ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ’

ಒಸಾಟ್‌ ಎಜುಕೇಷನಲ್‌ ಚಾರಿಟಬಲ್‌ ಟ್ರಸ್ಟ್‌ ಕಾರ್ಯ ಯೋಜನೆ ಅನಾವರಣ
Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗುಣಮಟ್ಟದ ಶಿಕ್ಷಣಕ್ಕಾಗಿ ಬೋಧನೆಯ ಜತೆಗೆ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕು’ ಎಂದು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ 'ಒಸಾಟ್‌ ಎಜುಕೇಷನಲ್‌ ಚಾರಿಟಬಲ್‌ ಟ್ರಸ್ಟ್‌' ಆಯೋಜಿಸಿದ್ದ 'ಒಸಾಟ್‌ ಅನಾವರಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಾಲೆಯ ಛಾವಣಿ ಯಾವಾಗ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿ ಮಕ್ಕಳು ಪಾಠ ಕೇಳುವಂತಹ ಸ್ಥಿತಿ ಇರಬಾರದು. ಉತ್ತಮ ಸಮಾಜ ನಿರ್ಮಿಸಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಮೂಲಸೌಕರ್ಯ ವಂಚಿತ ಗ್ರಾಮೀಣ ಶಾಲೆಗಳನ್ನು ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸುತ್ತಿರುವ ಒಸಾಟ್‌ ಸಂಸ್ಥೆಯ ಕಾರ್ಯ ಪ್ರಶಂಸನೀಯ’ ಎಂದರು.

ಪಿಇಎಸ್‌ ವಿಶ್ವವಿದ್ಯಾಲಯದ ಸಹ ಕುಲಪತಿ ಜವಾಹರ ದೊರೆಸ್ವಾಮಿ ಮಾತನಾಡಿ, ‘ಪಿಇಎಸ್‌ ಸಂಸ್ಥೆಯಿಂದ ಪ್ರತಿ ವರ್ಷ ಒಂದು ಶಾಲೆಯನ್ನು ಒಸಾಟ್‌ ಸಂಸ್ಥೆ ಸಹಯೋಗದಲ್ಲಿ ಅಭಿವೃದ್ಧಿಪಡಿಸುತ್ತೇವೆ’ ಎಂದು ಹೇಳಿದರು.

ಒಸಾಟ್‌ ಅಧ್ಯಕ್ಷ ಬಿ.ವಿ.ಜಗದೀಶ್‌ ಮಾತನಾಡಿ, ‘ಮಕ್ಕಳನ್ನು ಶಾಲೆಗೆ ಸೆಳೆಯಬೇಕಾದರೆ ಸುಸಜ್ಜಿತ ಬೋಧನಾ ಕೊಠಡಿಗಳು ಇರಬೇಕು. ಗ್ರಂಥಾಲಯ, ಪ್ರಯೋಗಾಲಯ, ಆಟ–ಪಾಠೋಪಕರಣಗಳು ಇರಬೇಕು. ಎಲ್ಲ ಶಾಲೆಗಳಲ್ಲೂ ಅಗತ್ಯ ಮೂಲಸೌಕರ್ಯಗಳಿದ್ದರೆ ಮಾತ್ರ ಶಿಕ್ಷಣ ಸುಧಾರಣೆಯ ಪರಿಕಲ್ಪನೆ ಸಾಧ್ಯವಾಗಿಸಬಹುದು’ ಎಂದರು.

ಮಹಾರಾಷ್ಟ್ರದ ರಾವಲ್‌ಗುಂಡೆವಾಡಿಯ ಮಹಾದೇವ ವಿದ್ಯಾಲಯ ಶಾಲೆಯ ಮುಖ್ಯ ಶಿಕ್ಷಕ ಎಸ್‌.ಎನ್‌.ಗಡಿಕರ್‌ ಮಾತನಾಡಿ, ‘ರಾವಲ್‌ಗುಂಡೆವಾಡಿ ಅಪ್ಪಟ ಕನ್ನಡಿಗರು ಇರುವ ಊರು. ನಾವು ಕನ್ನಡಿಗರೆಂದು ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ಮಾಡಿದರೆ, ಭೌಗೋಳಿಕವಾಗಿ ಮಹಾರಾಷ್ಟ್ರದಲ್ಲಿದ್ದೇವೆ ಎನ್ನುವ ಕಾರಣಕ್ಕೆ ಕರ್ನಾಟಕ ಸರ್ಕಾರದಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ. ಇಂಥ ಸಂದರ್ಭದಲ್ಲಿ ಒಸಾಟ್‌ ಸಂಸ್ಥೆ ನಮ್ಮ ಕೈಹಿಡಿಯಿತು. ಶಿಥಿಲ ಸ್ಥಿತಿಯಲ್ಲಿದ್ದ ಶಾಲೆಗೆ 7 ಬೋಧನಾ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದೆ. ಸುಸಜ್ಜಿತ ಸೌಕರ್ಯ ಸಿಕ್ಕಿದ ಮೇಲೆ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಫಲಿತಾಂಶವೂ ಹೆಚ್ಚಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT