂದ ರೈತರು ಇಲ್ಲಿಗೆ ಬಂದು ಗೊಬ್ಬರ ಖರೀದಿಸುತ್ತಿದ್ದಾರೆ. ಮಲೆನಾಡಿನ ಅಡಿಕೆ ತೋಟಕ್ಕೆ ಲಕ್ಷ್ಮೇಶ್ವರದ ಕುರಿ ಗೊಬ್ಬರ ಪೂರೈಕೆಯಾಗುತ್ತಿದೆ.

ಹಾಲುಮತ, ಬಂಜಾರ, ಮುಸ್ಲಿಂ, ಭೋವಿ ಜನಾಂಗದವರು ಕುರಿ, ಆಡುಗಳನ್ನು ಸಾಕುವುದರಲ್ಲಿ ನಿಪುಣರಾಗಿದ್ದು ಅದರಲ್ಲೇ ಅವರು ಬದುಕು ಕಟ್ಟಿಕೊಂಡಿದ್ದಾರೆ. ತಾಲ್ಲೂಕಿನ ಕುಂದ್ರಳ್ಳಿ, ಬಟ್ಟೂರು, ಪುಟಗಾಂವ್‌ಬಡ್ನಿ, ಸೂರಣಗಿ, ಬಾಲೆಹೊಸೂರು, ಯಲ್ಲಾಪುರ, ಕಡಕೋಳ, ಮಾಚೇನಹಳ್ಳಿ, ಬೆಳ್ಳಟ್ಟಿ ಗ್ರಾಮಗಳಲ್ಲಿ ಕುರಿ ಸಾಕಾಣಿಕೆ ಹೆಚ್ಚಿದ್ದು, ಈ ಭಾಗಗಳಲ್ಲಿ ಈಗ ಕುರಿ ಗೊಬ್ಬರ ಮಾರಾಟ ಜೋರಾಗಿ ನಡೆಯುತ್ತಿದೆ.

ಕುರಿಗಾರರು ನೂರಾರು ಕುರಿಗಳನ್ನು ಒಟ್ಟಿಗೆ ಸಾಕಲು, ದೊಡ್ಡಿಗಳನ್ನು ನಿರ್ಮಿಸಿಕೊಂಡಿರುತ್ತಾರೆ. ನಿತ್ಯ ಅಲ್ಲಿಯೇ ಕುರಿಗಳು ಬಿಡಾರ ಹೂಡುತ್ತವೆ. ಇಲ್ಲಿ ಸಂಗ್ರಹವಾಗುವ ಹಿಕ್ಕೆಗಳನ್ನು ಆಯ್ದು ಗುಡ್ಡೆ ಮಾಡಿ ಕುರಿಗಾರರು ಗೊಬ್ಬರ ತಯಾರಿಸುತ್ತಾರೆ. ಹೀಗೆ ಸಿದ್ಧವಾದ ಗೊಬ್ಬರದಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ. ಶಿವಮೊಗ್ಗ ಜಿಲ್ಲೆ ಸೊರಬ, ಸಾಗರ ತಾಲ್ಲೂಕು ಸೇರಿ ಮಲೆನಾಡು ಭಾಗದಲ್ಲಿ ಕುರಿಗೊಬ್ಬರವನ್ನು ಅಡಿಕೆ ತೋಟಗಳಿಗೆ ಹೆಚ್ಚಾಗಿ ಬಳಸುತ್ತಾರೆ.

ಈ ಗೊಬ್ಬರ ಹಾಕುವುದರಿಂದ ಅಡಿಕೆ ಮರಗಳು ಚೆನ್ನಾಗಿ ಬೆಳೆಯುತ್ತವೆ ಮತ್ತು ಉತ್ತಮ ಇಳುವರಿ ಕೊಡುತ್ತವೆ. ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಹೀಗಾಗಿ, ಆ ಭಾಗದ ಅಡಿಕೆ ಬೆಳೆಗಾರರು ಇಲ್ಲಿಗೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಕುರಿ ಗೊಬ್ಬರ ಖರೀದಿಸುತ್ತಾರೆ.

‘ನಾನು ಆರು ತಿಂಗಳಿಗೊಮ್ಮೆ ಗೊಬ್ಬರ ಮಾರತೇನ್ರೀ. ಒಮ್ಮೆ ಮಾರಿದರ ₹ 10ರಿಂದ ₹ 15 ಸಾವಿರ ಸಿಗತೈತಿ’ ಎಂದು ಲಕ್ಷ್ಮೇಶ್ವರ ಸಮೀಪದ ಅಮರಾಪುರ ಗ್ರಾಮದ ಕುರಿಗಾರ ಚೆನ್ನಪ್ಪ ಕುರಿ ಹೇಳಿದರು.

‘ನಾವು ಕುರಿಗಾರರಿಂದ ಗೊಬ್ಬರ ಖರೀದಿಸಿ, ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಮಾರುತ್ತೇವೆ. ಅಲ್ಲಿ ಈ ಗೊಬ್ಬರಕ್ಕೆ ಭಾರಿ ಬೇಡಿಕೆ ಇದೆ’ ಎಂದು ಸೊರಬದಿಂದ ಇಲ್ಲಿಗೆ ಕುರಿ ಗೊಬ್ಬರ ಖರೀದಿಸಲು ಬಂದಿದ್ದ ಕುಶಾಲಪ್ಪ ಹೇಳಿದರು.

‘ಜಿಲ್ಲೆಯಲ್ಲಿ ಹೆಚ್ಚಿನ ಇಳುವರಿ ಆಸೆಗೆ ರೈತರು ಮಿತಿಮೀರಿ ರಾಸಾಯನಿಕ ಗೊಬ್ಬರ ಬಳಸಿದ ಪರಿಣಾಮ ಭೂಮಿ ಫಲವತ್ತತೆ ಕಳೆದುಕೊಂಡಿವೆ. ನಮ್ಮ ಭಾಗದ ರೈತರು ಹೆಚ್ಚಾಗಿ ಸಾವಯವ ಗೊಬ್ಬರ ಬಳಸುವಂತೆ ಪ್ರೊತ್ಸಾಹ ನೀಡಬೇಕು.ಇದರಿಂದ ಈ ಭಾಗದ ಕುರಿಗಾರರಿಗೂ ಒಂದಿಷ್ಟು ವರಮಾನ ಲಭಿಸುತ್ತದೆ’ ಎನ್ನುತ್ತಾರೆ ಲಕ್ಷ್ಮೇಶ್ವರದ ಸಾವಯವ ಕೃಷಿಕ ಬಸವರಾಜ ಬೆಂಡಿಗೇರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT