ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದಿಂದ ಜಯಂತಿ ಆಚರಣೆ ಬೇಡ‘

ಕರ್ನಾಟಕ ಸಾಹಿತ್ಯ ಪರಿಷತ್ತು ನಿರ್ಣಯ: ಜನರೇ ಸಾಧಕರನ್ನು ಸ್ಮರಿಸಿಕೊಳ್ಳಲಿ
Last Updated 5 ನವೆಂಬರ್ 2017, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ಟಿಪ್ಪು, ಬಸವಣ್ಣ ಸೇರಿ ಯಾವುದೇ ಮಹಾಪುರುಷರ ಜಯಂತಿಯನ್ನು ಸರ್ಕಾರ ಇನ್ನು ಮುಂದೆ ಆಚರಿಸಬಾರದು. ಆಸಕ್ತ
ಪ್ರಜಾ ಸಮು ದಾಯಗಳು ತಮ್ಮ ಅಭಿಮಾನದ ಸಾಧಕರ ಜಯಂತಿ ಆಚರಿಸಿಕೊಳ್ಳಲಿ’ ಎಂದು ಒತ್ತಾಯಿಸುವ ನಿರ್ಣಯವನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಕೈಗೊಂಡಿದೆ.

ನಗರದಲ್ಲಿ ಭಾನುವಾರ ಪರಿಷತ್ತು ಆಯೋಜಿಸಿದ್ದ ‘ಟಿಪ್ಪು ಸುಲ್ತಾನ್‌– ವಾಸ್ತವ ಇತಿಹಾಸ’ ಉಪನ್ಯಾಸ ಮತ್ತು ಸಂವಾದದಲ್ಲಿ ವಿದ್ವಾಂಸರಾದ ಡಾ.ಎಸ್‌.ಚಂದ್ರಶೇಖರ್‌, ಪ್ರೊ.ಎಂ.ಎಚ್‌.ಕೃಷ್ಣಯ್ಯ, ಡಾ.ಟಿ.ಆರ್‌.ಚಂದ್ರಶೇಖರ್‌, ಡಾ.ಸಿ.ವೀರಣ್ಣ, ಪ್ರೊ.ಎಲ್‌.ಎನ್‌.ಮುಕುಂದರಾಜ್‌, ಬಿ.ಟಿ.ಲಿಲಿತಾ ನಾಯಕ್‌, ಡಾ.ಎಚ್‌.ಎಸ್‌.ಗೋಪಾಲರಾವ್‌, ಡಾ.ಇಂದಿರಾ ಹೆಗಡೆ, ಪ್ರೊ.ಅಬ್ದುಲ್‌ ರೆಹಮಾನ್‌ ಪಾಷಾ, ಡಾ.ಚಂದ್ರಶೇಖರ್‌
ನಿರ್ಣಯ ಬೆಂಬಲಿಸಿ ಸಹಿ ಹಾಕಿದರು.

ಪರಿಷತ್‌ ಅಧ್ಯಕ್ಷ ಡಾ.ಸಿ.ವೀರಣ್ಣ, ‘ಜಯಂತಿ ಆಚರಿಸುವುದು ಸರ್ಕಾರದ ಕೆಲಸವಲ್ಲ. ಟಿಪ್ಪು, ಬಸವಣ್ಣ ಸೇರಿ ಯಾವುದೇ ಮಹಾಪುರುಷರ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸಲೇಬಾರದು’ ಎಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಬಿ.ಟಿ.ಲಲಿತಾನಾಯಕ್‌, ‘ಸರ್ದಾರ್‌ ಸೇವಾ ಲಾಲ್‌ ಜಯಂತಿ ಆಚರಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ನಮ್ಮ ಸಮುದಾಯದ ಕೆಲವರು ಕೇಳಿಕೊಂಡರು. ಅದಕ್ಕೆ ನಾನು ಒಪ್ಪಲಿಲ್ಲ. ಹೀಗೆ ಪ್ರತಿಯೊಂದು ಸಮುದಾಯ, ಜಾತಿಯಲ್ಲಿ ಒಬ್ಬೊಬ್ಬರು ಮಹಾಪುರುಷರ ಜಯಂತಿ ಆಚರಿಸಬೇಕೆಂದು ಬೇಡಿಕೆ ಇಟ್ಟರೆ, ಸರ್ಕಾರ ವರ್ಷಪೂರ್ತಿ ಜಯಂತಿ ಆಚರಿಸಬೇಕಾಗುತ್ತದೆ. ಜಯಂತಿ ನೆಪದಲ್ಲಿ ಸರ್ಕಾರಿ ರಜೆ ಘೋಷಿಸುವುದರಲ್ಲೂ ಅರ್ಥವಿಲ್ಲ. ಜಯಂತಿ ಆಚರಣೆಯನ್ನು ಸರ್ಕಾರ ಕೈಬಿಡಬೇಕು’ ಎಂದರು.

ಪ್ರೊ.ಎಂ.ಎಚ್‌.ಕೃಷ್ಣಯ್ಯ, ‘ಮಹಾಪುರುಷರ ಜಯಂತಿ ಆಚರಿಸಲು ಸರ್ಕಾರದಲ್ಲೂ ನಿರ್ದಿಷ್ಟ ನಿಯಮಾವಳಿಗಳಿಲ್ಲ. ವೊಟ್‌ ಬ್ಯಾಂಕಿಗಾಗಿ ಜಯಂತಿ ಆಚರಿಸುವುದೂ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ‘ಟಿಪ್ಪು ಸುಲ್ತಾನ್‌– ವಾಸ್ತವ ಇತಿಹಾಸ’ ಕುರಿತು ಉಪನ್ಯಾಸ ನೀಡಿದ ವಿಶ್ರಾಂತ ಕುಲಪತಿ ಡಾ.ಎಸ್‌.ಚಂದ್ರಶೇಖರ್‌, ‘ಟಿಪ್ಪು ಅತ್ಯಾಚಾರಿಯಾಗಿದ್ದ ಎನ್ನುವುದಕ್ಕೆ ನೇರ ಸಾಕ್ಷ್ಯ ಒದಗಿಸುವ ದಾಖಲೆಗಳು ಎಲ್ಲಿಯೂ ಇಲ್ಲ. ಬ್ರಿಟಿಷರ ಜತೆ ಕೈಜೋಡಿಸಿ ತನ್ನ ಸಾಮ್ರಾಜ್ಯದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದವರ ಮೇಲೆ ಆತ ಕ್ರೌರ್ಯ ಎಸಗಿದ್ದಾನೆ. ಕೆಲವರನ್ನು ಮತಾಂತರಗೊಳಿಸಿದ್ದಾನೆ. ಇದು ಅಸ್ತಿತ್ವ ಮತ್ತು ಸಾಮ್ರಾಜ್ಯ
ರಕ್ಷಿಸಿಕೊಳ್ಳಲು ಆತ ಅನುಸರಿಸಿರುವ ತಂತ್ರವೆಂದು ವ್ಯಾಖ್ಯಾನಿಸಬಹುದು’ ಎಂದರು.

‘ಬ್ರಿಟಿಷರು ಟಿಪ್ಪುವನ್ನು ಕೊಂದು ಮೈಸೂರು ಸಾಮ್ರಾಜ್ಯವನ್ನು ಒಡೆ ಯರಿಗೆ ಒಪ್ಪಿಸಿದ್ದು ಸುದೈವವೆಂದು ಚರಿತ್ರಾಕಾರರು ಬರೆಯುತ್ತಾರೆ.
ಇವರ ಪ್ರಕಾರ ಬ್ರಿಟಿಷರದ್ದು ದುರಾಕ್ರಮಣ ಅಲ್ಲದಿದ್ದರೆ, ಹೈದರಾಲಿ ಮತ್ತು ಟಿಪ್ಪು ಮಾಡಿದ್ದು ದುರಾಕ್ರಮಣ ಹೇಗಾಗುತ್ತದೆ. ಚರಿತ್ರಾಕಾರರು ತಲೆಯಲ್ಲಿ ಏನನ್ನು ತುಂಬಿಕೊಂಡಿದ್ದಾರೆ’ ಎಂದು ಅವರು ಹರಿಹಾಯ್ದರು.

ಡಾ.ಟಿ.ಆರ್‌.ಚಂದ್ರಶೇಖರ್‌, ‘ರಾಜ್ಯಕ್ಕೆ ರೇಷ್ಮೆ ಪರಿಚಯಿಸಿದ, ಕೈಗಾರಿಕರಣಕ್ಕೆ ಒತ್ತು ನೀಡಿದ ಹಾಗೂ ಪಾಳೇಗಾರರಿಂದ ಭೂಮಿ ಕಿತ್ತುಕೊಂಡು ರೈತರಿಗೆ ಹಂಚಿಕೆ ಮಾಡಿದ ಸಾಧನೆಗಳು ಟಿಪ್ಪುಗೆ ಸಲ್ಲಬೇಕು’ ಎಂದರು.
*
‘ಒಡೆಯರು 300 ಲಿಂಗಾಯತ ಸ್ವಾಮೀಜಿ ಕೊಂದರು’
‘ರೈತರ ಮೇಲೆ ಕರ ಹೆಚ್ಚಿಸಿದನ್ನು ವಿರೋಧಿಸಿದ 300 ಮಂದಿ ಲಿಂಗಾಯಿತ ಸ್ವಾಮೀಜಿಗಳನ್ನು ಇಮ್ಮಡಿ ರಾಜ ಒಡೆಯರು ಕೊಲ್ಲಿಸಿದ್ದರು. ಟಿಪ್ಪು ಅಂತಹ ಕ್ರೌರ್ಯ ಎಸಗಿಲ್ಲ. ವಿದೇಶಗಳಿಂದ ಹಣ್ಣಿನ ಸಸಿ ತರಿಸಿ ರೈತರಿಗೆ ವಿತರಿಸಿ, ಐದು ವರ್ಷ ತೆರಿಗೆ ವಿನಾಯಿತಿ ಕೂಡ ನೀಡಿ ರೈತರ ‍ಪರವಾಗಿದ್ದ ಎನ್ನುವುದನ್ನು ಇತಿಹಾಸ ಹೇಳುತ್ತದೆ’ ಎಂದು ಡಾ.ಸಿ.ವೀರಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT