ಶನಿವಾರ, ಸೆಪ್ಟೆಂಬರ್ 21, 2019
22 °C

ಅಂಬಾರಿಗೆ ಪ್ರೀತಿಯ ಬೆಸುಗೆ

Published:
Updated:
ಅಂಬಾರಿಗೆ  ಪ್ರೀತಿಯ ಬೆಸುಗೆ

‘ಅಂಬಾರಿ’ ಸಿನಿಮಾವು ನಟ ಯೋಗೇಶ್‌ಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಇಮೇಜ್‌ ತಂದುಕೊಟ್ಟಿತ್ತು. ಹೀಗಾಗಿ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಹೊರಟಿರುವ ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದ ವಿಜಿ ಕೀಲಾರ ಪ್ರೀತಿ ಬೆರೆತ ಅಂಬಾರಿ ಏರಲು ಹೊರಟಿದ್ದಾರೆ. ಗಾಂಧಿನಗರದಲ್ಲಿ ಅವಕಾಶಗಳ ಹಿಂದೆ ಬಿದ್ದ ಅವರಿಗೆ ಕಾಡಿದ್ದು, ನಿರಾಸೆ. ಹಾಗಾಗಿ, ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.

ತಾನು ನಿರ್ದೇಶಿಸುತ್ತಿರುವ ‘ಪ್ರೀತಿಯ ಅಂಬಾರಿ’ ಚಿತ್ರದ ಬಗ್ಗೆ ಮಾಹಿತಿ ನೀಡಲು ವಿಜಿ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಬಂದಿದ್ದರು. ‘ನನಗೆ ಸಿನಿಮಾ ಬಗ್ಗೆ ‍ಪ್ರೀತಿ ಹೆಚ್ಚಿದೆ. ನಿರೀಕ್ಷಿತಮಟ್ಟದ ಅವಕಾಶ ಸಿಗಲಿಲ್ಲ. ಹಾಗಾಗಿ, ನಾನೇ ನಿರ್ದೇಶನ ಮತ್ತು ನಟನೆಗೆ ಮುಂದಾಗಿದ್ದೇನೆ. ಮುಂದಿನ ತಿಂಗಳು ಚಿತ್ರದ ಮುಹೂರ್ತ ನೆರವೇರಿಸಲಾಗುವುದು’ ಎಂದರು.

‘ಗ್ರಾಮದ ಪಟೇಲನ ಮಗಳಿಗೆ ನಾಯಕನ ಮೇಲೆ ಪ್ರೀತಿ ಬೆಳೆಯುತ್ತದೆ. ನಾಯಕನಿಗೂ ಆಕೆಯ ಮೇಲೆ ಪ್ರೀತಿ ಬೆಳೆಯುತ್ತದೆ. ಈ ವಿಷಯ ಎರಡೂ ಕುಟುಂಬದರಿಗೆ ತಿಳಿಯುತ್ತದೆ. ಕೊನೆಗೆ, ನಾಯಕ– ನಾಯಕಿ ಬೆಂಗಳೂರಿನತ್ತ ಪಲಾಯನ ಮಾಡುತ್ತಾರೆ. ಉದ್ಯಾನನಗರಿಗೆ ಬಂದಾಗ ನಡೆಯುವ ಘಟನೆಗಳು, ನೋವು– ನಲಿವುಗಳೇ ಚಿತ್ರದ ಕಥಾಹಂದರ’ ಎಂದರು ವಿಜಿ.

ದಿವ್ಯಾ ಈ ಚಿತ್ರದ ನಾಯಕಿ. ಆನಂದ ಕೆಬ್ಬಳ್ಳಿ ಮತ್ತು ಬಿ.ಕೆ. ಮಂಜುನಾಥ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಕೌಶಿಕ್‌ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ನಾಗೇಶ್‌ ಆಚಾರ್ಯ ಅವರದ್ದು.

Post Comments (+)