ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಮಳೆಯಿಂದ ಸತ್ತವರ ಸಂಖ್ಯೆ 9ಕ್ಕೆ ಏರಿಕೆ

Last Updated 1 ನವೆಂಬರ್ 2017, 19:39 IST
ಅಕ್ಷರ ಗಾತ್ರ

ಚೆನ್ನೈ: ಈಶಾನ್ಯ ಮುಂಗಾರು ಚುರುಕುಗೊಂಡಿರುವುದರಿಂದ ತಮಿಳುನಾಡಿನಲ್ಲಿ ಬುಧವಾರವೂ ಭಾರಿ ಮಳೆಯಾಗಿದ್ದು ಸತ್ತವರ ಸಂಖ್ಯೆ 9ಕ್ಕೆ ಏರಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಪೆರಂಬೂರು, ಚೋಳೈ ಸೇರಿದಂತೆ ವಿವಿಧ ಕಡೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಕೊರಟ್ಟೂರಿನ ಇಎಸ್‌ಐ ಆಸ್ಪತ್ರೆ ಆವರಣ ಸಂಪೂರ್ಣವಾಗಿ ಜಲಾವೃತವಾಗಿದ್ದು, ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

‘ಮುನ್ನಾರ್‌ನಲ್ಲಿ ಬೀಸುತ್ತಿದ್ದ ಚಂಡಮಾರುತದ ಪ್ರಭಾವ ಬಂಗಾಳಕೊಲ್ಲಿಯ ನೈರುತ್ಯ ಭಾಗ ಹಾಗೂ ಶ್ರೀಲಂಕಾವರೆಗೂ ಇದೆ. ಇದರಿಂದಾಗಿ ತಮಿಳುನಾಡಿನ ಕರಾವಳಿ ಹಾಗೂ ಪುದುಚೇರಿಯಲ್ಲಿ ಗುರುವಾರ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ. ನಿರ್ದಿಷ್ಟವಾಗಿ ತಮಿಳುನಾಡಿನ ವೆಲ್ಲೂರು, ತಿರುವಣ್ಣಾಮಲೈ, ತಿರುಚಿರಾಪಳ್ಳಿ, ಅರಿಯಲೂರು ಹಾಗೂ ಪೆರಂಬೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ’ ಎಂದು ಪ್ರಾದೇಶಿಕ ಚಂಡಮಾರುತ ಮುನ್ನೆಚ್ಚರಿಕಾ ಕೇಂದ್ರದ ನಿರ್ದೇಶಕ ಬಾಲಚಂದ್ರನ್ ಹೇಳಿದ್ದಾರೆ.

ರಸ್ತೆಗಳಲ್ಲಿ ನಿಂತಿದ್ದ ಮಳೆ ನೀರು ತೆರವುಗೊಳಿಸಲು 400ಕ್ಕೂ ಹೆಚ್ಚು ಪಂಪ್‌ಗಳನ್ನು ಬಳಸಲಾಗಿದೆ. ರಸ್ತೆ ಹಾಗೂ ಕೆಳಸೇತುವೆಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಲು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ವಿಳಂಬ: ಬುಧವಾರ ಬೆಳಿಗ್ಗೆ ದಕ್ಷಿಣ ತಮಿಳುನಾಡಿನಿಂದ ಬರುವ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿತ್ತು ಎಂದು ದಕ್ಷಿಣ ರೈಲ್ವೆ ವಲಯ ತಿಳಿಸಿದೆ.

ಬೆಳಗಿನ ವೇಳೆ ವಿಮಾನಗಳ ಟೇಕ್‌ ಆಫ್ ಹಾಗೂ ಭೂಸ್ಪರ್ಶದಲ್ಲಿ ಕೊಂಚ ವ್ಯತ್ಯಯ ಆಗಿತ್ತು. ಆದರೆ ಮಧ್ಯಾಹ್ನದ ನಂತರ ವಿಮಾನಗಳ ಸಂಚಾರದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಮಳೆಯಿಂದ ಜಲಾವೃತಗೊಂಡಿದ್ದ ಹಲವು ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT