ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧನಿಗೆ ಹಾವು ಕಡಿತ: ಚಿಕಿತ್ಸೆಗೆ ನೆರವಾದ ಆಹಾರ ಸಚಿವ ಖಾದರ್

ನಿರ್ದಿಷ್ಟ ದಾಳಿಯಲ್ಲೂ ಗುಂಡೇಟಿನಿಂದ ಗಾಯಗೊಂಡಿದ್ದ ಸಂತೋಷ್‌ಕುಮಾರ್‌
Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಹಾವು ಕಡಿತದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯೋಧರೊಬ್ಬರ ಚಿಕಿತ್ಸೆಗೆ ಆಹಾರ ಸಚಿವ ಯು.ಟಿ.ಖಾದರ್‌ ಭಾನುವಾರ ತಡರಾತ್ರಿ ಧಾವಿಸಿ ಬಂದು ನೆರವಾಗಿದ್ದಾರೆ. ಚಿಕಿತ್ಸೆಗೆ ಅಗತ್ಯವಿದ್ದ ಔಷಧಿಗಳನ್ನೂ ಸರ್ಕಾರಿ ಆಸ್ಪತ್ರೆಯಿಂದ ಪೂರೈಸುವ ವ್ಯವಸ್ಥೆ ಮಾಡಿದ್ದಾರೆ.

ಮುಡಿಪು ಸಮೀಪದ ಕೋಡಕಲ್ಲು ನಿವಾಸಿ ಸಂತೋಷ್‌ಕುಮಾರ್‌ ಹಾವು ಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು. ಕಳೆದ ವರ್ಷ ಕಾಶ್ಮೀರದ ಗಡಿಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದೊಳಕ್ಕೆ ಅವಿತಿದ್ದ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗುಂಡೇಟು ತಗುಲಿ ಅವರು ಗಾಯಗೊಂಡಿದ್ದರು.

ಗುಂಡೇಟಿನ ಗಾಯದ ಚಿಕಿತ್ಸೆಯಲ್ಲಿದ್ದ ಸಂತೋಷ್‌ಕುಮಾರ್‌, ಇತ್ತೀಚೆಗಷ್ಟೇ ಕರ್ತವ್ಯಕ್ಕೆ ಮರಳಿದ್ದರು. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಭಾನುವಾರ ರಜೆ ಮೇಲೆ ಊರಿಗೆ ಬಂದಿದ್ದರು. ರಾತ್ರಿ ವಿಷಪೂರಿತ ಹಾವೊಂದು ಅವರಿಗೆ ಕಚ್ಚಿದೆ. ಚಿಕಿತ್ಸೆಗಾಗಿ ಇಲ್ಲಿನ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಧಾವಿಸಿ ಬಂದ ಸಚಿವ:
ಚಿಕಿತ್ಸೆಗಾಗಿ ಕರೆತಂದಾಗ ಹಾವು ಕಡಿತದ ಚಿಕಿತ್ಸೆಯ ಔಷಧಿ ಕೊರತೆ ಇರುವುದಾಗಿ ವೈದ್ಯರು ತಿಳಿಸಿದ್ದರು. ತಡರಾತ್ರಿ 1.15ರ ಸುಮಾರಿಗೆ ಖಾದರ್ ಅವರನ್ನು ಸಂಪರ್ಕಿಸಿದ್ದ ಸಂತೋಷ್‌ಕುಮಾರ್‌ ತಂಗಿ ನೆರವು ಕೇಳಿದ್ದರು. 1.30ರ ವೇಳೆಗೆ ಆಸ್ಪತ್ರೆಗೆ ಧಾವಿಸಿದ ಸಚಿವರು ವೈದ್ಯರೊಂದಿಗೆ ಚರ್ಚಿಸಿದರು. ಚುಚ್ಚುಮದ್ದಿನ ಕೊರತೆ ಇರುವುದಾಗಿ ವೈದ್ಯರು ತಿಳಿಸಿದ್ದರು.

‘ಆರಂಭದಲ್ಲಿ ವೈದ್ಯರು ಔಷಧಿ ಕೊರತೆ ಇರುವುದಾಗಿ ತಿಳಿಸಿದ್ದರು. ಯೋಧನ ಕುಟುಂಬದವರು ದಿಕ್ಕುತೋಚದೆ ಸಂಕಟದಲ್ಲಿದ್ದರು. ತಕ್ಷಣವೇ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಹತ್ತು ಚುಚ್ಚುಮದ್ದುಗಳನ್ನು ಪೂರೈಸುವ ವ್ಯವಸ್ಥೆ ಮಾಡಿದೆ. ಇನ್ನೂ ಅಗತ್ಯವಿದ್ದಲ್ಲಿ ಹೆಚ್ಚಿನ ಚುಚ್ಚುಮದ್ದುಗಳನ್ನು ಪೂರೈಸುವ ವ್ಯವಸ್ಥೆ ಮಾಡಿದ್ದೇನೆ’ ಎಂದು ಖಾದರ್‌ ತಿಳಿಸಿದರು.

‘ರಾತ್ರಿಯೇ ಚಿಕಿತ್ಸೆ ಆರಂಭಿಸಿದ್ದು, ಯೋಧ ಸುಧಾರಿಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ಕೂಡ ಆಸ್ಪತ್ರೆಗೆ ಭೇಟಿಕೊಟ್ಟು ಅವರ ಸ್ಥಿತಿಗತಿ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT