ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ ಟೆಂಡರ್‌ ಪೂರ್ಣಗೊಳಿಸಲು ಸೂಚನೆ

Last Updated 28 ಅಕ್ಟೋಬರ್ 2017, 6:32 IST
ಅಕ್ಷರ ಗಾತ್ರ

ಧಾರವಾಡ: 'ಉಣಕಲ್‌ನಿಂದ ಹೆಬ್ಬಳ್ಳಿಗೆ ಸಂಪರ್ಕಿಸುವ ರಸ್ತೆ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯನ್ನು ಹತ್ತು ದಿನಗಳ ಒಳಗಾಗಿ ಪೂರ್ಣಗೊಳಿಸಿ, ಕೆಲಸ ಆರಂಭಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಪಿಡಬ್ಲ್ಯುಡಿ ಅಧಿಕಾರಿಗೆ ಸೂಚಿಸಿದರು.

ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 'ತಾಲ್ಲೂಕಿನ ಹೆಬ್ಬಳ್ಳಿಯಿಂದ ಉಣಕಲ್‌ಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೂ ಈವರೆಗೂ ಟೆಂಡರ್‌ ಪ್ರಕ್ರಿಯೆ ಏಕೆ ಪೂರ್ಣಗೊಳಿಸಿಲ್ಲ' ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವಿ.ಎನ್.ಪಾಟೀಲ, ‘ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿರುವ ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿವೆ. ಆದರೆ, ಇಲಾಖೆಯಲ್ಲಿ ಅಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಇದನ್ನು ಆದಷ್ಟು ಬೇಗ ಬಗೆಹರಿಸಲಾಗುವುದು’ ಎಂದರು.

ಕೃಷಿ ಇಲಾಖೆ ಅಧಿಕಾರಿ ಎಂ.ಕೆ.ಹಿರೇಮಠ ಮಾತನಾಡಿ, ‘ತಾಲ್ಲೂಕಿನಾದ್ಯಂತ ವಾಡಿಕೆಯಂತೆ 123 ಮಿ.ಮೀ ಮಳೆ ಆಗಬೇಕಿತ್ತು. ಆದರೆ ಮಳೆ ಕಡಿಮೆಯಾಗಿದ್ದರೂ ಬಿತ್ತನೆಗೆ ಪೂರಕವಾಗುವ ರೀತಿಯಲ್ಲಿ ಮಳೆಯಾಗಿದೆ. ಇದರಿಂದ ಶೇ 55ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈವರೆಗೂ ಕಡಲೆ, ಜೋಳ ಹಾಗೂ ಗೋದಿ ಬಿತ್ತನೆ ಹೆಚ್ಚಾಗಿದೆ. ರೈತರಿಗೆ ತೊಂದರೆ ಆಗದಂತೆ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದೆ’ ಎಂದರು.

‘ಭೂಮಿಯಲ್ಲಿನ ಹೆಚ್ಚಿನ ತೇವಾಂಶದಿಂದ ಕಡಲೆ ಬೆಳೆಗೆ ಸಿಡುಬು ರೋಗ ಹಾಗೂ ಜೋಳಕ್ಕೆ ಕೀಟಭಾದೆ ಕಾಣಿಸಿಕೊಂಡಿದೆ. ಹೀಗಾಗಿ ರೋಗ ತಡೆಗಟ್ಟಲು ಈಗಾಗಲೇ ರೈತರಿಗೆ ಔಷಧಿ ವಿತರಿಸಲಾಗುತ್ತಿದೆ. ಸದ್ಯ ಇಲಾಖೆಯಲ್ಲಿ ಕೃಷಿಭಾಗ್ಯ ಯೋಜನೆಯಡಿ ಸುಮಾರು ₹ 5 ರಿಂದ 6 ಲಕ್ಷ ಹಣ ಇದೆ. ಕೃಷಿ ಹೊಂಡ ನಿರ್ಮಿಸಿಕೊಳ್ಳ ಬಯಸುವ ರೈತರ ಬೇಡಿಕೆಗೆ ಅನುಗುಣವಾಗಿ ಸಹಾಯಧನ ನೀಡಲಾಗುವುದು’ ಎಂದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ ಮಾತನಾಡಿ, 'ಕೃಷಿ ಇಲಾಖೆಯಿಂದ ವಿತರಿಸಲಾದ ಪಂಪ್‌ಸೆಟ್‌ಗಳು ಹಾಳಾಗುತ್ತಿವೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಜಾಗೃತಿ ವಹಿಸಿ ಪಂಪಸೆಟ್‌ಗಳನ್ನು ಪರೀಕ್ಷಿಸಬೇಕು. ದೋಷಗಳಿದ್ದರೆ ಸರಿಪಡಿಸಬೇಕು' ಎಂದು ಕೃಷಿ ಅಧಿಕಾರಿಗೆ ತಿಳಿಸಿದರು.

ಪಶುಪಾಲನಾ ಇಲಾಖೆ ಅಧಿಕಾರಿ ಮಾತನಾಡಿ, ‘ಜಿಲ್ಲೆಯಾದ್ಯಂತ ನ. 1 ರಿಂದ 25 ರವರೆಗೆ 13ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ನಿಗದಿ ಪಡಿಸಿದ ತಂಡವು ಗ್ರಾಮದ ರೈತರ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲಿದೆ. ಹೀಗಾಗಿ ಜಾನುವಾರು ಮಾಲೀಕರು ಹಾಗೂ ಜನಪ್ರತಿನಿಧಿಗಳು ಜಾನುವಾರುಗಳಿಗೆ ಲಸಿಕೆ ಹಾಕಲು ಇಲಾಖೆಯೊಂದಿಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

'ತಾಲ್ಲೂಕಿನಾದ್ಯಂತ ದನಕರುಗಳಿಗೆ ಸಾಕಷ್ಟು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ರೈತರು ಔಷಧಿಗಾಗಿ ಪರದಾಡುವ ವ್ಯವಸ್ಥೆ ನಿರ್ಮಾಣವಾಗಿದೆ. ಔಷಧಿ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು' ಎಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಪ್ಪ, ‘ಹೆಚ್ಚು ಔಷಧ ಪೂರೈಕೆ ಸಂಬಂಧ ಠರಾವು ಮಾಡಬೇಕು. ಮುಂದಿನ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು’ ಎಂದರು. ತಾಲ್ಲೂಕು ಪಂಚಾಯ್ತಿ ಇಒ ಎಸ್‌.ಎಂ.ರುದ್ರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT