ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿ

Last Updated 2 ನವೆಂಬರ್ 2017, 6:48 IST
ಅಕ್ಷರ ಗಾತ್ರ

ಚಿಂತಾಮಣಿ: ಡಾ.ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಿ ಕನ್ನಡಿಗರಿಗೆ ಉದ್ಯೋಗಗಳಲ್ಲಿ ಶೇ 85 ರಷ್ಟು ಮೀಸಲಾತಿ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್‌.ಲೋಕೇಶ್‌ ರಾಜ್ಯ ಸರ್ಕಾರವನ್ನು ಒತ್ತಾಯಪಡಿಸಿದರು.

ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ ಮುಂಭಾಗದಲ್ಲಿರುವ ವೇದಿಕೆಯ ಕಚೇರಿ ಬಳಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ರಾಜ್ಯ ಏಕೀಕರಣದ ನಂತರ 62ನೇ ರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ಸಿಗಬೇಕು. ರಾಜ್ಯದ ಭೂಮಿ, ನೀರು, ವಿದ್ಯುತ್‌ ಪಡೆದು ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಿಗಳು, ಬಂಡವಾಳಶಾಹಿಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಇತರೆ ರಾಜ್ಯ,ದೇಶಗಳಿಂದ ಆಗಮಿಸಿ ಕರ್ನಾಟಕದಲ್ಲಿ ನೆಲೆಸಿ ರುವವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕು. ಇತರೆ ರಾಜ್ಯಗಳಿಲ್ಲಿರುವ ಕನ್ನಡಿಗರು ಸಹ ಆಯಾ ರಾಜ್ಯಗಳ ಭಾಷೆ ಕಲಿಯಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಮಾತೃಭಾಷೆಯಲ್ಲಿ ವ್ಯವಹರಿಸದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕನ್ನಡ ನಾಡು ನುಡಿ ರಕ್ಷಣೆಗೆ ವಿಶೇಷ ಗಮನ ಹರಿಸಬೇಕು. ಕನ್ನಡ ಚಲಚಿತ್ರ ಕಡ್ಡಾಯವಾಗಿ ಪ್ರದರ್ಶಿಸಬೇಕು. ರಾಜ್ಯದ ಎಲ್ಲ ಅಂಗಡಿ, ಮುಂಗಟ್ಟು, ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ವಾಣಿಜ್ಯ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕಗಳಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ತ್ರಿಭಾಷಾ ಸೂತ್ರವನ್ನು ಕೈಬಿಟ್ಟು ದ್ವಿಭಾಷಾ ಸೂತ್ರವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸುತ್ತದೆ ಎಂದು ತಿಳಿಸಿದರು.

ಮುಖಂಡರಾದ ಆರ್‌. ಶ್ರೀನಿವಾಸ್‌, ಚೊಕ್ಕಹಳ್ಳಿ ದೇವರಾಜ್‌, ನಾರಾಯಣಸ್ವಾಮಿ, ಶಬ್ಬೀರ್‌ ಅಹಮದ್‌, ಚನ್ನಕೃಷ್ಣ, ಮಂಜುನಾಥ್‌, ಗೋಪಾಲ್‌, ವಿಜಿಕುಮಾರ್‌, ಶ್ರೀನಿವಾ ಸರೆಡ್ಡಿ, ಮಧು, ಚೌಡೇಗೌಡ, ಆರೀಫ್‌, ಇಮ್ತಿಯಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT