ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳಿಗೆ ಚಿಕಿತ್ಸೆಗಾಗಿ ಚೈತನ್ಯ ಚಿಕಿತ್ಸಾ ಕೇಂದ್ರ ಆರಂಭ

ಮಂಗಳವಾರ, ಜೂನ್ 25, 2019
26 °C

ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳಿಗೆ ಚಿಕಿತ್ಸೆಗಾಗಿ ಚೈತನ್ಯ ಚಿಕಿತ್ಸಾ ಕೇಂದ್ರ ಆರಂಭ

Published:
Updated:
ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳಿಗೆ ಚಿಕಿತ್ಸೆಗಾಗಿ ಚೈತನ್ಯ ಚಿಕಿತ್ಸಾ ಕೇಂದ್ರ ಆರಂಭ

ದಾವಣಗೆರೆ: ‘ಸಮಗ್ರ ಅಂಗವಿಕಲರ ಪುನರ್ವಸತಿ ಪ್ರಾದೇಶಿಕ ಕೇಂದ್ರ’ (CRC–Composite Regional Center) ದಾವಣಗೆರೆಯಲ್ಲಿ ಕಾರ್ಯಾರಂಭ ಮಾಡಿದೆ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ‘ಬುದ್ಧಿಮಾಂದ್ಯ ಮಕ್ಕಳ ರಾಷ್ಟ್ರೀಯ ಸಂಸ್ಥೆಯ ಪ್ರಾದೇಶಿಕ ಕೇಂದ್ರ’ದ (NIMH-National Institute for the Mentally Handicapped Regional Center) ಅಡಿಯಲ್ಲಿ ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿನ ಸರ್ಕಾರಿ ಅಂಧ ಹೆಣ್ಣುಮಕ್ಕಳ ಪಾಠಶಾಲೆಯ ಆವರಣದ ನೂತನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಈ ಕೇಂದ್ರ ಆರಂಭವಾಗಿದೆ.

ಇದು ರಾಜ್ಯದಲ್ಲಿಯೇ ಪ್ರಥಮ ಕೇಂದ್ರವಾಗಿದ್ದು, ನೆರೆ ರಾಜ್ಯ ಗೋವಾವನ್ನೂ ಇದರ ಅಡಿಯಲ್ಲಿಯೇ ತರುವ ಚಿಂತನೆ ಕೂಡ ನಡೆದಿದೆ.

ಬುದ್ಧಿಮಾಂದ್ಯ ಮಕ್ಕಳಿಗೆ ಅನುಕೂಲ: ‘ಅಂಗವೈಕಲ್ಯಕ್ಕೆ ಒಳಗಾದವರು ಹಾಗೂ ಬುದ್ಧಿಮಾಂದ್ಯ ಸಮಸ್ಯೆಯಿಂದ ನರುಳುತ್ತಿರುವ 160 ರೋಗಿಗಳು ಚಿಕಿತ್ಸೆಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಿಂದ ನಿತ್ಯ ಕನಿಷ್ಠ 15 ಬುದ್ಧಿಮಾಂದ್ಯ ಮಕ್ಕಳು ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಕೇಂದ್ರದ ವೈದ್ಯ ಡಾ.ವಿಜಯ್‌ ಬಾತ್ರಾ ಮಾಹಿತಿ ನೀಡಿದರು.

‘ಬುದ್ಧಿಮಾಂದ್ಯ ಮಕ್ಕಳಿಗೆ ಚೈತನ್ಯ ನೀಡುವಂತಹ ಫಿಸಿಯೋಥೆರಪಿ, ಆಕ್ಯುಪೇಷನಲ್‌ ಫಿಸಿಯೋಥೆರಪಿ, ನರರೋಗ ಚಿಕಿತ್ಸೆ, ಮಾತಿನ ಚಿಕಿತ್ಸೆ ಒಳಗೊಂಡಂತೆ ಅಂಗವೈಕಲ್ಯಕ್ಕೆ ಸಂಬಂಧಿಸಿದ ಎಲ್ಲ ಚಿಕಿತ್ಸೆಗಳನ್ನು ಕೇಂದ್ರದಲ್ಲಿ ನೀಡಲಾಗುತ್ತಿದೆ. ಜೊತೆಗೆ ಸಮಸ್ಯೆ ಇರುವವರನ್ನು ನೋಡಿಕೊಳ್ಳುವ ಪೋಷಕರಿಗೆ ತಜ್ಞರಿಂದ ತರಬೇತಿಯನ್ನೂ ನೀಡಲಾಗುತ್ತಿದೆ’ ಎಂದು ಹೇಳುತ್ತಾರೆ ಅವರು.

5 ಎಕರೆ ಜಾಗಕ್ಕೆ ಮನವಿ: ‘ಕೇಂದ್ರ ಸ್ಥಾಪನೆಗೆ ಕನಿಷ್ಠ 5 ಎಕರೆ ನಿವೇಶನದ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಪ್ರಸ್ತುತ ಆನಗೋಡು ಬಳಿ ಮೂರು ಎಕರೆ ನಿವೇಶನ ನೀಡಲಾಗಿದೆ. ಅಲ್ಲಿ ಕೇಂದ್ರ ಆರಂಭಿಸಿದಲ್ಲಿ ಅಂಗವಿಕಲರು ಹಾಗೂ ಬುದ್ಧಿಮಾಂದ್ಯ ಮಕ್ಕಳ ಪೋಷಕರಿಗೆ ಕೇಂದ್ರಕ್ಕೆ ಬರಲು ತೊಂದರೆಯಾಗುತ್ತದೆ. ನಗರದ ಮಧ್ಯಭಾಗದಲ್ಲಿಯೇ ನಿವೇಶನ ನೀಡಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

‘ಅಂಗವಿಕಲ ಮಕ್ಕಳಿಗೆ ಪುನರ್ವಸತಿಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರಿಗೆ ಇಲ್ಲಿನ ಹಿಮೊಫಿಲಿಯಾ ಸೊಸೈಟಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತರಬೇತಿ ಶಿಬಿರ ಹಾಗೂ ಕಾರ್ಯಾಗಾರ ಆಯೋಜಿಸಲಾಗುತ್ತಿದೆ’ ಎಂದರು.

‘ಅಂಗವಿಕಲರಿಗೆ ಅಗತ್ಯ ಸಾಧನ, ಸಲಕರಣೆ ಹಾಗೂ ಕೃತಕ ಕೈ, ಕಾಲು ತಯಾರಿಕೆ, ಜೋಡಣೆ ಮಾಡಲು ಜಿಲ್ಲಾಡಳಿತವು ತಾತ್ಕಾಲಿಕವಾಗಿ ಇಲ್ಲಿನ ಕಾವೇರಮ್ಮ ಶಾಲೆಯ 8 ಕೊಠಡಿಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದೆ’ ಎಂದು ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶಶಿಧರ ಹೇಳುತ್ತಾರೆ.

‘ನಗರದಲ್ಲಿ ಕೇಂದ್ರ ಆರಂಭವಾಗಿದ್ದು ಒಳ್ಳೆಯದು. ಮಗನು ಬುದ್ಧಿಮಾಂದ್ಯನಾಗಿದ್ದು, ಆತನಿಗೆ ಫಿಸಿಯೋಥೆರಪಿ ಹಾಗೂ ಮಾತಿನ ಚಿಕಿತ್ಸೆ ಕೊಡಿಸುತ್ತಿದ್ದೇವೆ’ ಎಂದು ಹರಪನಹಳ್ಳಿಯ ಶಿವಣ್ಣ ಹೇಳುತ್ತಾರೆ.

**

ವೈದ್ಯರಿಗೆ ಸಂವಹನ ಕೊರತೆ...

‘ಅಂಗವಿಕಲ ಮಕ್ಕಳಿಗೆ ಚಿಕಿತ್ಸೆ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಕೇಂದ್ರದ ವೈದ್ಯರಿಗೆ ದೊಡ್ಡ ಸವಾಲು. ಬಹುತೇಕ ರೋಗಿಗಳು ಹಾಗೂ ಪೋಷಕರು ಕನ್ನಡದಲ್ಲಿಯೇ ತಮ್ಮ ನೋವನ್ನು ವೈದ್ಯರ ಬಳಿ ಹೇಳಿಕೊಳ್ಳುತ್ತಾರೆ. ಆದರೆ, ಕನ್ನಡ ಭಾಷೆ ಮಾತನಾಡಲು ಬಾರದೆ ಇರುವಂತಹ ವೈದ್ಯರನ್ನು ನೇಮಕ ಮಾಡಲಾಗಿದೆ.

ನಿರ್ದೇಶಕ, ವೈದ್ಯರು ಹಾಗೂ ಆಡಳಿತಾಧಿಕಾರಿ, ಸಿಬ್ಬಂದಿ ಸೇರಿದಂತೆ ಒಟ್ಟು 13 ವಿವಿಧ ಹುದ್ದೆಗಳಿಗೆ ನೇಮಕಗೊಂಡ ಹೆಚ್ಚಿನವರಲ್ಲಿ ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಸೇರಿದವರು. ರಾಜ್ಯದ ವೈದ್ಯರಿಗೂ ಅವಕಾಶ ನೀಡಬೇಕಿತ್ತು. ಈ ತಾಂತ್ರಿಕ ತೊಂದರೆಯನ್ನು ಸ್ಥಳೀಯ ಸಂಸದರು ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸರಿಪಡಿಸಬೇಕು’ ಎಂದು ಸಿಕಂದರಾಬಾದ್‌ನಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ರಾಷ್ಟ್ರೀಯ ಸಂಸ್ಥೆಯ ಪ್ರಾದೇಶಿಕ ಕೇಂದ್ರದ (ಎನ್‌ಐಎಂಎಚ್‌) ವಿಶೇಷ ಶಿಕ್ಷಣ ವಿಭಾಗದ ಪ್ರಾಂಶುಪಾಲ ಗಣೇಶ್‌ ಶಿರೇಗಾರ್‌ ಒತ್ತಾಯಿಸಿದರು.

**

ಸ್ಥಳೀಯ ವೈದ್ಯರ ನೇಮಕಕ್ಕೆ ಮನವಿ

‘ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ₹ 10 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕವಾಗಿ ನೂತನ ಕಟ್ಟಡವನ್ನು ನಿರ್ಮಿಸಿ, ಸಮಗ್ರ ಅಂಗವಿಕಲರ ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ. ಸ್ಥಳೀಯ ಭಾಷೆ ಮಾತನಾಡುವ ವೈದ್ಯರ ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎನ್ನುತ್ತಾರೆ ಸಂಸದ ಜಿ.ಎಂ.ಸಿದ್ದೇಶ್ವರ.

(ಸಂಸದ ಜಿ.ಎಂ.ಸಿದ್ದೇಶ್ವರ)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry