ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು

Last Updated 27 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಿಗ್ಗೆ 11 ಗಂಟೆಗೆ ಧರ್ಮಸ್ಥಳಕ್ಕೆ ಬರಲಿದ್ದು, ಧರ್ಮಸ್ಥಳ ಮತ್ತು ಉಜಿರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅವರು ಧರ್ಮಸ್ಥಳದಿಂದ ತೆರಳಲಿದ್ದಾರೆ. ಈ ಸಂದರ್ಭ ಸಂಚಾರ ವ್ಯವಸ್ಥೆಗಳಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಲ್‌.ಎಚ್‌.ಮಂಜುನಾಥ ತಿಳಿಸಿದ್ದಾರೆ.

ಧರ್ಮಸ್ಥಳ ಉಜಿರೆ ಸಂಚಾರ ವ್ಯವಸ್ಥೆ: ಧರ್ಮಸ್ಥಳ– ಉಜಿರೆ ನಡುವೆ ಭಾನುವಾರ ಬೆಳಿಗ್ಗೆ 9 ಗಂಟೆಯ ನಂತರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಕೊಕ್ಕಡ ಕಡೆಯಿಂದ ಉಜಿರೆಗೆ ಕಾರ್ಯಕ್ರಮಕ್ಕೆ ಹೋಗ ಬಯಸುವವರು 9 ಗಂಟೆಯೊಳಗಾಗಿ ಉಜಿರೆ ತಲುಪಬೇಕು. ಇಲ್ಲವೇ ಕೊಕ್ಕಡ-ನೆಲ್ಯಾಡಿ-ಉಪ್ಪಿನಂಗಡಿ-ಗುರುವಾಯನಕೆರೆ-ಬೆಳ್ತಂಗಡಿಯಾಗಿ ಉಜಿರೆ ಪ್ರವೇಶಿಸಬಹುದು. ಚಾರ್ಮಾಡಿ, ಮಂಗಳೂರು ಕಡೆಯಿಂದ ಬರುವ ರಸ್ತೆಗಳು ಮುಕ್ತವಾಗಿರುತ್ತವೆ.

ಉಜಿರೆ ಕಾರ್ಯಕ್ರಮಕ್ಕೆ ಸೂಚನೆ: ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಬರಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಕಾರ್ಯಕ್ರಮವನ್ನು ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಉಜಿರೆ ಕಡೆಯಿಂದ, ಬೆಳಾಲು ರಸ್ತೆಯ ಮೂಲಕ ಕ್ರೀಡಾಂಗಣಕ್ಕೆ ಪ್ರವೇಶ ಕಲ್ಪಿಸಲಾಗಿದೆ.

ಬೆಳಿಗ್ಗೆಯಿಂದಲೇ ಉಜಿರೆಯಿಂದ ಕಾಲೇಜು ಕಡೆಗಿರುವ ದ್ವಿಸಂಚಾರ ರಸ್ತೆಯಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಕಾರ್ಯಕ್ರಮಕ್ಕೆ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು, ವಾಹನದಲ್ಲಿ ಬಂದು ಜನಾರ್ದನ ಸ್ವಾಮಿ ರಥಬೀದಿಯಲ್ಲಿ ಇಳಿದು ನಡೆದುಕೊಂಡು ಕ್ರೀಡಾಂಗಣಕ್ಕೆ ಬರಬೇಕು. ಎಲ್ಲ ಸಾರ್ವಜನಿಕರು ಬೆಳಿಗ್ಗೆ 10.30 ರೊಳಗಾಗಿ ಕ್ರೀಡಾಂಗಣವನ್ನು ಪ್ರವೇಶಿಸಿ ಆಸೀನರಾಗಬೇಕು.

ವಿಐಪಿ ಪಾಸ್ ಹೊಂದಿರುವವರು ಉಜಿರೆ ಕಾಲೇಜ್ ಬಸ್‌ನಿಲ್ದಾಣದ ಸಮೀಪ ರಚಿಸಲಾಗಿರುವ ದ್ವಾರದಿಂದ ಪ್ರವೇಶಿಸಬೇಕು. ವಾಹನಗಳಲ್ಲಿ ಬರುವ ವಿಐಪಿ ಪಾಸುದಾರರು, ಅಲ್ಲಿಯೇ  ಇಳಿದು ತಮ್ಮ ವಾಹನವನ್ನು ಅಜ್ಜರಕಲ್ಲು ವಾಹನ ನಿಲುಗಡೆಗೆ ಕಳುಹಿಸಬೇಕು. ಎಲ್ಲ ಪಾಸುದಾರರು ತಮಗೆ ಒದಗಿಸಲಾದ ಪಾಸ್ ಮತ್ತು ಫೋಟೋ ಐಡಿಯನ್ನು ತರುವುದು ಕಡ್ಡಾಯ. ವಾಹನದಲ್ಲಿ ಬರುವ ವಿಐಪಿ ಪಾಸುದಾರರು ವಾಹನ ಪಾಸ್ ಪಡೆದುಕೊಂಡಿರಬೇಕು.

ಕ್ರೀಡಾಂಗಣದಲ್ಲಿ ನೀರಿನ ಬಾಟಲ್ ಮತ್ತು ಚೀಲಗಳನ್ನು ನಿಷೇಧಿಸಲಾಗಿದೆ. ಕ್ರೀಡಾಂಗಣದಲ್ಲಿ ಪ್ರತ್ಯೇಕ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಬೆಳ್ತಂಗಡಿ ಕಡೆಯಿಂದ ಬರುವವರಿಗೆ ಉಜಿರೆ ಜನಾರ್ದನ ಸ್ವಾಮಿ ಪ್ರಾಥಮಿಕ ಶಾಲೆ ಅಜ್ಜರಕಲ್ಲು ಮೈದಾನದಲ್ಲಿ ಹಾಗೂ ಇತರರಿಗೆ ಜನಾರ್ದನ ಸ್ವಾಮಿ ರಥಬೀದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನದಲ್ಲಿ ಬಂದಿಳಿದ ಕಾರು

ಧರ್ಮಸ್ಥಳ ಭೇಟಿಯ ಸಮಯದಲ್ಲಿ ಪ್ರಧಾನಿಯವರ ಬಳಕೆಗಾಗಿ ದೆಹಲಿಯಿಂದ ಗುಂಡು ನಿರೋಧಕ ಐಷಾರಾಮಿ ಕಾರನ್ನು ವಿಮಾನದಲ್ಲಿ ಶುಕ್ರವಾರ ತರಲಾಗಿದೆ. ವಾಯುಪಡೆ ವಿಮಾನದಲ್ಲಿ ಗುರುವಾರ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣಕ್ಕೆ ಕಾರನ್ನು ತರಲಾಗಿದೆ. ಭಾನುವಾರ ಬೆಳಿಗ್ಗೆ ಈ ಕಾರು ಧರ್ಮಸ್ಥಳ ತಲುಪಲಿದೆ. ಉಜಿರೆ ಹೆಲಿಪ್ಯಾಡ್‌ನಿಂದ ಧರ್ಮಸ್ಥಳ ದೇವಸ್ಥಾನ, ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭ ಮುಗಿಸಿ ಹೆಲಿಪ್ಯಾಡ್‌ಗೆ ಹಿಂದಿರುಗುವವರೆಗೆ ಪ್ರಧಾನಿಯವರು ಈ ಕಾರನ್ನು ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT