ಸೋಮವಾರ, ಸೆಪ್ಟೆಂಬರ್ 16, 2019
21 °C

ಸಿನಿಮಾ ಬಾನಂಗಳದ ಬೆಳದಿಂಗಳ ಖುಷಿ–ಶಶಿ!

Published:
Updated:
ಸಿನಿಮಾ ಬಾನಂಗಳದ ಬೆಳದಿಂಗಳ  ಖುಷಿ–ಶಶಿ!

ನೂರಿನ್ನೂರು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಕಲಾವಿದರು ಚಿತ್ರರಂಗದಲ್ಲಿ ಸಾಕಷ್ಟಿದ್ದಾರೆ. ಆದರೆ, ನೂರು ಚಿತ್ರಗಳನ್ನು ರೂಪಿಸಿದ ನಿರ್ದೇಶಕ? ಅಂಥವರನ್ನು ಬೆರಳಿನಲ್ಲಿಯೇ ಎಣಿಸಬೇಕು. ತೆಲುಗಿನ ದಾಸರಿ ನಾರಾಯಣರಾವ್‌ ‘ಸಿನಿಮಾ ಫ್ಯಾಕ್ಟರಿ’ ಎಂದೇ ಹೆಸರಾದವರು. ಅಂಥ ಮತ್ತೊಂದು ಫ್ಯಾಕ್ಟರಿ ಮಲಯಾಳಂ ಚಿತ್ರರಂಗದ ಐ.ವಿ. ಶಶಿ. ಭಾರತೀಯ ಚಿತ್ರರಂಗದ ನಿರ್ದೇಶಕರ ಪಟ್ಟಿಯಲ್ಲಿ ಇಬ್ಬರೂ ಸೂಪರ್‌ ಸ್ಟಾರ್‌ಗಳು!

ಶಶಿ ಮತ್ತು ದಾಸರಿ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಇಬ್ಬರೂ 150ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದವರು. ಸಂಖ್ಯಾದೃಷ್ಟಿಯಿಂದ ಮಾತ್ರವಲ್ಲದೆ, ಗುಣಮಟ್ಟದ ಚಿತ್ರಗಳನ್ನು ರೂಪಿಸುವುದರಲ್ಲೂ ಯಶಸ್ವಿಯಾದುದು ಇವರಿಬ್ಬರ ವಿಶೇಷ ಸಾಧನೆ. ನಿರಂತರ ಪ್ರಯೋಗಶೀಲತೆಯಲ್ಲಿ ನಂಬಿಕೆ ಹೊಂದಿದ್ದ ಈ ನಿರ್ದೇಶಕರು, ಕಮರ್ಷಿಯಲ್‌ ಸಿನಿಮಾಗಳಿಗೆ ಜೀವಜಲದಂತೆ ಪರಿಣಮಿಸಿದವರು. ಮುಂದಿನ ದಿನಗಳಲ್ಲಿ ಸೂಪರ್‌ ಸ್ಟಾರ್‌ಗಳಾಗಿ ರೂಪುಗೊಂಡ ನಟರನ್ನು ಪರಿಚಯಿಸಿದ್ದು ಇವರ ಮತ್ತೊಂದು ಅಗ್ಗಳಿಕೆ. ಕಳೆದ ಮೇ 30ರಂದು ದಾಸರಿ ನಿಧನರಾದರು. ಅದಾದ ಐದು ತಿಂಗಳ ಅವಧಿಯಲ್ಲಿ ಶಶಿ ತೀರಿಕೊಂಡಿದ್ದಾರೆ (ನಿಧನ: ಅ. 24).

ಶಶಿ ಮಲಯಾಳಂ ಚಿತ್ರರಂಗ ಕಂಡ ಮೊದಲ ಸೂಪರ್‌ಸ್ಟಾರ್‌ ನಿರ್ದೇಶಕ. ಮಲಯಾಳಂನಲ್ಲಿ ನಿರ್ದೇಶಕನ ಹೆಸರಿನ ಮೇಲೆ ಚಿತ್ರವೊಂದನ್ನು ಗುರ್ತಿಸಲಿಕ್ಕೆ ಆರಂಭವಾದುದು ಅವರಿಂದಲೇ. ಶೋಮ್ಯಾನ್‌ ಎಂದೇ ಚಿತ್ರರಂಗದಲ್ಲಿ ಪ್ರಸಿದ್ಧರಾದ ಅವರು ಸುಮಾರು ನಾಲ್ಕು ದಶಕಗಳ ಕಾಲ ನಿರಂತರವಾಗಿ ಸಿನಿಮಾಗಳನ್ನು ರೂಪಿಸಿದವರು. ತಾರಾ ವರ್ಚಸ್ಸಿನ ನಾಯಕ ನಟರ ಕಾಲ್‌ಷೀಟ್‌ಗೆ ಕಾಯುವಂತೆ ಶಶಿ ಅವರಿಗೂ ನಿರ್ಮಾಪಕರು ಕಾಯುತ್ತಿದ್ದ ದಿನಗಳಿದ್ದವು.

ಇರುಪ್ಪಮ್ ವೀಡು ಶಶಿಧರನ್ (ಜ: 28 ಮಾರ್ಚ್‌ 1948) ಕೇರಳದ ಕೋಯಿಕ್ಕೋಡ್‌ಗೆ ಸಮೀಪದ ವೆಸ್ಟ್‌ ಹಿಲ್‌ ಊರಿನವರು. ಸಿನಿಮಾ ಮಾಡುವ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಅವರು ಮೊದಲು ಕಲಾ ನಿರ್ದೇಶಕನಾಗಿ ಕೆಲಸ ಮಾಡಿದರು. ಸಹಾಯಕ ನಿರ್ದೇಶಕನಾಗಿ ಹಲವು ಸಿನಿಮಾಗಳಲ್ಲಿ ದುಡಿದ ಶಶಿ, ತಮ್ಮ 27ನೇ ವಯಸ್ಸಿನಲ್ಲಿ ಮೊದಲ ಸಿನಿಮಾ ನಿರ್ದೇಶಿಸಿದರು. ಆದರೆ, ಟೈಟಲ್‌ ಕಾರ್ಡ್‌ನಲ್ಲಿ ಅವರ ಹೆಸರೇ ಇರಲಿಲ್ಲ.

ಶಶಿ ಅವರಿಗೆ ನಿರ್ದೇಶಕರಾಗಿ ಹೆಸರು ತಂದುಕೊಟ್ಟಿದ್ದು ‘ಅವಳುಡೆ ರಾವುಗಳ’ (ಅವಳ ರಾತ್ರಿಗಳು – 1978). ಎಂಬತ್ತರ ದಶಕದ ಭಾರತೀಯ ಚಿತ್ರರಸಿಕರ ಯೌವನದ ಭಾಗವಾಗಿರುವ ಈ ಸಿನಿಮಾ, ಮಲಯಾಳಂನಲ್ಲಿ ಸಾಫ್ಟ್‌ ಪೋರ್ನ್‌ ಸಿನಿಮಾಗಳಿಗೆ ಮುನ್ನುಡಿ ಬರೆಯುವುದರ ಜೊತೆಗೆ ಹಲವು ಭಾರತೀಯ ಭಾಷೆಗಳಿಗೆ ಡಬ್‍ ಆಗಿತ್ತು. ಮಲಯಾಳಂನಲ್ಲಿ ಸೆನ್ಸಾರ್‌ನಿಂದ ಮೊದಲ ಬಾರಿಗೆ ‘ಎ’ ಪ್ರಮಾಣಪತ್ರ ಪಡೆದ ಚಿತ್ರವಿದು. ಒದ್ದೆಯಾದ ದೊಗಲೆ ಬಿಳಿ ಅಂಗಿಯನ್ನು ತೊಟ್ಟ ನಾಯಕಿಯ ಕಪ್ಪು–ಬಿಳುಪು ಪೋಸ್ಟರ್‌ ನೋಡುಗರ ಮನಸ್ಸಿನಲ್ಲಿ ‘ಈಸ್ಟ್‌ಮನ್‌ ಕಲರ್‌’ ಕನಸುಗಳ ಸುನಾಮಿಯನ್ನೇ ಎಬ್ಬಿಸಿತ್ತು.

‘ಅವಳುಡೆ ರಾವುಗಳ್’ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಶಶಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರೆ, ಚಿತ್ರದ ನಾಯಕಿ ಸೀಮಾ ನಟಿಯಾಗಿ ಜನಪ್ರಿಯರಾದರು. ನಿರ್ದೇಶಕರಾಗಿ ಶಶಿ ಹಲವು ಯಶಸ್ವಿ ಚಿತ್ರಗಳನ್ನು ರೂಪಿಸಿದರೂ, ‘ಅವಳುಡೆ ರಾವುಗಳ್‌’ ಅವರಿಗೆ ತುಂಬಾ ಪ್ರಿಯವಾದ ಚಿತ್ರವಾಗಿತ್ತು. ಏಕೆಂದರೆ, ಈ ಸಿನಿಮಾ ಅವರಿಗೆ ಜನಪ್ರಿಯತೆಯನ್ನಷ್ಟೇ ತಂದುಕೊಡಲಿಲ್ಲ; ಸಂಗಾತಿಯನ್ನೂ ದೊರಕಿಸಿಕೊಟ್ಟಿತು. ಚಿತ್ರದ ನಾಯಕಿ ಸೀಮಾ ನಿಜಜೀವನದಲ್ಲಿ ಶಶಿ ಅವರಿಗೆ ಹೀರೊಯಿನ್‌ ಆದರು.

‘ಅವಳುಡೆ ರಾವುಗಳ್‌’ ಸಿನಿಮಾವನ್ನು ‘ಸೆಕ್ಸ್‌ ಮಸಾಲೆ’ ರೂಪದಲ್ಲಿ ಪ್ರೇಕ್ಷಕರು ಸ್ವೀಕರಿಸಿದರೂ, ಅದು ಬದಲಾಗುತ್ತಿರುವ ಸಾಮಾಜಿಕ ಕಾಲಘಟ್ಟವೊಂದರ ತುಣುಕನ್ನು ದೃಶ್ಯಮಾಧ್ಯಮದಲ್ಲಿ ಹಿಡಿದಿಡುವ ಮಹತ್ವಾಕಾಂಕ್ಷೆಯ ಪ್ರಯತ್ನವೂ ಆಗಿತ್ತು. ಬೀದಿಬದಿಯಲ್ಲಿ ನಿಲ್ಲುವ ವೇಶ್ಯೆಯ ಕಥನದ ಈ ಸಿನಿಮಾ, ಸಮಾಜದಲ್ಲಿನ ಲೈಂಗಿಕ ಮನಸ್ಥಿತಿಯ ಶೋಧದಂತಿತ್ತು. ಕೇರಳದ ಯುವತಿಯರು ಶಿಕ್ಷಣದ ಮೂಲಕ ಸ್ವಾತಂತ್ರ್ಯ–ಸಮಾನತೆಯ ದಾರಿಯನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದ ಸಂದರ್ಭದಲ್ಲಿ ರೂಪುಗೊಂಡ ಈ ಸಿನಿಮಾದ ಕಥನದಲ್ಲಿ ಸೂಕ್ಷ್ಮವಾದ ಸ್ತ್ರೀವಾದಿ ಸಂವೇದನೆಯನ್ನು ಗುರ್ತಿಸಬಹುದು.

‘ಅವಳುಡೆ ರಾವುಗಳ್‌’ ಮಾತ್ರವಲ್ಲ – ಶಶಿ ಅವರ ಹಲವು ಸಿನಿಮಾಗಳು ಸಮಾಜವನ್ನು ಬೇರುಮಟ್ಟದಲ್ಲಿ ಕಾಡುತ್ತಿರುವ ಭ್ರಷ್ಟಾಚಾರ, ಅಸಮಾನತೆ, ಬಾಲ್ಯವಿವಾಹ, ಹೆಣ್ಣಿನ ಶೋಷಣೆಯಂಥ ಸಮಸ್ಯೆಗಳನ್ನು ಬಿಂಬಿಸುವ ಕೃತಿಗಳೇ ಆಗಿವೆ.

ಕನ್ನಡದ ಪುಟ್ಟಣ್ಣ ಕಣಗಾಲರಂತೆ ಶಶಿ ಕೂಡ ಅನೇಕ ಕಲಾವಿದರನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದರು. ಕೇರಳದ ಸೂಪರ್‌ಸ್ಟಾರ್‌ ಮಮ್ಮೂಟ್ಟಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಅಗ್ಗಳಿಕೆ ಅವರದು. ಮಮ್ಮೂಟ್ಟಿ ಅವರ ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಅವರದು. ಮತ್ತೊಬ್ಬ ಖ್ಯಾತನಟ ಮೋಹನ್‌ಲಾಲ್‌ ಕೂಡ ಶಶಿ ಅವರ ಹಲವು ಚಿತ್ರಗಳಲ್ಲಿ ನಟಿಸಿದರು. ಇವರಿಬ್ಬರ ಜೋಡಿಯ ‘ದೇವಾಸುರಂ’ ಮಲಯಾಳಂನ ಸೂಪರ್‌ಹಿಟ್‌ ಚಿತ್ರಗಳಲ್ಲೊಂದು. ರಜನಿಕಾಂತ್‌ರನ್ನು ‘ಅಲ್ಲಾವುದ್ದೀನುಂ ಅಲ್ಬುದ ವಿಳಕ್ಕುಂ’ ಮೂಲಕ ಮಲಯಾಳಂಗೆ ಪರಿಚಯಿಸಿದ ಶಶಿ, ‘ಗುರು’ ಚಿತ್ರದಲ್ಲಿ ಕಮಲ್‌ ಹಾಸನ್‌ ಅವರೊಂದಿಗೂ ಕೆಲಸ ಮಾಡಿದ್ದಾರೆ. ಜಯನ್‌, ಸುಕುಮಾರನ್, ಸೋಮನ್‌, ರತೀಶ್‌ – ಇವರೆಲ್ಲ ಶಶಿಗಾರುಡಿಯಲ್ಲಿ ಪಳಗಿದ ಕಲಾವಿದರೇ ಆಗಿದ್ದಾರೆ.

‘ಗುರ’, ‘ಈ ನಾಡು’, ‘ಅಂಗಾಡಿ’, ‘ಅನುಭವ’, ‘1921’, ‘ಇನ್‌ಸ್ಪೆಕ್ಟರ್‌ ಬಲರಾಂ’, ‘ಉಲ್ಸವಂ’, ‘ಆರುಧಮ್‌’ (ನರ್ಗಿಸ್‌ ದತ್‌ ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾ), ‘ರಂಗಂ’, ‘ಅನುಬಂಧಂ’ – ಇವು ಶಶಿ ರೂಪಿಸಿದ ಕೆಲವು ಗಮನಾರ್ಹ ಚಿತ್ರಗಳು. ತಮ್ಮ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿಗಳನ್ನೂ ರಾಜ್ಯಪುರಸ್ಕಾರಗಳನ್ನೂ ಪಡೆದಿರುವ ಶಶಿ, ಎಲ್ಲ ಗೌರವಗಳಿಗೂ ಮಿಗಿಲಾಗಿ ಚಿತ್ರರಸಿಕರ ಮೆಚ್ಚಿನ ನಿರ್ದೇಶಕನಾಗಿ ಗುರ್ತಿಸಿಕೊಂಡ ಬಗೆ ಅನನ್ಯವಾದುದು. ಚಿತ್ರಜೀವನದ ಉತ್ತುಂಗದ ದಿನಗಳಲ್ಲಿ ತಿಂಗಳಿಗೊಂದು, ಎರಡು ತಿಂಗಳಿಗೊಂದು ಚಿತ್ರಗಳನ್ನು ಅವರು ರೂಪಿಸಿರುವುದೂ ಇದೆ.

ಸಂಖ್ಯಾ ಉತ್ಕರ್ಷದ ಜೊತೆಗೆ ಪ್ರಯೋಗಶೀಲತೆಯ ಹಂಬಲವನ್ನು ಅವರು ಬಿಟ್ಟುಕೊಡಲಿಲ್ಲ, ಕಳಪೆ ಚಿತ್ರಗಳನ್ನು ರೂಪಿಸಲಿಲ್ಲ. ಸಾಂಪ್ರದಾಯಿಕ ಫ್ರೇಮಿಂಗ್‌ಗಳಾಚೆಗೆ ತುಡಿದ ಅವರು, ಬೆಳಕಿನ ವಿನ್ಯಾಸದಲ್ಲೂ ಹೊಸತಿಗಾಗಿ ಹಂಬಲಿಸಿದರು. ಅವರ ಚಿತ್ರಗಳ ಕ್ಯಾಮೆರಾದ ಚಲನೆಯಲ್ಲಿ ಹಾಗೂ ಸಂಕಲನದಲ್ಲಿ ಆ ಕಾಲಕ್ಕೆ ಅಪರೂಪವೆನ್ನಿಸುವ ವೇಗವಿತ್ತು. ಹೊರಾಂಗಣ ಚಿತ್ರೀಕರಣವನ್ನು ಮಲಯಾಳಂನಲ್ಲಿ ಜನಪ್ರಿಯಗೊಳಿಸಿದ್ದರಲ್ಲಿ ಅವರದು ಮುಖ್ಯ ಪಾತ್ರವಾಗಿತ್ತು. ‘ತುಷಾರ’ ಚಿತ್ರವನ್ನು ಸಂಪೂರ್ಣವಾಗಿ ಕಾಶ್ಮೀರದಲ್ಲಿ ಚಿತ್ರೀಕರಿಸಿದ್ದರು.

ಮಲಬಾರ್‌ ಸಂಘರ್ಷದ ಕಥೆ ಒಳಗೊಂಡಿದ್ದ ‘1921’ ದುಬಾರಿ ಬಜೆಟ್‌ನ ಯುದ್ಧ ಕಥಾನಕದ ಚಿತ್ರವಾಗಿತ್ತು. ಹಿಂಸೆ ಮತ್ತು ಲೈಂಗಿಕತೆಯನ್ನು ಒಳಗೊಂಡ ಕಥಾವಸ್ತುಗಳನ್ನು ನಿರ್ವಹಿಸುವ ದಿಟ್ಟತನ ಪ್ರದರ್ಶಿಸಿದರು.

ಸಾಹಿತಿ ಎಂ.ಟಿ. ವಾಸುದೇವನ್‌ ನಾಯರ್‌, ಖ್ಯಾತ ಚಿತ್ರಕಥಾ ಲೇಖಕ ಟಿ. ದಾಮೋದರನ್‌ರಂಥ ಪ್ರಸಿದ್ಧರೊಂದಿಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದು ಒಳ್ಳೆಯ ಚಿತ್ರಗಳನ್ನು ರೂಪಿಸುವ ಅವರ ಹಂಬಲವನ್ನು ಸೂಚಿಸುವಂತಿತ್ತು. ಜಾನಪದ ಹಾಗೂ ಚಾರಿತ್ರಿಕ ಹೀರೋಗಳ ಕಥನದ ಬದಲಾಗಿ ನಾವು ಬದುಕುತ್ತಿರುವ ಸಮಾಜದೊಳಗಿನ ಕಥೆಗಳನ್ನೇ ಅವರು ಸಿನಿಮಾ ಮಾಡಿದರು.

ಶಶಿ ತಮ್ಮ ಕೆಲವು ಚಿತ್ರಗಳನ್ನು ಹಿಂದಿ ಮತ್ತು ತಮಿಳಿನಲ್ಲಿ ಮರುರೂಪಿಸುವ ಪ್ರಯತ್ನ ಮಾಡಿದರು. ಆದರೆ, ತವರಿನಲ್ಲಿ ಸಿಕ್ಕಷ್ಟು ಯಶಸ್ಸು ಉಳಿದೆಡೆ ದೊರೆಯಲಿಲ್ಲ.

ಅನು ಹಾಗೂ ಅನಿ, ಶಶಿ–ಸೀಮಾ ದಂಪತಿಯ ಮಕ್ಕಳು. ಅನಿ ಕೂಡ ಅಪ್ಪನಂತೆ ನಿರ್ದೇಶಕನಾಗಿ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ನಿರ್ದೇಶಕನಾಗಿ ಐವತ್ತು ವರ್ಷ ತುಂಬುವ ಸಂದರ್ಭದಲ್ಲಿ ಶಶಿ ನಿರ್ಗಮಿಸಿದ್ದಾರೆ. ಮಲಯಾಳಂ ಚಿತ್ರಚರಿತ್ರೆಯಲ್ಲಿ ಅವರು ಮೂಡಿಸಿದ ಛಾಪು ಅಳಿಸಲಾಗದಂತಹದ್ದು. ಶಶಿ ಅವರಂಥ ಬೆರಗು ಯಾವುದೇ ಭಾಷೆಯಲ್ಲಾದರೂ ಪದೇ ಪದೇ ಸಂಭವಿಸುವಂತಹದ್ದಲ್ಲ.

Post Comments (+)