ಗುರುವಾರ , ಮಾರ್ಚ್ 4, 2021
19 °C
ರಾಜಕೀಯ ಶುದ್ಧೀಕರಣಕ್ಕೆ ನಡೆದಿರುವ ಪ್ರಯತ್ನಗಳ ವಿವರ...

ರಾಜಕಾರಣದಲ್ಲಿ ಕುಗ್ಗದ ಅಪರಾಧೀಕರಣ

ಹಮೀದ್ ಕೆ. Updated:

ಅಕ್ಷರ ಗಾತ್ರ : | |

ರಾಜಕಾರಣದಲ್ಲಿ ಕುಗ್ಗದ ಅಪರಾಧೀಕರಣ

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತದ ಜನಪ್ರತಿನಿಧಿಗಳಲ್ಲಿ (ಅಂದರೆ ಸಂಸದರು, ಶಾಸಕರು, ಕಾರ್ಪೊರೇಟರ್‌ಗಳು ಇತ್ಯಾದಿ) ಕೊಲೆ, ಕೊಲೆ ಯತ್ನ, ಅತ್ಯಾಚಾರ, ಅಪಹರಣ, ವಂಚನೆ, ಭ್ರಷ್ಟಾಚಾರ ಆರೋಪ ಹೊತ್ತಿರುವವರು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿನ ದೊಡ್ಡ ಪಕ್ಷಗಳಿಂದ ಹಿಡಿದು ಸಣ್ಣ ಪಕ್ಷಗಳು ಕೂಡ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡುವ ಸಂದರ್ಭದಲ್ಲಿ ಗೆಲ್ಲುವ ಸಾಮರ್ಥ್ಯವೇ ಮುಖ್ಯ ಎಂಬುದನ್ನು ಬಹಿರಂಗವಾಗಿಯೇ ಹೇಳುತ್ತವೆ. ಹೀಗಾಗಿ ಇಂಥವರು ಮತ್ತೆ ಮತ್ತೆ ಚುನಾವಣೆಗೆ ನಿಂತು ಗೆಲ್ಲುತ್ತಲೂ ಇದ್ದಾರೆ.

ರಾಜಕಾರಣದ ಅಪರಾಧೀಕರಣ, ಪ್ರಜಾಪ್ರಭುತ್ವ ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟುಗಳಲ್ಲಿ ಒಂದು ಎಂಬ ಚರ್ಚೆ ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಕೆಲವು ಸರ್ಕಾರೇತರ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ. ನೀತಿ ನಿರೂಪಣೆ ಮತ್ತು ನ್ಯಾಯಾಂಗದ ಮಟ್ಟದಲ್ಲಿಯೂ ರಾಜಕಾರಣದ ಅಪರಾಧೀಕರಣವನ್ನು ತಡೆಯುವ ಕೆಲವು ಪ್ರಯತ್ನಗಳು ನಡೆದಿವೆ.

* ರಾಜಕಾರಣದ ಅಪರಾಧೀಕರಣ ತಡೆಗೆ ಕಾಯ್ದೆ ಮಟ್ಟದಲ್ಲಿ ಆಗಿರುವ ಪ್ರಯತ್ನಗಳು ಯಾವುವು?

1. ಭಾರತದಲ್ಲಿ ಜನಪ್ರತಿನಿಧಿಗಳ ಆಯ್ಕೆಗೆ ಚೌಕಟ್ಟು ರೂಪಿಸುವುದಕ್ಕಾಗಿ 1951ರಲ್ಲಿ ಜಾರಿಗೊಂಡ ಜನಪ್ರತಿನಿಧಿ ಕಾಯ್ದೆಗೆ ಹಲವು ಬಾರಿ ತಿದ್ದುಪಡಿ ಮಾಡಿ ವ್ಯವಸ್ಥೆಯನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗಿಸುವ ಪ್ರಯತ್ನಗಳು ನಡೆದಿವೆ. ಆದರೆ, 1996ರಲ್ಲಿ ಕಾಯ್ದೆಗೆ ಮಾಡಿದ ತಿದ್ದುಪಡಿ ರಾಜಕೀಯ ವ್ಯವಸ್ಥೆಯನ್ನು ಅಪರಾಧ ಮುಕ್ತಗೊಳಿಸುವುದಕ್ಕಾಗಿ ನಡೆದ ಮೊದಲ ಪ್ರಯತ್ನ. ಸರ್ಕಾರಿ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸುವುದಕ್ಕೆ ಅವಕಾಶ ಕಲ್ಪಿಸುವುದು ಈ ತಿದ್ದುಪಡಿಯ ಪ್ರಮುಖ ಅಂಶ. ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ವೀಕ್ಷಕರಿಗೆ ಮನದಟ್ಟಾದರೆ ಮತ ಎಣಿಕೆಯನ್ನು ತಡೆ ಹಿಡಿಯುವ ಅಧಿಕಾರವನ್ನು ವೀಕ್ಷಕರಿಗೆ ಈ ತಿದ್ದುಪಡಿಯು ನೀಡಿದೆ.

2. ಕಾಯ್ದೆಗೆ 2002ರಲ್ಲಿ ಮಾಡಿದ ತಿದ್ದುಪಡಿ, ರಾಜಕಾರಣದ ಅಪರಾಧೀಕರಣವನ್ನು ತಡೆಯುವಲ್ಲಿ ಮಹತ್ವದ ಹೆಜ್ಜೆ. ಈ ತಿದ್ದುಪಡಿ ಮೂಲಕ ಕಾಯ್ದೆಗೆ 33ಎ ಎಂಬ ಹೊಸ ಸೆಕ್ಷನ್‌ ಸೇರಿಸಲಾಯಿತು. ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಅಪರಾಧ ಪ್ರಕರಣಗಳ ಮಾಹಿತಿಯನ್ನು ಚುನಾವಣಾ ನಾಮಪತ್ರದ ಜತೆಗೆ ಅಭ್ಯರ್ಥಿಯು ನೀಡಬೇಕು ಎಂಬುದು ಈ ಸೆಕ್ಷನ್‌ನ ತಿರುಳು. ಜತೆಗೆ, ಅಭ್ಯರ್ಥಿಯ ಆಸ್ತಿ, ಸಾಲದ ವಿವರಗಳನ್ನೂ ಸಲ್ಲಿಸಬೇಕು.

* ಸುಪ್ರೀಂ ಕೋರ್ಟ್‌ ನಡೆಸಿದ ಪ್ರಯತ್ನಗಳು ಯಾವುವು?

ಮತದಾನದ ಹಕ್ಕು ಹೊಂದಿರುವ ವ್ಯಕ್ತಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇದೆ ಎಂದು ಜನಪ್ರತಿನಿಧಿ ಕಾಯ್ದೆ ಹೇಳುತ್ತದೆ. ಜೈಲಿನಲ್ಲಿ ಇರುವ ವ್ಯಕ್ತಿಗೆ ಮತದಾನದ ಹಕ್ಕು ಇಲ್ಲ. ಹಾಗಾಗಿ ಸೆರೆಮನೆ ಅಥವಾ ಪೊಲೀಸ್‌ ಕಸ್ಟಡಿಯಲ್ಲಿ ಇರುವ ವ್ಯಕ್ತಿಗೆ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಇಲ್ಲ ಎಂದು 2013ರ ಜುಲೈಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡುತ್ತದೆ. 

ಆದರೆ, 2013ರಲ್ಲಿ ಆಡಳಿತದಲ್ಲಿದ್ದ ಯುಪಿಎ ಸರ್ಕಾರವು ಜನಪ್ರತಿನಿಧಿ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತಂದು ಎರಡು ಪ್ರಮುಖ ಬದಲಾವಣೆಗಳನ್ನು ಮಾಡುತ್ತದೆ. ಮೊದಲನೆಯದಾಗಿ, ವ್ಯಕ್ತಿಯು ಜೈಲಿನಲ್ಲಿದ್ದರೂ ಮತದಾನದ ಹಕ್ಕು ರದ್ದಾಗುವುದಿಲ್ಲ. ಬದಲಿಗೆ, ತಾತ್ಕಾಲಿಕವಾಗಿ ಅಮಾನತುಗೊಳ್ಳುತ್ತದೆ. ಆದ್ದರಿಂದ ಆ ವ್ಯಕ್ತಿ ಮತದಾರ ಅಲ್ಲ ಎಂದು ಹೇಳಲಾಗದು. ಹಾಗಾಗಿ ಆ ವ್ಯಕ್ತಿಗೆ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಇದೆ ಎಂದು ಈ ತಿದ್ದುಪಡಿ ಹೇಳುತ್ತದೆ.

ಎರಡನೆಯದಾಗಿ, ಅನರ್ಹತೆಯನ್ನು ಮರು ವ್ಯಾಖ್ಯಾನ ಮಾಡಲಾಗಿದೆ. ಕೆಲವು ನಿರ್ದಿಷ್ಟ ಅಪರಾಧ ಕೃತ್ಯಗಳಿಗಾಗಿ ಶಿಕ್ಷೆಗೆ ಒಳಗಾದರೆ ಮಾತ್ರ ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳ್ಳುತ್ತಾರೆ ಎಂದು ಹೇಳುತ್ತದೆ. ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೆ ಒಳಗಾದವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ ಎಂದು ತಿದ್ದುಪಡಿ ಹೇಳಿದೆ.

ಮಾಹಿತಿ ಕೊಡದಿದ್ದರೆ ನಾಮಪತ್ರ ತಿರಸ್ಕೃತ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಬಗ್ಗೆ ತಿಳಿದುಕೊಳ್ಳುವುದು ಮತದಾರರ ಹಕ್ಕು. ಹಾಗಾಗಿ ನಾಮಪತ್ರ ಸಲ್ಲಿಸುವಾಗ ನೀಡಬೇಕಿರುವ ಯಾವುದೇ ಮಾಹಿತಿಯನ್ನು ನೀಡದೇ ಇದ್ದರೆ ಅಂತಹ ನಾಮಪತ್ರ ತಿರಸ್ಕೃತವಾಗುತ್ತದೆ ಎಂದು 2013ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ತ್ವರಿತ ವಿಚಾರಣೆ: ಸಂಸದರು ಮತ್ತು ಶಾಸಕರ ವಿರುದ್ಧದ ಅಪರಾಧ ಪ್ರಕರಣಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಅಧೀನ ನ್ಯಾಯಾಲಯಗಳಿಗೆ 2014ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಇಂತಹ ಪ್ರಕರಣಗಳ ವಿಚಾರಣೆಯನ್ನು ದಿನವೂ ನಡೆಸಬೇಕು ಎಂದು ಸೂಚಿಸುತ್ತದೆ.

ಆಯ್ಕೆ ರದ್ದತಿ: ಚುನಾಯಿತ ಅಭ್ಯರ್ಥಿಯು ನಾಮಪತ್ರದ ಜತೆಗೆ ತನ್ನ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ಮಾಹಿತಿ ನೀಡದೇ ಇದ್ದರೆ ಅವರ ಸದಸ್ಯತ್ವವನ್ನೇ ರದ್ದುಪಡಿಸಬಹುದು ಎಂದು 2015ರ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

* ಸುಪ್ರೀಂ ಕೋರ್ಟ್‌ ಆದೇಶಗಳಿಂದ ಆಗಿರುವ ಪರಿಣಾಮ ಏನು?

ಅಪರಾಧ ಕೃತ್ಯಗಳಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿರುವವರಿಗೆ ಜೀವನಪೂರ್ತಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ರಾಜಕಾರಣಿಗಳ ವಿರುದ್ಧದ ಪ್ರಕರಣಗಳನ್ನು ವರ್ಷದೊಳಗೆ ವಿಚಾರಣೆ ನಡೆಸಬೇಕು ಎಂದು 2014ರ ಮಾರ್ಚ್‌ನಲ್ಲಿ ನೀಡಿದ ಆದೇಶದ ಜಾರಿ ಯಾವ ರೀತಿ ಆಗಿದೆ ಎಂದು ಪ್ರಶ್ನಿಸಿದೆ. ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ರಚಿಸುವುದಕ್ಕೆ ಒಲವು ತೋರಿದೆ. ಇಂತಹ ನ್ಯಾಯಾಲಯ ಸ್ಥಾಪನೆಯ ನೀಲನಕ್ಷೆಯನ್ನು ತನ್ನ ಮುಂದೆ ಇರಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ರಾಜ್ಯಗಳನ್ನೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿಸುವಂತೆ ಹೇಳಿದೆ.

* ಚುನಾವಣಾ ಆಯೋಗದ ನಿಲುವು ಏನು?

ಅಪರಾಧ ಸಾಬೀತಾದ ವ್ಯಕ್ತಿಗಳು ಚುನಾವಣೆಗೆ ನಿಲ್ಲಬಾರದು ಎಂಬ ನಿಲುವನ್ನು ಆಯೋಗ ಹೊಂದಿದೆ. ಅಪರಾಧಿಗಳು ಚುನಾವಣೆಗೆ ಸ್ಪರ್ಧಿಸದಂತೆ ಆಜೀವ ನಿಷೇಧ ಹೇರಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿಕೆ ನೀಡಿದೆ.

***

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.