ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಸಾಗರ: ರೈತರ ಕೈಹಿಡಿದ ನವಣೆ

Last Updated 29 ಅಕ್ಟೋಬರ್ 2017, 8:29 IST
ಅಕ್ಷರ ಗಾತ್ರ

ಹನುಮಸಾಗರ: ಸದ್ಯ ಎಲ್ಲಿ ನೋಡಿದರೂ ನವಣೆ ಬೆಳೆಯ ಘಮಲು. ಅದರಲ್ಲೂ ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ಹನುಮನಾಳ ಭಾಗದಲ್ಲಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ನವಣೆ, ಸಜ್ಜೆ, ಅರ್ಕ, ಊದಲುಗಳಂತಹ ಸಿರಿಧಾನ್ಯಗಳನ್ನು ಬೆಳೆಯುವ ರೈತರೆಂದರೆ ಅವರು ಬಡ ರೈತರು ಎನ್ನುವ ಕಾಲವೊಂದಿತ್ತು. ಆಗ ರೈತರ ಊಟದ ಬಟ್ಟಲಿನಲ್ಲಿ ಅಕ್ಕಿಯ ಅನ್ನವಿರಲಿಲ್ಲ. ಕ್ರಮೇಣ ಸಿರಿಧಾನ್ಯದ ಸ್ಥಾನದಲ್ಲಿ ನೆಲ್ಲಕ್ಕಿ ಬಂದ ನಂತರ ಸಿರಿಧಾನ್ಯಗಳು ಇಲ್ಲವಾದವು.

ಎರಡು ದಶಕದಿಂದೀಚೆಗೆ ಸಿರಿವಂತರೂ ಈ ಸಿರಿಧಾನ್ಯಗಳ ಕಡೆ ವಾಲಿದ್ದರಿಂದ ಮತ್ತೆ ಸಿರಿಧಾನ್ಯಕ್ಕೆ ಐಸಿರಿ ಬಂತು. ವಿಚಿತ್ರ ಎಂದರೆ ಆ ಸಮಯಕ್ಕೆ ಸಿರಿಧಾನ್ಯ ಬೆಳೆಯುವ ರೈತರೆ ಮಾಯವಾಗಿ, ಕೇವಲ ದೊಡ್ಡ ಅಂಗಡಿ, ಮಾಲ್‌ಗಳಲ್ಲಿ ಮಾತ್ರ ಸಿರಿಧಾನ್ಯ ದೊರಕುವಂತಾಗಿತ್ತು.

ನವಣೆ ಉಂಡವನು ನಿರೋಗಿ: ನವಣೆ ಅನ್ನ ಉಂಡವನು ನಿರೋಗಿ ಎನ್ನುವುದು ಉತ್ತರ ಕರ್ನಾಟಕದ ಪ್ರಚಲಿತ ಗಾದೆ. ಆದರೆ, ಇದರ ಅನ್ನ ಉಣ್ಣಲು ನವಣೆ ಕೃಷಿಯೇ ಇಲ್ಲವಾಗಿಬಿಟ್ಟಿದೆ. ಈ ಕಾರಣವಾಗಿಯೇ ರೈತರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕೃಷಿ ಇಲಾಖೆ 2017–18ನ್ನು ಸಿರಿಧಾನ್ಯ ವರ್ಷವನ್ನಾಗಿ ಆಚರಿಸುತ್ತಿದೆ. ಜಿಲ್ಲೆಯ ರೈತರಿಗೆ ವಿವಿಧ ಸಿರಿಧಾನ್ಯ ಬೆಳೆಗಳನ್ನು ಬೆಳೆಯುವುದಕ್ಕಾಗಿ ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿಗಳು, ಜಿಲ್ಲಾ, ತಾಲ್ಲೂಕು ಕೃಷಿ ಇಲಾಖೆ ಸಾಕಷ್ಟು ಉತ್ತೇಜನ ನೀಡಿದೆ.

ಕುಷ್ಟಗಿ ತಾಲ್ಲೂಕಿನ ಹೂಲಗೇರಿಯ ಪರಪ್ಪ ಗಾಣಿಗೇರ ಆಗಾಗ ಬೇರೆ ಬೆಳೆಗಳ ಬಗ್ಗೆ ಮಾತನಾಡುವಾಗ, ಇಳುವರಿ ಇಲ್ಲ. ರೋಗ ಬಂದಿದೆ. ಕೀಟ ಹಾವಳಿ ಹೆಚ್ಚಾಗಿದೆ ಎಂದು ಹೇಳುತ್ತಿದ್ದರು. ಈಚೆಗೆ ದೂರವಾಣಿ ಕರೆ ಮಾಡಿದ ಅವರು, ‘ನಮ್ಮ ಹೊಲದಲ್ಲಿ ನವಣೆಯನ್ನು ನಿಂತು ನೋಡಬೇಕ್ರಿ, ಎದೆಮಟ ಬೆಳೆದು ನಿಂತೈತ್ರಿ, ತೆನೆ ಭಾರವಾಗಿ ಬೆಳೆ ಬಾಗಕತ್ತೈತ್ರಿ’ ಎಂದು ಹೇಳಿದರು.

ಈ ಮಾತಿನಲ್ಲಿ ಅವರ ಸಂತಸ ಇಮ್ಮಡಿಸಿದ್ದು ಎದ್ದು ಕಾಣುತ್ತಿತ್ತು. ಅಂದ ಹಾಗೆ ಪರಪ್ಪ ನಾಲ್ಕು ಎಕರೆ ನವಣೆ ಬೆಳೆಗೆ ಕೊಟ್ಟಿಗೆ ಗೊಬ್ಬರ ಹಾಕಿದ್ದು ಬಿಟ್ಟರೆ ಮತ್ತೇನೂ ಮಾಡಿಲ್ಲ. ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬಳಸಿಲ್ಲ. ಆದಾಗ್ಯೂ ಎಕರೆಗೆ 6 ಕ್ವಿಂಟಲ್‌ ಭರ್ಜರಿ ಇಳುವರಿ ಪಡೆದಿದ್ದಾರೆ.

ಪರಪ್ಪ ಅವರಂತೆ ಮಾಲಗಿತ್ತಿ ಗ್ರಾಮದ ಸೋಮಪ್ಪ ತೆವರನ್ನವರ, ಹನುಮನಾಳದ ಶರಣಪ್ಪ, ಮಾವಿನಇಟಗಿಯ ಪರಶುರಾಮ ರಾಠೋಡ ಹೀಗೆ ಸಾಕಷ್ಟು ಜನ ಏನೂ ಬೆಳೆಯಲು ಯೋಗ್ಯವಿಲ್ಲ ಎಂದು ಪಾಳು ಬಿಟ್ಟಿದ್ದ ಭೂಮಿಯಲ್ಲಿ ಬಂಗಾರದಂತಹ ನವಣೆ ಬೆಳೆ ಪಡೆದಿದ್ದಾರೆ.

ಮಳೆಯ ಕೊರತೆಯಲ್ಲೂ ತಲೆ ಬಾಗದ ನವಣೆ: ಕೊಪ್ಪಳ ತಾಲ್ಲೂಕಿನಲ್ಲಿ 1,050 ಹೆಕ್ಟೇರ್‌, ಕುಷ್ಟಗಿ 757, ಯಲಬುರ್ಗಾ 629, ಗಂಗಾವತಿ 703 ಹೆಕ್ಟೇರ್‌ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 3,240 ಹೆಕ್ಟೇರ್‌ ಪ್ರದೇಶದಲ್ಲಿ ಈ ಬಾರಿ ನವಣೆ ಬಿತ್ತನೆಯಾಗಿದೆ.

ಇದರಲ್ಲಿ ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದಿಂದ ನೂರು ಎಕರೆ ಪ್ರಾಯೋಗಿಕವಾಗಿ ಬೆಳೆದಿದ್ದಾರೆ. ಮಾಲಗಿತ್ತಿ ಗ್ರಾಮವೊಂದರಲ್ಲೇ 40 ಎಕರೆಯಲ್ಲಿ ನವಣೆ ಬಿತ್ತನೆಯಾಗಿದೆ ಎಂದು ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು, ವಿಜ್ಞಾನಿ ಡಾ.ಎಂ.ಬಿ.ಪಾಟೀಲ ವಿವರಣೆ ನೀಡುತ್ತಾರೆ.

ನವಣೆ ಬರ ನಿರೋಧಕ ಬೆಳೆ: ನವಣೆ ಒಂದು ಸತ್ವಯುತ ಕಿರುಧಾನ್ಯವಾಗಿದ್ದು ಇದು ಮೂರು ತಿಂಗಳಲ್ಲಿ ಬರುವ ಅಲ್ಪಾವಧಿ ಬೆಳೆಯಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಅಳದ, ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿ ಮತ್ತು ಗುಡ್ಡ-ಗಾಡು ಪ್ರದೇಶಗಳಲ್ಲಿ ಸಹ, ಸುಲಭವಾಗಿ ಬೆಳೆಯಬಹುದಾದ ಧಾನ್ಯವಾಗಿದೆ.

‘ಸಿರಿಧಾನ್ಯಗಳನ್ನು ಸಂಸ್ಕರಿಸಿ ಶುದ್ಧ ಆಹಾರವಾಗಿ ರಫ್ತು ಮಾಡಿದರೆ ಭಾರತದ ಬಡತನ ರಫ್ತು ಮಾಡಿದಂತೆ, ಅದಕ್ಕೆ ರೈತರಿಗೆ ಸಂಸ್ಕರಣೆ, ರಫ್ತು ತರಬೇತಿ ಅವಶ್ಯ’ ಎಂದು ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಹೇಳುತ್ತಾರೆ.

ನವಣೆ ನೋವು ನಿವಾರಕ: ಸಂಸ್ಕೃತದಲ್ಲಿ ಪ್ರಿಯಾಂಗು ಎಂದು ಕರೆಯಲಾಗುವ ನವಣೆ ನೋವು ನಿವಾರಕ ಆಹಾರವಾಗಿದೆ. ಪ್ರೊಟೀನ್ 11, ಲಿಪಿಡ್ 4, ಕಾರ್ಬೋಹೈಡ್ರೇಟ್ 70 ರಷ್ಟು ಪ್ರಮಾಣ ಹೊಂದಿದೆ. ನಾರಿನಂಶ ಜಾಸ್ತಿ ಹೊಂದಿರುವುದರಿಂದ ಮಲಬದ್ಧತೆ ತಡೆಯುವುದು. ಮಧುಮೇಹಿಗಳಿಗೂ ಇದು ವರದಾನ. ಇದರಲ್ಲಿರುವ ಸಿರೋಟಿನ ಅಂಶದಿಂದ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಸಹಕಾರಿಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT