ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮರಸ್ಯ ಕದಡಿದರೆ ಕಠಿಣ ಕ್ರಮ’

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಮು ಸಾಮರಸ್ಯ ಹಾಳು ಮಾಡಲು ಬಿಜೆಪಿಯವರು ಪದೇ ಪದೇ ಪ್ರಯತ್ನಿಸುತ್ತಿದ್ದಾರೆ. ಇದನ್ನು ತಡೆಯಲು ಪರಿವರ್ತನಾ ಯಾತ್ರೆ ಮತ್ತು ಟಿಪ್ಪು ಸುಲ್ತಾನ್ ಜಯಂತಿ ಸಂದರ್ಭದಲ್ಲಿ ಸೂಕ್ತ ನಿಗಾ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗುರುವಾರ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇದು ಚುನಾವಣಾ ವರ್ಷವಾಗಿರುವುದರಿಂದ ಕೋಮು ಭಾವನೆ ಕೆರಳಿಸುವ ಪ್ರಯತ್ನಕ್ಕೆ ಕೆಲವರು ಕೈ ಹಾಕಬಹುದು. ಅಂಥವರ ಬಗ್ಗೆ ನಿಗಾ ವಹಿಸಬೇಕು, ಸಮಾಜ ಘಾತುಕ ಶಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ’ ಎಂದರು.

‘ಕರ್ನಾಟಕದ ಜನರು ಟಿಪ್ಪು ಜಯಂತಿಯನ್ನು ಒಪ್ಪಿದ್ದಾರೆ. ಮೊದಲ ವರ್ಷ ಬಿಜೆಪಿ, ಆರ್‌ಎಸ್‌ಎಸ್‌ನವರ ಪ್ರಚೋದನೆಯಿಂದ ಕೊಡಗಿನಲ್ಲಿ ಸ್ವಲ್ಪ ಗಲಾಟೆಯಾಗಿದ್ದು ಬಿಟ್ಟರೆ ಎಲ್ಲ ಕಡೆ ಶಾಂತಿಯುತವಾಗಿ ನಡೆದಿದೆ. ಈ ವರ್ಷವೂ ಟಿಪ್ಪು ಜಯಂತಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ, ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಭಾಗವಹಿಸಿದ್ದರು.

ಅಶೋಕ್ ಭೂ ಹಗರಣದ ತನಿಖೆ
‘ಆರ್. ಅಶೋಕ್ ಅವರು ಭಾಗಿಯಾಗಿದ್ದಾರೆ ಎನ್ನಲಾದ ಭೂ ಹಗರಣದ ಕುರಿತು ತನಿಖೆ ನಡೆಸುವ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚಿಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ದಕ್ಷಿಣ ತಾಲ್ಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮ ಸಮಿತಿ ಅಧ್ಯಕ್ಷರಾಗಿ ಸಾವಿರಾರು ಎಕರೆ ಭೂಮಿಯನ್ನು ಅಕ್ರಮವಾಗಿ ಹಂಚಿದ್ದಾರೆ ಎಂಬ ಆರೋಪ ಇದೆ. ಬಿಬಿಎಂಪಿ ಕೇಂದ್ರ ಸ್ಥಾನದಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಜಮೀನು ಮಂಜೂರು ಮಾಡಬಾರದು ಎಂಬ ನಿಯಮ ಇದ್ದರೂ ಅದನ್ನು ಉಲ್ಲಂಘಿಸಿದ್ದಾರೆ. ಆ ಜಮೀನು ವಶಪಡಿಸಿಕೊಳ್ಳಲು ಮತ್ತು ಕಾನೂನು ಬಾಹಿರವಾಗಿ ಜಮೀನು ಹಂಚಿಕೆ ಮಾಡಿದವರ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಪರಿಶೀಲಿಸಲಾಗುವುದು ಎಂದರು.

**

ಪರಿವರ್ತನಾ ರ‍್ಯಾಲಿ ನಡೆಸಲು 75 ದಿನ ಅವಕಾಶ ನೀಡಲಾಗಿದೆ. ಎಲ್ಲಿಯಾದರೂ ಕಾನೂನು ಸುವ್ಯಸ್ಥೆಗೆ ಧಕ್ಕೆಯಾದರೆ ಅದಕ್ಕೆ ಬಿಜೆಪಿಯೇ ಹೊಣೆ
– ರಾಮಲಿಂಗಾರೆಡ್ಡಿ, ಗೃಹ ಸಚಿವ

**

ನ.6ರ ಬಳಿಕ ರಸ್ತೆಗುಂಡಿ ತಪಾಸಣೆ

ನಗರದ ವಿವಿಧೆಡೆ ರಸ್ತೆಗುಂಡಿಗಳ ತಪಾಸಣೆಗೆ ನ.6ರ ಬಳಿಕ ಅನಿರೀಕ್ಷಿತ ಭೇಟಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಗುಂಡಿಗಳನ್ನು ಮುಚ್ಚಲು ನ.6ರವರಗೆ ಸಮಯ ನೀಡಬೇಕು ಎಂದು ಬಿಬಿಎಂಪಿ ಮೇಯರ್ ಸಮಯ ಕೇಳಿದ್ದರು. ಆ ಬಳಿಕ ನಾನು ತಪಾಸಣೆ ನಡೆಸುತ್ತೇನೆ. ಯಾವುದೇ ರಸ್ತೆಯಲ್ಲಿ ಗುಂಡಿಗಳು ಕಂಡು ಬಂದರೆ ಸಂಬಂಧಪಟ್ಟ ಎಂಜಿನಿಯರುಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT