ರೈತರ ಕೈಹಿಡಿಯಿತು ರಾಗಿ ಬೆಳೆ

ಸೋಮವಾರ, ಮೇ 27, 2019
33 °C

ರೈತರ ಕೈಹಿಡಿಯಿತು ರಾಗಿ ಬೆಳೆ

Published:
Updated:
ರೈತರ ಕೈಹಿಡಿಯಿತು ರಾಗಿ ಬೆಳೆ

ಕಡೂರು: ನಾಲ್ಕು ವರ್ಷಗಳ ಬರದಿಂದ ಕಂಗೆಟ್ಟಿದ್ದ ಕಡೂರು ತಾಲ್ಲೂಕಿನಲ್ಲಿ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡುವ ಅವಕಾಶವೇ ಇಲ್ಲದೆ ಕಂಗಾಲಾಗಿದ್ದ ರೈತಾಪಿ ವರ್ಗವನ್ನು ರಾಗಿ ಕೈಹಿಡಿದಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಈ ಬಾರಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವುದು ಖಾತರಿಯಾಗಿದೆ.

ಮುಂಗಾರು ಸಂಪೂರ್ಣವಾಗಿ ಕೈಕೊಟ್ಟು ಹತ್ತಿ ಮತ್ತು ಈರುಳ್ಳಿ ಬಿತ್ತನೆ ತೀರಾ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿತ್ತು. ಅದೂ ಕೊಳವೆಬಾವಿ ಇದ್ದವರು ಮಾತ್ರ ಈರುಳ್ಳಿ ಮತ್ತು ಹತ್ತಿ ಹಾಕಿದ್ದರು. ಮಿಕ್ಕಂತೆ ಇಡೀ ಹೊಲಗಳು ಖಾಲಿಯಾಗಿದ್ದವು. ಸೆಪ್ಟೆಂಬರ್ ಕಡೇ ವಾರದಲ್ಲಿ ಬಂದ ಸ್ವಲ್ಪ ಮಳೆಗೆ ರೈತರು ರಾಗಿ ಬಿತ್ತನೆ ನಡೆಸಿದರು. ಕೃಷಿ ಇಲಾಖೆ ಹಾಕಿಕೊಂಡಿದ್ದ 32 ಸಾವಿರ ಹೆಕ್ಟೇರ್ ಗುರಿಯನ್ನೂ ಮೀರಿ 37 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ನಡೆದಿತ್ತು.

ನಂತರದಲ್ಲಿ ಸಮಾಧಾನಕರವಾಗಿ ಸುರಿದ ಮಳೆಯಿಂದ ಇಡೀ ತಾಲ್ಲೂಕಿನಲ್ಲಿ ರಾಗಿ ಬೆಳೆ ಸಮೃದ್ಧವಾಗಿ ಬಂದಿದೆ. ಈಗಾಗಲೇ ಕಾಳುಕಟ್ಟುವ ಹಂತದಲ್ಲಿರುವ ರಾಗಿ ಬೆಳೆ ಬಹುತೇಕ ಕಡೆ 2 1/2 ಅಡಿಗಳಷ್ಟು ಬೆಳೆದಿದೆ. ಸದ್ಯಕ್ಕೆ ಸ್ವಲ್ಪ ಮಳೆ ಬಂದರೂ ರಾಗಿ ಫಸಲು ಕೈಗೆ ಬಂದಂತೆ. ಇಲ್ಲದಿದ್ದರೆ ಕಾಳಿನ ಇಳುವರಿ ಕಡಿಮೆಯಾಗುತ್ತದೆ. ಮೇವಿಗಂತೂ ಮೋಸವಿಲ್ಲ. ಹಾಗಾಗಿ, ಜಾನುವಾರುಗಳನ್ನು ಉಳಿಸಿಕೊಳ್ಳಲು ಕಷ್ಟವಾಗಲಾರದು ಎಂಬುದು ರೈತರ ಅನಿಸಿಕೆ.

ತಾಲ್ಲೂಕಿನಲ್ಲಿ ರಾಗಿ ಬೆಳೆಗೆ ಕೊಂಡ್ಲಿ ಹುಳುವಿನ ಕಾಟ ಹೆಚ್ಚಾಗಿತ್ತು. ರಾಗಿ ಬೆಳೆಗೆ ಕೀಟ ಬಾಧೆಯನ್ನೇ ಕಾಣದ ರೈತರೂ ಚಿಂತಾಕ್ರಾಂತರಾಗಿದ್ದರು. ಆದರೆ, ರಾಗಿ ಬೆಳೆದಂತೆ ಹುಳುಗಳ ಕಾಟವೂ ಕಡಿಮೆಯಾಗಿದೆ. ಬಹುತೇಕ ರೈತರು ಇಂಡಾಫ್ ಎಂಬ ಸುಧಾರಿತ ತಳಿ(120 ದಿನಗಳು) ಮತ್ತು ಸ್ಥಳೀಯವಾಗಿ ದೊರೆಯುವ 90 ದಿನಗಳ ರಾಗಿ ಬಿತ್ತನೆಯಾಗಿದೆ. ಮುಂದಿನ 20 ದಿನಗಳಲ್ಲಿ ಕೊಯ್ಲು ಆರಂಭವಾಗಲಿದೆ.

ಹಿಂಗಾರು ಬೆಳೆಗಳಾದ ಜೋಳವನ್ನು 8000 ಹೆಕ್ಟೇರ್, ಹುರುಳಿಯನ್ನು 5000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ವಾಡಿಕೆಯಂತೆ 5000 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಹಿಂಗಾರು ಮಳೆ ಬಂದರೆ ಕಡಲೆ ಬಿತ್ತನೆ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಒಟ್ಟಾರೆಯಾಗಿ ಬರದಿಂದ ಕಂಗೆಟ್ಟು ಜಾನುವಾರುಗಳ ಹೊಟ್ಟೆಗೇನು ಮಾಡುವುದು ಎಂಬ ಚಿಂತೆಯಲ್ಲಿದ್ದ ರೈತರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಬಾಲುಮಚ್ಚೇರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry