‘ದ್ವಿಚಕ್ರ ವಾಹನದಲ್ಲಿ ಸಂಚರಿಸಿದ್ದೀರಾ’

ಶುಕ್ರವಾರ, ಮೇ 24, 2019
29 °C

‘ದ್ವಿಚಕ್ರ ವಾಹನದಲ್ಲಿ ಸಂಚರಿಸಿದ್ದೀರಾ’

Published:
Updated:

ಮಂಗಳೂರು: ‘ನೀವು ಎಂದಾದರೂ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ್ದೀರಾ? ಅದೂ ಬಲ್ಮಠ–ಬೆಂದೂರವೆಲ್‌ ರಸ್ತೆಯಲ್ಲಿ ಓಡಾಡಿದ್ದೀರಾ? ಒಮ್ಮೆ ಅಲ್ಲಿಗೆ ಹೋಗಿ ಬನ್ನಿ’.

ಇಲ್ಲಿಯ ಮಹಾನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರೂ, ಮೇಯರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

‘ಇತ್ತೀಚೆಗೆ ಈ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೆ ಒಳಗಾಗಿದ್ದೇನೆ. ನಮ್ಮ ತಾಯಿಯ ಸೊಂಟಕ್ಕೆ ಏಟಾಗಿದೆ. ನನಗೂ ಗಾಯವಾಗಿದೆ. ಇದಕ್ಕೆ ಯಾರು ಹೊಣೆ? ನಮಗೆ ಆದ ತೊಂದರೆಯ ಜವಾಬ್ದಾರಿ ನೀವು ಹೊರುತ್ತೀರಾ’ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಕವಿತಾ ಸನಿಲ್‌, ಮಳೆಗಾಲ ಆರಂಭವಾಗಿದ್ದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಮಳೆಗಾಲ ಮುಗಿದ ತಕ್ಷಣ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆ ಬಂದರೆ ಕಾಮಗಾರಿ ನಡೆಯುತ್ತದೆ. ಪಾಲಿಕೆಗೆ ಏಕೆ ಸಾಧ್ಯವಾಗುವುದಿಲ್ಲ ಎಂದು ಕೇಳಿದರು.

ಕೂಡಲೇ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಮಳೆಗಾಲದ ನಂತರ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಭರವಸೆ ನೀಡಿದರು.

ಸುರತ್ಕಲ್‌, ಅಳಿಪೆ, ಪಡೀಲ್‌ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ನೀರು, ಕುಡಿಯುವ ನೀರಿನೊಂದಿಗೆ ಸೇರುತ್ತಿದೆ. ಒಳಚರಂಡಿಗಳು ತುಂಬಿ ರಸ್ತೆಗಳಲ್ಲಿಯೇ ಕೊಳಚೆ ನೀರು ಹರಿಯುತ್ತಿದೆ ಎಂಬ ದೂರುಗಳು ಕೇಳಿ ಬಂದವು.

ಇದಕ್ಕೆ ಪ್ರತಿಕ್ರಿಯಿಸಿದ ಕವಿತಾ ಸನಿಲ್‌, ಎಡಿಬಿ 2 ನೇ ಹಂತದ ಯೋಜನೆಯಡಿ ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗೆ ₹54 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ. ನವೆಂಬರ್‌ನಲ್ಲಿ ಟೆಂಡರ್‌ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅಶೋಕನಗರ, ಚಿಲಿಂಬಿ ಪ್ರದೇಶದ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರು ತೋಡುಗಳಲ್ಲಿ ಹರಿಯುತ್ತಿರುವುದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಹೊಸ ಸೇತುವೆ: ಕುದ್ರೋಳಿಯ ಅಳಿಕೆಯಲ್ಲಿ ಹೊಸ ಸೇತುವೆ ನಿರ್ಮಾಣ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರೊಬ್ಬರು ದೂರಿದರು.

ಈ ಮೊದಲು ಸಿದ್ಧಪಡಿಸಿದ್ದ ಪ್ರಸ್ತಾವನೆಯಲ್ಲಿ ಸಣ್ಣ ಮೋರಿ ನಿರ್ಮಿಸಲು ನಿರ್ಧರಿಸಲಾಗಿತ್ತು.

ನಂತರ ದೊಡ್ಡ ಮೋರಿ ಅಳವಡಿಸಿ, ಕಾಮಗಾರಿ ನಡೆಸಲು ಪರಿಷ್ಕೃತ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಟೆಂಡರ್‌ ಕರೆದು, ಡಿಸೆಂಬರ್‌ನಲ್ಲಿ ಕಾಮಗಾರಿ ನಡೆಯಲಿದೆ. ಈ ಪ್ರದೇಶದಲ್ಲಿ ಸಂಪರ್ಕ ರಸ್ತೆ ಹಾಗೂ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮೇಯರ್‌ ಭರವಸೆ ನೀಡಿದರು. ಉಪ ಮೇಯರ್ ರಜನೀಶ್‌ ಕಾಪಿಕಾಡ್‌, ಸಚೇತಕ ಎಂ. ಶಶಿಧರ್‌ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry