ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತಿ ಸುಳಿವ ಜಾತಿಯ ಕರಾಳ ನೆರಳು

ಪೆರುಮಾಳ್‌ ಮುರುಗನ್‌ ನೆನಪುಗಳು
Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನದು ಅಂತರ್ಜಾತಿ ಮದುವೆ. ನಮ್ಮ ಮನೆ ಇದ್ದಿದ್ದು ಎರಡು ಊರುಗಳ ಗಡಿಯಲ್ಲಿ. ಅಲ್ಲಿನ ಪ್ರತಿ ಊರಿಗೂ ಪ್ರತಿ ಜಾತಿಯವರಿಗೂ ಪ್ರತ್ಯೇಕ ಸ್ಮಶಾನ ಇದ್ದವು. ಅಮ್ಮನಿಗೆ ಪಾರ್ಕಿನ್‌ಸನ್‌ ಕಾಯಿಲೆ ಇತ್ತು. ಅಮ್ಮ ಸತ್ತಾಗ, ನಾನು ಅಂತರ್ಜಾತೀಯ ಮದುವೆ ಆಗಿದ್ದೇನೆ ಎಂಬ ಕಾರಣವೊಡ್ಡಿ ಒಂದು ಊರಿನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಜಾಗ ಕೊಡದಿದ್ದರೆ, ಇನ್ನೊಂದು ಊರಿನ ಸ್ಮಶಾನದಲ್ಲಿ ಮಾಡಬಹುದು ಎಂಬ ಕಾರಣಕ್ಕೆ ನಾನು ಎರಡು ಊರಿನ ಸ್ಮಶಾನಕ್ಕೂ ತೆರಿಗೆ ಕಟ್ಟುತ್ತಿದ್ದೆ. ಈ ಎರಡೂ ಸ್ಮಶಾನಗಳಲ್ಲಿಯೂ ಅವಕಾಶ ಸಿಗದಿದ್ದರೆ ಎಂಬ ಆತಂಕದಿಂದ ಪಟ್ಟಣ ಪಂಚಾಯತ್‌ ಸ್ಮಶಾನಕ್ಕೂ ತೆರಿಗೆ ಕಟ್ಟುತ್ತಿದ್ದೆ. ಆದರೆ ಅಮ್ಮ ತೀರಿಕೊಳ್ಳುವಷ್ಟರಲ್ಲಿ ಆ ಪ್ರದೇಶಕ್ಕೆ ವಿದ್ಯುತ್‌ ಚಿತಾಗಾರ ಬಂದಿತ್ತು. ಮೂರು ಸ್ಮಶಾನಗಳಿಗೆ ಕಟ್ಟಿದ ತೆರಿಗೆಯೆಲ್ಲಾ ವ್ಯರ್ಥವಾಯಿತು’.

ತಮಿಳಿನ ಜನಪ್ರಿಯ ಲೇಖಕ ಪೆರುಮಾಳ್‌ ಮುರುಗನ್‌ ನಗುತ್ತಲೇ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರೂ ಅದರ ಹಿಂದಿನ ಗಾಢ ವಿಷಾದ ನೆತ್ತಿಯ ಮೇಲಿನ ಬಿಸಿಲ ಝಳವನ್ನೂ ಮೀರಿ ಎದುರು ಕೂತಿದ್ದವರ ಮನಸ್ಸಿಗೆ ತಟ್ಟುತ್ತಿತ್ತು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ, ತಮ್ಮ ಸಂಪಾದನೆಯ ‘ಜಾತಿ ಮತ್ತು ನಾನು’ (ಕಾಸ್ಟ್‌ ಆ್ಯಂಡ್‌ ಐ) ಪುಸ್ತಕದ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಾತಿಯ ಕಾರಣಕ್ಕೆ ತಾವು ಅನುಭವಿಸಿದ ಸಂಕಟಗಳನ್ನು ಮೆಲುಕು ಹಾಕಿದರು.

‘ಜಾತಿ ಮತ್ತು ನಾನು’ ಪೆರುಮಾಳ್‌ ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಬರೆದಿರುವ ಲೇಖನಗಳ ತಮಿಳು ಕೃತಿ. ಬೇರೆ ಬೇರೆ ಜಾತಿಗೆ ಸೇರಿದ 20 ಲೇಖಕರ 32 ಬರಹಗಳು ಈ ಕೃತಿಯಲ್ಲಿವೆ. ಈ ‍ಪುಸ್ತಕವನ್ನು ಸಿ.ಎಸ್‌. ಲಕ್ಷ್ಮೀ (ಅಂಬೈ) ಇಂಗ್ಲಿಷಿಗೆ ಭಾಷಾಂತರ ಮಾಡಿದ್ದಾರೆ.

ಈ ಕೃತಿ ರೂಪುಗೊಂಡ ಬಗ್ಗೆ ಮಾತನಾಡಿದ ಅವರು, ‘ಈ ಪುಸ್ತಕದಲ್ಲಿ ಲೇಖನ ಬರೆದವರು ಜಾತಿ ವ್ಯವಸ್ಥೆಯ ಜೊತೆಯಲ್ಲಿಯೇ ಬದುಕು ನಡೆಸುತ್ತಿರುವವರು. ಅಂಥವರು ಆ ವ್ಯವಸ್ಥೆಯ ಕುರಿತು ತಮ್ಮಅನುಭವನ್ನು ಮುಕ್ತವಾಗಿ ಹಂಚಿಕೊಳ್ಳಲು ಹೆದರುತ್ತಿದ್ದರು. ಅವರಿಗೆ ಧೈರ್ಯ ತುಂಬಿ ಮುಕ್ತವಾಗಿ ಬರೆಯುವಂತೆ ಹೇಳಿದೆ. ಸಾಕಷ್ಟು ತಿದ್ದಿದ ನಂತರವೇ ಆ ಪುಸ್ತಕವನ್ನು ಪ್ರಕಟಿಸಿದೆವು. ಹಾಗಿದ್ದೂ ಪುಸ್ತಕ ಪ್ರಕಟವಾದ ನಂತರ ಇದರಲ್ಲಿ ಲೇಖನ ಬರೆದ ಸಾಕಷ್ಟು ಬರಹಗಾರರು ತೊಂದರೆ ಎದುರಿಸಬೇಕಾಯ್ತು. ಮೇಲುಜಾತಿಯ ಕುಟುಂಬದಿಂದ ಅನುಭವಿಸಿದ ಶೋಷಣೆಯ ಕುರಿತು ಲೇಖನ ಬರೆದಿದ್ದ ಒಬ್ಬ ಹುಡುಗನ ಜೊತೆ ಆ ಕುಟುಂಬದವರು ಸಂಪರ್ಕವನ್ನೇ ಕಡಿದುಕೊಂಡರು. ಇಂಥ ಹಲವು ಅನುಭವಗಳು ಆಗಿವೆ’ ಎಂದರು.

ಇಂದಿಗೂ ಚೆನ್ನೈನಂಥ ನಗರಗಳಲ್ಲಿ ಜಾತಿ ತಾರತಮ್ಯ ಅಸ್ತಿತ್ವದಲ್ಲಿ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಪೆರುಮಾಳ್‌, ‘‘ನಾನು ಕಾಲೇಜು ಪ್ರಾಧ್ಯಾಪಕನಾಗಿ ಒಂದೂವರೆ ವರ್ಷ ಚೆನ್ನೈನಲ್ಲಿ ಕಳೆಯಬೇಕಾಗಿ ಬಂತು. ಆಗ ನಾನು ಬಾಡಿಗೆಗೆ ಇದ್ದಿದ್ದು ಒಬ್ಬ ಮಲಯಾಳಿಯ ಮನೆಯಲ್ಲಿ. ಅವರು ‘ಮುಸ್ಲಿಮರಿಗೆ ಮತ್ತು ದಲಿತರಿಗೆ ಮನೆ ಬಾಡಿಗೆ ಕೊಡುವುದಿಲ್ಲ’ ಎಂದು ನೇರವಾಗಿಯೇ ಹೇಳುತ್ತಿದ್ದರು’’ ಎಂದು ತಮ್ಮ ಅನುಭವವನ್ನೇ ಹಂಚಿಕೊಂಡರು.

ಅಪ್ಪನದು ಸೋಡಾ ಅಂಗಡಿ ಇತ್ತು. ನಮ್ಮ ಮನೆಗೆ ಬೇರೆ ಬೇರೆ ಸಮುದಾಯದ ಜನರು ಬಂದುಹೋಗುತ್ತಿದ್ದರು. ಇದನ್ನು ನೋಡುತ್ತಲೇ ಬೆಳೆದಿದ್ದ ನಾನು ಅಪ್ಪ–ಅಮ್ಮನಿಗೆ ಜಾತಿ ತಾರತಮ್ಯ ಇಲ್ಲ ಎಂದು ಭಾವಿಸಿದ್ದೆ. ಅಮ್ಮನಿಗೆ ಪಾರ್ಕಿನ್‌ಸನ್‌ ಕಾಯಿಲೆ ಉಲ್ಬಣಿಸಿದ್ದಾಗ ಆಗಾಗ ಪ್ರಜ್ಞಾಹೀನ ಸ್ಥಿತಿಗೆ ಹೋಗುತ್ತಿದ್ದಳು. ಅವಳನ್ನು ನೋಡಿಕೊಳ್ಳಲು ದಲಿತ ಸಮುದಾಯದ ಹುಡುಗಿಯನ್ನು ನೇಮಕ ಮಾಡಿದ್ದೆ. ಅಮ್ಮ ಪ್ರಜ್ಞಾಸ್ಥಿತಿಗೆ ಬಂದು ತನ್ನನ್ನು ನೋಡಿಕೊಳ್ಳುತ್ತಿರುವುದು ಒಬ್ಬಳು ದಲಿತ ಹುಡುಗಿ ಎಂದು ತಿಳಿದಾಗ ತೀವ್ರವಾಗಿ ಪ್ರತಿಭಟಿಸಿದ್ದಳು. ಅಮ್ಮನ ವ್ಯಕ್ತಿತ್ವದ ಈ ಆಯಾಮವನ್ನು ನೋಡಿ ನನಗೆ ತುಂಬಾ ನೋವಾಗಿತ್ತು’ ಎಂದು ತಮ್ಮ ಬದುಕಿನಲ್ಲಿ ತಮಗೇ ಗೊತ್ತಿಲ್ಲದೇ ಆವರಿಸಿದ್ದ ಜಾತಿಯ ಜಾಲದ ಕುರಿತು ಹೇಳಿಕೊಂಡರು.

ಈ ಕೃತಿಯನ್ನು ಇಂಗ್ಲಿಷಿಗೆ ಭಾಷಾಂತರಿಸಿದ ಸಿ.ಎಸ್‌. ಲಕ್ಷ್ಮೀ ಭಾಷಾಂತರದ ಸಮಯದಲ್ಲಿ ಪೆರುಮಾಳ್‌ ಅವರ ಜೊತೆಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು. ಪೆರುಮಾಳ್‌ ಅವರು ತಮಿಳಿನಲ್ಲಿ ಆಡಿದ ಮಾತುಗಳನ್ನು ಕಣ್ಣನ್‌ ಸುಂದರಂ ಇಂಗ್ಲಿಷಿಗೆ ಭಾಷಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT