ಮಂಗಳವಾರ, ಮಾರ್ಚ್ 2, 2021
31 °C

ಸೀಮಾ ಪೂನಿಯಾಗೆ ಪದಕ ಖಚಿತ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸೀಮಾ ಪೂನಿಯಾಗೆ ಪದಕ ಖಚಿತ

ಹೊ ಚಿ ಮಿನ್‌ ಸಿಟಿ, ವಿಯೆಟ್ನಾಂ: ಭಾರತದ ಭರವಸೆಯ ಬಾಕ್ಸರ್‌ ಸೀಮಾ ಪೂನಿಯಾ ಏಷ್ಯನ್ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ಆರಂಭವಾಗುವ ಮೊದಲೇ ಸೆಮಿಫೈನಲ್ ಪ್ರವೇಶಿಸಿದ್ದಾರೆ!

ಬುಧವಾರ ಪ್ರಕಟವಾದ ಡ್ರಾ ಪ್ರಕಾರ 81ಕೆ.ಜಿ ವಿಭಾಗದಲ್ಲಿ ಕೇವಲ ನಾಲ್ವರು ಸ್ಪರ್ಧಿಗಳು ಇರುವ ಕಾರಣ ಪೂನಿಯಾ ನೇರವಾಗಿ ಸೆಮಿಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ. ಗುರುವಾರದಿಂದ ಚಾಂಪಿಯನ್‌ಷಿಪ್ ಆರಂಭವಾಗಲಿದೆ. ಪೂನಿಯಾ ನವೆಂಬರ್‌ 7ರಂದು ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಗುಜಲ್‌ ಇಸ್ಮಾತೋವಾ ವಿರುದ್ಧ ಸೆಣಸಲಿದ್ದಾರೆ.

ಮೇರಿ ಕೋಮ್‌ ಭರವಸೆ: ಭಾರತದ ಅಗ್ರಗಣ್ಯ ಬಾಕ್ಸರ್‌ ಮೇರಿ ಕೋಮ್ 48ಕೆ.ಜಿ ವಿಭಾಗದಲ್ಲಿ ಗುರುವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಕಂಚು ಹಾಗೂ ಐದು ಬಾರಿ ವಿಶ್ವ ಚಾಂಪಿಯನ್‌ಷಿಪ್ ಗೆದ್ದಿರುವ ಮಣಿಪುರದ ಬಾಕ್ಸರ್‌ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ಡೀಮ್‌ ತಿ ತ್ರಿನ್ ಕಿಯು ವಿರುದ್ಧ ಆಡಲಿದ್ದಾರೆ. ಈ ಟೂರ್ನಿಯಲ್ಲಿ ಮೇರಿ ನಾಲ್ಕು ಚಿನ್ನದ ಪದಕ ಜಯಿಸಿದ ದಾಖಲೆ ಹೊಂದಿದ್ದಾರೆ.

49ಕೆ.ಜಿ ವಿಭಾಗದಲ್ಲಿ ಶಿಖಾ ಅವರು ಮಂಗೋಲಿಯಾದ ಒಯುನ್ ಎದೆರ್ನೆ ನೆರ್ಗುಲಿ ಎದುರು ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ. ನಾಲ್ಕು ಬಾರಿ ಇಲ್ಲಿ ಚಿನ್ನ ಗೆದ್ದಿರುವ ಎಲ್‌.ಸರಿತಾ ದೇವಿ 64ಕೆ.ಜಿ ವಿಭಾಗದಲ್ಲಿ ಉಜ್ಬೇಕಿಸ್ತಾನದ ಮಫ್ತುನಕೊನ್ ಮೆಲೆವಾ ವಿರುದ್ಧ ನವೆಂಬರ್‌ 5ರಂದು ನೇರವಾಗಿ ಕ್ವಾರ್ಟರ್‌ಫೈನಲ್‌ ಆಡಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಬೈ ಲಭಿಸಿದೆ.

ಏಷ್ಯನ್‌ ಟೂರ್ನಿಯಲ್ಲಿ ಬೆಳ್ಳಿ ಗೆದ್ದಿರುವ ಸ್ವೀಟಿ ಬೋರಾ 75ಕೆ.ಜಿ ವಿಭಾಗದ ಮೊದಲ ಸುತ್ತಿನಲ್ಲಿ ಬೈ ಪಡೆದು ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಲಿ ಕ್ಸಿಯಾನ್ ವಿರುದ್ಧ ಆಡಲಿದ್ದಾರೆ.

69ಕೆ.ಜಿ ವಿಭಾಗದಲ್ಲಿ ಕೂಡ ಲೊವೆಲಿನಾ ಬೋರ್ಗೊನ್‌ಗೆ ಬೈ ಲಭಿಸಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಮಂಗೋಲಿಯಾದ ಎರ್ದೆನ್‌ತುವಾ ಎನಕಬಾತರ್ ವಿರುದ್ಧ ಆಡಲಿದ್ದಾರೆ.

ರಾಷ್ಟ್ರೀಯ ಕಪ್‌ನಲ್ಲಿ ಚಿನ್ನ ಗೆದ್ದಿರುವ ನೀರಜ್‌ ಶುಕ್ರವಾರ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಮ್ಯಾನ್ಮಾರ್‌ ತಂಡದ ನ್ಯಾಲಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. 57ಕೆ.ಜಿ ವಿಭಾಗದಲ್ಲಿ ಸೋನಿಯಾ ಲಾಥರ್‌ ಅವರು ಜಪಾನ್‌ನ ಕಾನಾ ಕುರೋಗಿ ವಿರುದ್ಧವೂ, ಮತ್ತು ಪೂಜಾ ರಾಣಿ (81ಕೆ.ಜಿ) ಯಾಂಗ್ ಕ್ಸಿಯಾಲಿ ಮೇಲೂ ಜಯದ ನಿರೀಕ್ಷೆಯಲ್ಲಿದ್ದಾರೆ. ಪೂಜಾ ಕ್ವಾರ್ಟರ್‌ಫೈನಲ್‌ನಲ್ಲಿ   ಸ್ಪರ್ಧಿಸಲಿದ್ದಾರೆ.

20 ದೇಶಗಳ 107 ಬಾಕ್ಸರ್‌ಗಳು ಇಲ್ಲಿ ಸ್ಪರ್ಧಿಸಲಿದ್ದಾರೆ. ಭಾರತ ತಂಡ ಇಲ್ಲಿಯವರೆಗೂ ಈ ಟೂರ್ನಿಯಲ್ಲಿ 19ಚಿನ್ನ, 21 ಬೆಳ್ಳಿ ಹಾಗೂ 20ಕಂಚಿನ ಪದಕಗಳನ್ನು ಗೆದ್ದು ಮೂರನೇ ಸ್ಥಾನದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.