ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಹ್ಯಾಟ್ರಿಕ್ ಜಯದ ತೋರಣ ಕಟ್ಟಿದ ಕರ್ನಾಟಕ

ವಿನಯ್‌ ಬಳಗಕ್ಕೆ ಇನಿಂಗ್ಸ್‌ ಗೆಲುವು, ಮಿಥುನ್‌ ವೇಗದ ದಾಳಿಗೆ ಪರದಾಡಿದ ಮಹಾರಾಷ್ಟ್ರ
Last Updated 4 ನವೆಂಬರ್ 2017, 11:30 IST
ಅಕ್ಷರ ಗಾತ್ರ

ಪುಣೆ: ನಿರೀಕ್ಷೆಯೆಂತೆಯೇ ಮಹಾರಾಷ್ಟ್ರವನ್ನು ಬೇಗನೆ ಕಟ್ಟಿಹಾಕಿದ ಕರ್ನಾಟಕ ತಂಡ ಇನಿಂಗ್ಸ್‌ ಹಾಗೂ 136 ರನ್‌ಗಳ ಅಮೋಘ ಗೆಲುವು ಪಡೆದು ರಣಜಿ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದೆ.

ಈ ಮೂಲಕ ರಾಜ್ಯ ತಂಡ ನಾಕೌಟ್‌ ಪ್ರವೇಶಿಸುವ ಹಾದಿಯನ್ನೂ ಸುಗಮ ಮಾಡಿಕೊಂಡಿದೆ. ಪಂದ್ಯದ ಮೊದಲ ದಿನದಿಂದಲೇ ಆಲ್‌ರೌಂಡ್‌ ಪ್ರದರ್ಶನ ನೀಡಿದ್ದ ವಿನಯ್‌ ಬಳಗ ಕೊನೆಯ ದಿನ ಎರಡು ಗಂಟೆ ನಾಲ್ಕು ನಿಮಿಷಗಳಲ್ಲಿ ಪಂದ್ಯ ಗೆದ್ದುಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 245 ರನ್ ಗಳಿಸಿದ್ದ ಮಹಾರಾಷ್ಟ್ರ ದ್ವಿತೀಯ ಇನಿಂಗ್ಸ್‌ನಲ್ಲಿ 247 ರನ್‌ಗೆ ಸರ್ವಪತನ ಕಂಡಿತು.

ಪ್ರತಿ ಉತ್ತಮ ಆರಂಭ ಕೂಡ ದೊಡ್ಡ ಯಶಸ್ಸಿಗೆ ಕಾರಣವಾಗುತ್ತದೆ ಎನ್ನುವುದು ಇದೇ ಕಾರಣಕ್ಕೆ ಇರಬಹುದು. ಮೊದಲ ದಿನ ಕರ್ನಾಟಕ ತಂಡ ಬೌಲಿಂಗ್‌ನಲ್ಲಿ ಮಿಂಚಿತ್ತು, ಎರಡು ದಿನ ಬ್ಯಾಟಿಂಗ್ ಮೂಲಕ ಅಬ್ಬರಿಸಿತ್ತು. ಕೊನೆಯ ದಿನ ವೇಗಿ ಅಭಿಮನ್ಯು ಮಿಥುನ್‌ ಕರಾರುವಾಕ್ಕಾದ ಬೌಲಿಂಗ್‌ ಮಾಡಿ ಸತತ ಮೂರನೇ ಜಯಕ್ಕೆ ಕಾರಣರಾದರು.

ರಾಜ್ಯ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಅಸ್ಸಾಂ ಎದುರು ಇನಿಂಗ್ಸ್‌ ಮತ್ತು 121 ರನ್ ಜಯ ಪಡೆದಿತ್ತು. ಹಿಂದಿನ ಪಂದ್ಯದಲ್ಲಿ ಹೈದರಾಬಾದ್‌ ತಂಡವನ್ನು ಮಣಿಸಿತ್ತು.

ಆಗ ನಿರಾಸೆ, ಈಗ ಖುಷಿ: ಕರ್ನಾಟಕ ತಂಡ 2013–14 ಮತ್ತು 2014–15ರ ರಣಜಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಅದೇ ಋತುವಿನಲ್ಲಿ ವಿಜಯ್‌ ಹಜಾರೆ ಮತ್ತು ಇರಾನಿ ಕಪ್‌ನಲ್ಲಿಯೂ ಪ್ರಶಸ್ತಿ ಗೆದ್ದುಕೊಂಡು ದೇಶಿ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದಿತ್ತು.

ನಂತರದ ವರ್ಷದ ರಣಜಿಯಲ್ಲಿ ಲೀಗ್‌ ಹಂತದಲ್ಲಿಯೇ ಸೋಲು ಕಂಡಿತ್ತು. ನಿರ್ಣಾಯಕ ಪಂದ್ಯದಲ್ಲಿ ಇದೇ ಕ್ರೀಡಾಂಗಣದಲ್ಲಿ ಮಹಾರಾಷ್ಟ್ರ ಎದುರು ಮಣಿದು ನಿರಾಸೆ ಅನುಭವಿಸಿತ್ತು. ಆ ಬಳಿಕ ರಾಜ್ಯ ತಂಡ ಇಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗೆಲುವಿನ ಸಿಹಿ ಲಭಿಸಿತು.

ಜಯ ಸುಲಭ ಮಾಡಿದ ಮಿಥುನ್: ಶುಕ್ರವಾರದ ಅಂತ್ಯಕ್ಕೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ಮಹಾರಾಷ್ಟ್ರ ತಂಡ ಸೋಲು ತಪ್ಪಿಸಿಕೊಳ್ಳಲು ಕೊನೆಯ ದಿನ ಪೂರ್ತಿ ಆಡಬೇಕಿತ್ತು. ಇದಕ್ಕೆ ಮಿಥುನ್‌ ಅವಕಾಶ ಕೊಡಲಿಲ್ಲ.

ದಿನದ ಆರಂಭದಲ್ಲಿ ಪೆವಿಲಿಯನ್‌ ತುದಿಯಿಂದ ಆಫ್‌ಸ್ಪಿನ್ನರ್‌ ಕೆ. ಗೌತಮ್ ಬೌಲಿಂಗ್‌ ಮಾಡಿದರು. ಪೆವಿಲಿಯನ್‌ ಎದುರಿನಿಂದ ಬೌಲಿಂಗ್ ಮಾಡಿದ ಮಿಥುನ್‌ 41ನೇ ಓವರ್‌ನಲ್ಲಿ ರುತುರಾಜ್ ಸಿಂಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಪಾಯಿಂಟ್‌ ಬಳಿ ಬಾರಿಸಿದ ಚೆಂಡನ್ನು ಕರುಣ್‌ ಸೊಗಸಾಗಿ ಹಿಡಿತಕ್ಕೆ ಪಡೆದರು. ನಂತರ ರಾಹುಲ್‌ ತ್ರಿಪಾಠಿ ಮತ್ತು ಚಿರಾಗ್‌ ಖುರಾನ ವಿಕೆಟ್‌ ಕಬಳಿಸಿದರು.

‘ಪೀಣ್ಯ ಎಕ್ಸ್‌ಪ್ರೆಸ್‌’ ಎಂದೇ ಹೆಸರಾದ ಮಿಥುನ್‌ ಶನಿವಾರ ಎಂಟು ಓವರ್‌ ಬೌಲ್ ಮಾಡಿ ಮೂರು ವಿಕೆಟ್‌ ಪಡೆದರು. ಈ ಮೂರು ವಿಕೆಟ್‌ಗಳು 15 ರನ್‌ಗಳ ಅಂತರದಲ್ಲಿ ಉರುಳಿದವು. ಇನ್ನೊಬ್ಬ ವೇಗಿ ರೋನಿತ್‌ ಮೋರೆ ಎರಡು ವಿಕೆಟ್‌ ಕಬಳಿಸಿದರೆ, ಕೆ. ಗೌತಮ್‌, ಸ್ಟುವರ್ಟ್‌ ಮತ್ತು ಕರುಣ್ ತಲಾ ಒಂದು ವಿಕೆಟ್‌ ಪಡೆದು ಗೆಲುವು ತಂದುಕೊಟ್ಟರು.

ಮೊದಲ ಅವಧಿಯಲ್ಲಿ ವಿಕೆಟ್‌:  ಕರ್ನಾಟಕ ತಂಡ ಎರಡು ಸಲ ಮೊದಲ ಅವಧಿಯಲ್ಲಿ ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದ್ದು ವಿಶೇಷ.

ಮೊದಲ ದಿನ ಮಹಾರಾಷ್ಟ್ರದ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ವಿನಯ್‌ ಔಟ್‌ ಮಾಡಿದ್ದರು. ಶನಿವಾರ ಕೂಡ ಮಿಥುನ್ ಮೊದಲ ಇದೇ ಅವಧಿಯಲ್ಲಿ ಮೂರು ವಿಕೆಟ್‌ ಪಡೆದರು. ಮಹಾರಾಷ್ಟ್ರ 112 ರನ್‌ ಗಳಿಸುವಷ್ಟರಲ್ಲಿ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.

‘ಯಾವುದೇ ಪಂದ್ಯವಾದರೂ ಉತ್ತಮ ಆರಂಭ ಮುಖ್ಯವಾಗುತ್ತದೆ. ಮೊದಲ ದಿನವೇ ವಿನಯ್‌ ಬೇಗನೆ ಪಡೆದು ನಮ್ಮ ಮೇಲೆ ಹಿಡಿತ ಸಾಧಿಸಿದರು. ಈ ಗೆಲುವಿನ ಶ್ರೇಯ ವಿನಯ್‌ಗೆ ಸಲ್ಲಬೇಕು’ ಎಂದು ಮಹಾರಾಷ್ಟ್ರ ತಂಡದ ನಾಯಕ ಅಂಕಿತ್‌ ಭಾವ್ನೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಮುಂದಿನ ಪಂದ್ಯ 9ರಂದು
ಕರ್ನಾಟಕ ಮತ್ತು ದೆಹಲಿ ತಂಡಗಳ ನಡುವೆ ಇದೇ 9ರಿಂದ ಬೆಂಗಳೂರು ಬಳಿ ಇರುವ ಆಲೂರು ಮೈದಾನದಲ್ಲಿ ರಣಜಿ ಪಂದ್ಯ ನಡೆಯಲಿದೆ.
ಆಲೂರು ಮೈದಾನದಲ್ಲಿ ಹಿಂದೆ ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿ, ಶಫಿ ದಾರಾಶಾ ಮತ್ತು ವಿಜಯ್‌ ಹಜಾರೆ ಟೂರ್ನಿಗಳು ನಡೆದಿದ್ದವು. ಈ ಮೈದಾನ ಮೊದಲ ಬಾರಿಗೆ ರಣಜಿಗೆ ಆತಿಥ್ಯ ವಹಿಸಿದೆ.

* ಭೋಜನ ವಿರಾಮದ ಬಳಿಕ ಗೆಲುವು ಪಡೆಯುತ್ತೇವೆ ಅಂದುಕೊಂಡಿದ್ದೆ. ಆದರೆ ಮಿಥುನ್ ಉತ್ತಮ ಬೌಲಿಂಗ್‌ನಿಂದ ನಿರೀಕ್ಷೆಗೂ ಮೊದಲೇ ಜಯ ಲಭಿಸಿತು.

– ವಿನಯ್‌ ಕುಮಾರ್‌, ಕರ್ನಾಟಕ ತಂಡದ ನಾಯಕ

ಮುಖಾಮುಖಿ ಫಲಿತಾಂಶ

ಪಂದ್ಯ 14
ಕರ್ನಾಟಕ ಜಯ 8
ಮಹಾರಾಷ್ಟ್ರ ಜಯ 3
ಡ್ರಾ 3

ಅಭಿಮನ್ಯು ಮಿಥುನ್‌
ಓವರ್‌ 18
ಮೇಡನ್‌ 3
ರನ್‌ 66
ವಿಕೆಟ್‌ 5

ಪಂದ್ಯದ ಅಂಕಿಅಂಶ ಮಾಹಿತಿ
1,120– ಬಂದ ಒಟ್ಟು ರನ್‌

25– ಉರುಳಿದ ಒಟ್ಟು ವಿಕೆಟ್‌

124– ಒಟ್ಟು ಬೌಂಡರಿ

11– ಬಂದ ಒಟ್ಟು ಸಿಕ್ಸರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT