ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರಿಗೂ ಸಿಕ್ಕಿತು ಬಾಲಮಂದಿರದ ನೆರಳು

Last Updated 27 ಅಕ್ಟೋಬರ್ 2017, 9:17 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿ ಬಾಲಕಿಯರ ಬಾಲಮಂದಿರ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಇದು ಕಾನೂನು ಸಮಸ್ಯೆಗಳ ಸುಳಿಗೆ ಸಿಲುಕುವ ಹೆಣ್ಣು ಮಕ್ಕಳ ಬಾಳಿಗೆ ಹೊಸ ಬೆಳಕು ಮೂಡಿಸಿದೆ. ನಗರದ ಟ್ಯಾಂಕ್‌ಮೊಹಲ್ಲಾದ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಬಾಲಮಂದಿರ ಕಾರ್ಯನಿರ್ವಹಿಸಲಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಕಾನೂನು ತೊಡಕಿಗೆ ಸಿಲುಕಿದ, ವಶಕ್ಕೆ ಪಡೆದ 18 ವರ್ಷದ ಒಳಗಿನ ಬಾಲಕಿಯರಿಗೆ ಆಶ್ರಯ ಕಲ್ಪಿಸಲು ಬಾಲಮಂದಿರದ ಆವಶ್ಯಕತೆ ಇತ್ತು. ಆದರೆ, ಜಿಲ್ಲೆಯಲ್ಲಿ ಬಾಲಕಿಯರಿಗೆ ಪ್ರತ್ಯೇಕ ಮಂದಿರ ಇಲ್ಲದ ಕಾರಣ ಅನಿವಾರ್ಯವಾಗಿ ಸರ್ಕಾರೇತರ ಸಂಸ್ಥೆಗಳು ನಡೆಸುವ ಅನಾಥಾಶ್ರಮಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸುತ್ತಿದ್ದರು. ಕೆಲವು ಬಾರಿ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿತ್ತು.

1975ರಲ್ಲೇ ಬಾಲಕರ ಬಾಲಮಂದಿರ ಆರಂಭ: ಜಿಲ್ಲೆಯಲ್ಲಿ 1975ರಲ್ಲೇ ಬಾಲಕರ ಬಾಲಮಂದಿರ ಆರಂಭವಾಗಿತ್ತು. ಆದರೆ, ಬಾಲಕಿಯರಿಗೆ ಅಂತಹ ಅವಕಾಶ ದೊರೆತಿರಲಿಲ್ಲ. ಪ್ರಸ್ತುತ ಆಲ್ಕೊಳದಲ್ಲಿ ಇರುವ ಬಾಲಕರ ಮಂದಿರದಲ್ಲಿ ವಿವಿಧ ಪ್ರಕರಣಗಳ ಅಡಿ ಶಿಫಾರಸುಗೊಂಡ 75 ಬಾಲಕರು ಆಶ್ರಯ ಪಡೆದಿದ್ದಾರೆ. 100 ಬಾಲಕರಿಗೆ ಅಲ್ಲಿ ಆಶ್ರಯ ನೀಡಲು ಅವಕಾಶವಿದೆ.

100 ಬಾಲಕಿಯರಿಗೂ ಆಶ್ರಯ: ಪ್ರಸ್ತುತ ಕಾರ್ಯಾರಂಭ ಮಾಡುತ್ತಿರುವ ಬಾಲಕಿಯರ ಬಾಲ ಮಂದಿರದಲ್ಲಿ 100 ಬಾಲಕಿಯರಿಗೆ ಆಶ್ರಯ ಕಲ್ಪಿಸಲು ಅನುಮತಿ  ದೊರೆತಿದೆ. ಟ್ಯಾಂಕ್‌ಮೊಹಲ್ಲಾದಲ್ಲಿ ಮಾಸಿಕ ₹ 22 ಸಾವಿರ ಬಾಡಿಗೆಗೆ ಕಟ್ಟಡ ಪಡೆಯಲಾಗಿದೆ. ಬಾಲ ನ್ಯಾಯ ಮಂಡಳಿಗೆ ನೋಂದಣಿಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ನೋಂದಣಿಯಾದ ತಕ್ಷಣ ಸುರಭಿ, ಉಜ್ವಲ ಸಂಸ್ಥೆಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ಕಳುಹಿಸಲಾದ ಎಲ್ಲ ಬಾಲಕಿಯರನ್ನೂ ಬಾಲಮಂದಿರಕ್ಕೆ ಕರೆತರಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿವೆ ನಿರ್ಗತಿಕ ಮಕ್ಕಳ 9 ಕುಟೀರಗಳು: ಜಿಲ್ಲೆಯಲ್ಲಿ ಸರ್ಕಾರಿ ಬಾಲಮಂದಿರ ಹೊರತುಪಡಿಸಿ ಸರ್ಕಾರೇತರ ಖಾಸಗಿ ಸಂಸ್ಥೆಗಳು ನಡೆಸುವ ನಿರ್ಗತಿಕ ಮಕ್ಕಳ 9 ಕುಟೀರಗಳಿವೆ. ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ಮಾತೃಛಾಯಾ ಸರ್ವಧರ್ಮ ಅನಾಥಾಲಯ, ಸಾಗರ ತಾಲ್ಲೂಕು ಆನಂದಪುರಂನ ಜಗದ್ಗುರು ಲಿಂಗಸ್ವಾಮಿ ಅನಾಥಾಶ್ರಮ, ಶಿಕಾರಿಪುರದ ಬಸವ ಸೇವಾಸಂಸ್ಥೆ, ಹೊಳೆಹೊನ್ನೂರು, ಹೊಳೆಬೆನವಳ್ಳಿಯ ಕನಕದಾಸ ಸಂಸ್ಥೆ, ಸೊರಬ ತಾಲ್ಲೂಕು ಮೂಡಿಯ ಸದಾಶಿವ ಕುಟೀರ, ಚೆನ್ನವೀರೇಶ್ವರ ಕುಟೀರ, ಸೊಲಬೇಶ್ವರ ಕುಟೀರ, ಕಂಠೇಶ್ವರ ಕುಟೀರಗಳು ಅನಾಥ, ನಿರ್ಗತಿಕ ಮಕ್ಕಳಿಗೆ ಆಶ್ರಯ ಕಲ್ಪಿಸಿವೆ.

ಖಾಸಗಿ ಸಂಸ್ಥೆಗಳು ನಡೆಸುವ ಅನಾಥಾಶ್ರಮಗಳಲ್ಲಿ 25 ಮಕ್ಕಳಿಗೆ ಮಾತ್ರ ಸರ್ಕಾರ ಅನುದಾನ ನೀಡುತ್ತದೆ. ಪ್ರತಿ ಮಕ್ಕಳಿಗೆ ಮಾಸಿಕ ₹ 1 ಸಾವಿರ ನಿಗದಿ ಮಾಡಲಾಗಿದೆ. ಅದರಲ್ಲಿ ಶೇ 90ರಷ್ಟು ಸರ್ಕಾರ, ಶೇ 10ರಷ್ಟು ಆಯಾ ಸಂಸ್ಥೆಗಳೇ ಭರಿಸಬೇಕು. ಏಕ ಪೋಷಕರು, ಅನಾಥರು, ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳಿಗೆ ನಿಯಮದಂತೆ ಕುಟೀರಗಳಲ್ಲಿ ಪ್ರವೇಶ ನೀಡಲಾಗುತ್ತದೆ.

ಮೂರು ವರ್ಷಗಳಿಗೂ ಹಿಂದೆ ಇಂತಹ ಮಕ್ಕಳನ್ನು ಸೇರಿಸಿಕೊಳ್ಳುವಾಗ ಆಯಾ ತಾಲ್ಲೂಕಿನ ತಹಶೀಲ್ದಾರರಿಂದ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯವಾಗಿತ್ತು. ಈಗ ಸ್ಥಳೀಯ ಅಂಗನವಾಡಿ ಶಿಕ್ಷಕಿಯರೇ ದೃಢೀಕರಣ ಪತ್ರ ನೀಡುತ್ತಾರೆ. ಕುಟೀರ ಆರಂಭಿಸುವವರು ಬಾಲನ್ಯಾಯ ಕಾಯ್ದೆ ಅಡಿ ನೋಂದಣಿ ಮಾಡಿಸಬೇಕು. ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಕುಟೀರ ನಡೆಸಬೇಕು.

ಯಾವುದೇ ಧಾರ್ಮಿಕ ಆಚರಣೆಯನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು. ಮಕ್ಕಳಿಗೆ ನಿಗದಿ ಪಡಿಸಿದ ಆಹಾರ, ಕೊಠಡಿ, ಸಮವಸ್ತ್ರ, ಹೊದಿಕೆ, ಶುದ್ಧನೀರು ಒದಗಿಸುವುದು ಆಯಾ ಸಂಸ್ಥೆಗಳ ಜವಾಬ್ದಾರಿ. ದಾಖಲಾದ ಎಲ್ಲ ಮಕ್ಕಳಿಗೂ ಅವರ ಅರ್ಹತೆಗೆ ಅನುಗುಣವಾಗಿ ಶಿಕ್ಷಣ ಕಲಿಯಲು ಸಮೀಪದ ವಿದ್ಯಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಬೇಕು. ಪ್ರತಿ ಮಗುವಿನ ಆರೋಗ್ಯದ ಕಾಳಜಿ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT