ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ‘ಲಾಡ್‌ ಹಟಾವೋ’ ಅಭಿಯಾನ

ಸೋಮವಾರ, ಜೂನ್ 17, 2019
22 °C

ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ‘ಲಾಡ್‌ ಹಟಾವೋ’ ಅಭಿಯಾನ

Published:
Updated:
ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ‘ಲಾಡ್‌ ಹಟಾವೋ’ ಅಭಿಯಾನ

ಧಾರವಾಡ: ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಪ್ರತಿನಿಧಿಸುವ ಕಲಘಟಗಿ ಕ್ಷೇತ್ರದಲ್ಲಿ, ಕಾಂಗ್ರೆಸ್ ಕಾರ್ಯಕರ್ತರೇ ಅವರ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.

ಲಾಡ್‌ ವಿರುದ್ಧದ ಆರೋಪಗಳ ಪಟ್ಟಿಯನ್ನು ಒಳಗೊಂಡ ‘ದತ್ತಕ ಮಗನ ಪವಾಡಗಳು’ ಎಂಬ ಶೀರ್ಷಿಕೆಯ ಕರಪತ್ರವನ್ನು ಕ್ಷೇತ್ರದ ಮನೆ ಮನೆಗೂ ಹಂಚಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯಿಂದ ‘ರಾಜಕೀಯ ವಲಸೆ’ ಬಂದ ಲಾಡ್‌, ಕಲಘಟಗಿ ಕ್ಷೇತ್ರದಲ್ಲಿ ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಕ್ಷೇತ್ರದ ದತ್ತು ಮಗನಾಗಿ ಬಂದು ಇಲ್ಲಿನ ಆಸ್ತಿ ಹೊಡೆದಿದ್ದಾರೆ ಎಂದು ಕರಪತ್ರದಲ್ಲಿ ಆರೋಪಿಸಲಾಗಿದೆ.

ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲಾಗಿದೆ ಹಾಗೂ ನೀಡಿದ ಭರವಸೆಗಳನ್ನು ಈವರೆಗೂ ಈಡೇರಿಸಿಲ್ಲ ಎಂಬ ಆರೋಪ ಮಾಡಲಾಗಿದೆ. ಅವರು ನೀಡಿದ್ದ ವಾಗ್ದಾನಗಳ ಪಟ್ಟಿಯನ್ನೇ ಕರಪತ್ರ ಮಾಡಿ ಹಂಚಲಾಗುತ್ತಿದೆ. ಅದರಲ್ಲಿ ಸಚಿವರ ವಿರುದ್ಧ ವ್ಯಂಗ್ಯ ಬರಹಗಳಿವೆ. ಕ್ಷೇತ್ರದ ಜನರ ಯಾವ ಕಷ್ಟಗಳಲ್ಲೂ ಭಾಗಿಯಾಗದ ‘ಸಂಡೂರಿನ ಧಣಿ’ ಎಂದು ಹೀಗಳೆಯಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಮುಖಂಡ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಸ್‌.ಎಂ.ಚಿಕ್ಕಣ್ಣವರ, ‘ಲಾಡ್‌ ಅವರು ಈ ಕ್ಷೇತ್ರದಿಂದ ಆಯ್ಕೆಯಾಗುವ ಮೊದಲು 1001 ಭರವಸೆಗಳನ್ನು ನೀಡಿದ್ದರು. ಕ್ಷೇತ್ರದ ಸೇವಕನಾಗಿ ಕೆಲಸ ಮಾಡುವುದಾಗಿ ಹೇಳಿದ್ದರು. ಆದರೆ, ಇಲ್ಲಿ ಉಳಿಯಲೇ ಇಲ್ಲ. ಇಲ್ಲಿನ ಜನ ಅವರನ್ನು ಕಾಣಲು ಇಂದಿಗೂ ಪರದಾಡುತ್ತಿದ್ದಾರೆ. ಅವರ ಆಪ್ತರು ತಾಲ್ಲೂಕಿನ ಕಾಂಗ್ರೆಸ್‌ ಮುಖಂಡರನ್ನು ಮೂಲೆಗುಂಪು ಮಾಡಿದ್ದಾರೆ. ಈಗ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿದ್ದೇವೆ’ ಎಂದು ಹೇಳಿದರು.

‘ಕ್ಷೇತ್ರದಿಂದ ಈ ಬಾರಿ ಯಾರನ್ನು ಬೇಕಾದರೂ ಕಣಕ್ಕಿಳಿಸಲಿ. ಆದರೆ, ಲಾಡ್‌ ಅವರಿಗೆ ಮಾತ್ರ ಟಿಕೆಟ್‌ ನೀಡಬಾರದು ಎಂಬುದೊಂದೇ ನಮ್ಮ ಬೇಡಿಕೆ. ಈಗಾಗಲೇ ಇದನ್ನು ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿಯ ಗಮನಕ್ಕೂ ತರಲಾಗಿದೆ’ ಎಂದು ಚಿಕ್ಕಣ್ಣವರ ಸ್ಪಷ್ಟಪಡಿಸಿದರು.

‘ಈ ಹೋರಾಟದಲ್ಲಿ ಪಕ್ಷದ ಶಿವಾಜಿ ವಾಗ್ಮೋಡೆ, ಫಕ್ಕೀರೇಶ ನೇಸರೇಕರ, ಗುರು ಕಂಪ್ಲಿ, ಶಿವಾಜಿ ಪವಾರ, ರಫೀಕ್ ಸುಂಕದ, ಪರಶುರಾಮ ದುಂಡಿ, ನೀಲಪ್ಪ ಕುರಿ ಸೇರಿದಂತೆ ಹಲವರು ಇದ್ದೇವೆ. ಒಂದೊಮ್ಮೆ ಈ ಕ್ಷೇತ್ರದಲ್ಲಿ ಲಾಡ್‌ ಅವರಿಗೆ ಮತ್ತೊಮ್ಮೆ ಟಿಕೆಟ್ ಕೊಟ್ಟಿದ್ದೇ ಆದಲ್ಲಿ ಮುಸ್ಲಿಂ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮತಗಳು ಬಿಜೆಪಿಗೆ ಹೋಗಲಿವೆ’ ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.

ಜಿಲ್ಲೆಗೆ ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಭೇಟಿ ನೀಡಿದಾಗ ಹಾಗೂ ಧಾರವಾಡದಲ್ಲಿ ನಡೆದ ಏಳು ಜಿಲ್ಲೆಗಳ ಸಾಧನಾ ಸಮಾವೇಶದಲ್ಲೂ ಲಾಡ್‌ ಹಾಜರಿರಲಿಲ್ಲ. ಅಲ್ಲದೇ ‘ಮನೆ ಮನೆಗೆ ಕಾಂಗ್ರೆಸ್‌’ ಕಾರ್ಯಕ್ರಮದಲ್ಲೂ ಪಾಲ್ಗೊಂಡಿರಲಿಲ್ಲ ಎಂಬ ಆರೋಪವೂ ಇದೆ.

ಆರೋಪದಲ್ಲಿ ಸತ್ಯಾಂಶವಿದೆ

‘ಪಕ್ಷದ ಕೆಲ ಕಾರ್ಯಕರ್ತರು ‘ಲಾಡ್‌ ಹಟಾವೋ’ ಅಭಿಯಾನ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕರಪತ್ರಗಳನ್ನು ಹರಿಯಬಿಡಲಾಗಿದೆ. ಇವುಗಳನ್ನು ಮನೆಮನೆಗೆ ಮುಟ್ಟಿಸುತ್ತಿರುವ ಕುರಿತು ಸಚಿವರ ಗಮನಕ್ಕೂ ತಂದಿದ್ದೇವೆ. ‘ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ’ ಎಂದಷ್ಟೇ ಲಾಡ್‌ ಪ್ರತಿಕ್ರಿಯಿಸಿದ್ದಾರೆ’ ಎಂದು ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ಪಾಟೀಲ ಹೇಳಿದರು.

‘ಕಾರ್ಯಕರ್ತರ ಆರೋಪದಲ್ಲಿ ಸತ್ಯಾಂಶವಿದೆ. ಇಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಹೇಳಿದ್ದ ಸಚಿವರು ಆನಂತರ ಕೈಚೆಲ್ಲಿದರು. ಕ್ಷೇತ್ರದ ಅಭಿವೃದ್ಧಿಗೆ ನಿಯೋಜಿಸಿರುವ ಅವರ ಆಪ್ತರ ಕುರಿತೂ ಕಾರ್ಯಕರ್ತರಿಗೆ ಅಸಮಾಧಾನವಿದೆ. ಇತ್ತೀಚೆಗೆ ಜಿಲ್ಲೆಗೆ ಬಂದಿದ್ದ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಕೂಡ, ‘ಶಾಸಕರು ಬರುತ್ತಿಲ್ಲವೇ?’ ಎಂದು ಕೇಳಿದ್ದರು. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಇರುವುದರಿಂದ ಹೆಚ್ಚು ಸಮಯ ಅಲ್ಲಿರುವುದು ಸತ್ಯ. ಆದರೂ ಇಲ್ಲಿಗೆ ಬಂದು ತಮಗಿರುವ ಸಮಸ್ಯೆಯನ್ನು ಅವರು ಕಾರ್ಯಕರ್ತರೊಂದಿಗೆ ಹಂಚಿಕೊಂಡರೆ ಎಲ್ಲವೂ ಮೊದಲಿನಂತೆ ಸರಿಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry