ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಸಾಂವಿಧಾನಿಕ ಪೀಠಕ್ಕೆ ಆಧಾರ್

Last Updated 30 ಅಕ್ಟೋಬರ್ 2017, 16:11 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್‌ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗಾಗಿ ಸಾಂವಿಧಾನಿಕ ಪೀಠ ರಚನೆಗೆ ಸುಪ್ರೀಂಕೋರ್ಟ್‌ ಮುಂದಾಗಿದೆ.

ಆಧಾರ್‌ ವಿರೋಧಿಸಿರುವ ಅರ್ಜಿಗಳ ವಿಚಾರಣೆಯು ನವೆಂಬರ್‌ ಕೊನೆಯ ವಾರದಲ್ಲಿ ಸಾಂವಿಧಾನಿಕ ಪೀಠದಲ್ಲಿ ಆರಂಭವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಎ.ಎಂ. ಖನ್ವೀಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ತಿಳಿಸಿದೆ.

‘ಆಧಾರ್‌ ಯೋಜನೆಗೆ ಪಶ್ಚಿಮ ಬಂಗಾಳ ಸರ್ಕಾರದ ವಿರೋಧವಿದ್ದರೆ ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿಯಮವನ್ನು ರಾಜ್ಯವೊಂದು ವಿರೋಧಿಸುವುದು ಸರಿಯಲ್ಲ. ಆಧಾರ್‌ ಯೋಜನೆಯ ಬಗ್ಗೆ ತಕರಾರಿದ್ದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಲಿ’ ಎಂದು ನ್ಯಾಯಪೀಠ ಈ ಮೊದಲು ಹೇಳಿತ್ತು.

ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಯೋಜನೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಆದಷ್ಟು ಬೇಗ ಆರಂಭಿಸಬೇಕು ಎಂದು ಹಿರಿಯ ವಕೀಲರಾದ ಗೋಪಾಲ್‌ ಸುಬ್ರಮಣಿಯನ್‌ ಮತ್ತು ಶ್ಯಾಮ್‌ ದಿವಾನ್ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು.

ಖಾಸಗಿತನ ಮೂಲಭೂತ ಹಕ್ಕು

ಆಧಾರ್‌ ಯೋಜನೆ ಜತೆಗೆ ತಳುಕು ಹಾಕಿಕೊಂಡಿರುವ ಖಾಸಗಿತನದ ಹಕ್ಕಿಗೆ ಸಂಬಂಧಿಸಿದಂತೆ ‘ಖಾಸಗಿತನದ ಹಕ್ಕು ಮೂಲಭೂತವೇ’ ಎಂಬುದನ್ನು ನಿರ್ಧರಿಸಲು ಸುಪ್ರೀಂಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಈ ವರ್ಷದ ಜುಲೈನಲ್ಲಿ ರಚನೆಯಾಗಿತ್ತು. ಅರ್ಜಿಗಳ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠವು ಖಾಸಗಿತದ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಭಾಗವೇ ಆಗಿದೆ ಎಂದು ಸರ್ವಾನುಮತದಿಂದ ಹೇಳಿತ್ತು.

ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಅಡಿಯಲ್ಲಿನ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್‌ ನೋಂದಣಿಯನ್ನು ಕಡ್ಡಾಯಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ಜಿ.ಎಸ್‌. ಖೇಹರ್‌ ನೇತೃತ್ವದ ಪೀಠವು ಈ ತೀರ್ಪು ನೀಡಿತ್ತು.

ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಈ ವಿಚಾರದ ವಿಚಾರಣೆ ಸಂದರ್ಭದಲ್ಲಿ, ಖಾಸಗಿತನವು ಮೂಲಭೂತ ಹಕ್ಕು ಅಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು.

‘ಆಧಾರ್‌ ನೋಂದಣಿಗಾಗಿ ಜನರು ತಮ್ಮ ಬೆರಳಚ್ಚು, ಕಣ್ಣು ಪಾಪೆಯ ಗುರುತುಗಳು ಮತ್ತು ವೈಯಕ್ತಿಕ ಮಾಹಿತಿಗಳನ್ನು ಸರ್ಕಾರಕ್ಕೆ ನೀಡಬೇಕು. ಆದರೆ ಈ ಮಾಹಿತಿಗಳನ್ನು ವಾಣಿಜ್ಯ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಹಾಗಾಗಿ ಇದು ಖಾಸಗಿತನದ ಹಕ್ಕಿನ ಉಲ್ಲಂಘನೆ’ ಎಂದು ಆಧಾರ್‌ ಕಡ್ಡಾಯಗೊಳಿಸುವಿಕೆಯನ್ನು ಪ್ರಶ್ನಿಸಿದ್ದ ಅರ್ಜಿದಾರರು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT