ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬ ಸಮುದಾಯ ಎಸ್ಟಿ ಸೇರ್ಪಡೆಗೆ ಆಗ್ರಹ

Last Updated 7 ನವೆಂಬರ್ 2017, 5:43 IST
ಅಕ್ಷರ ಗಾತ್ರ

ಬಳ್ಳಾರಿ: ‘ಕುರುಬ ಸಮುದಾಯವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಹಿಂದೆ ಉಳಿದಿದೆ. ಹೀಗಾಗಿ ಈ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು’ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ ಒತ್ತಾಯಿಸಿದರು. ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಭಕ್ತ ಕನಕ ದಾಸರ ಜಯಂತಿ ಆಚರಣೆಯಲ್ಲಿ ಮಾತನಾಡಿದರು.

‘ಎಸ್ಟಿ ಸೇರ್ಪಡೆ ಮಾಡುವುದರಿಂದ ಸಮುದಾಯ ಜನ ಮುಂದೆ ಬರುತ್ತಾರೆ. ಅಲ್ಲದೇ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹಾಗಾಗಿ ಅಧಿಕಾರಿಗಳು ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕಾಗಿದೆ’ ಎಂದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಳ್ಳಾರಿ ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪಾಲಿಕೆ ಸದಸ್ಯರಾದ ಬೆಣಕಲ್ ಬಸವರಾಜ, ಬಿ.ಕೆ.ಕೆರಕೋಡಪ್ಪ ಉಪಸ್ಥಿತರಿದ್ದರು.

ಮೆರವಣಿಗೆ: ಈ ಮೊದಲು ಇಲ್ಲಿನ ಕುಮಾರಸ್ವಾಮಿ ದೇವಾಲಯದ ರಸ್ತೆಯಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಉಪವಿಭಾಗಾಧಿ ಕಾರಿಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು. ದೇವಾಲಯದ ರಸ್ತೆಯಿಂದ ಎಸ್‍ಪಿ ವೃತ್ತ, ಕನಕದುರ್ಗಮ್ಮ ದೇವಾಲಯ, ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ತೇರುಬೀದಿ, ಜೈನ್ ಮಾರುಕಟ್ಟೆ, ಎಚ್.ಆರ್.ಗವಿಯಪ್ಪ ವೃತ್ತ, ಹೊಸಬಸ್ ನಿಲ್ದಾಣ ರಸ್ತೆಯ ಮಾರ್ಗವಾಗಿ ರಂಗಮಂದಿರಕ್ಕೆ ಮೆರವಣಿಗೆ ತಲುಪಿತು. ಮೆರವಣಿಗೆಯುದ್ದಕ್ಕೂ ತಾಷಾರಾಂಡೋಲ, ಡೊಳ್ಳು ಕುಣಿತ, ಗೊರವರ ಕುಣಿತ ಸೇರಿದಂತೆ ಇತರೆ ವಾದ್ಯಮೇಳಗಳು ನೋಡುಗರ ವಿಶೇಷ ಗಮನ ಸೆಳೆದವು.

ನಗರದ ವಿವಿಧ ಕಡೆ ಆಚರಣೆ: ಪಾಲಿಕೆ: ನಗರದ ಮಹಾನಗರದ ಪಾಲಿಕೆಯಲ್ಲಿ ಸೋಮವಾರ ಕನಕದಾಸರ ಭಾವಚಿತ್ರಕ್ಕೆ ಮೇಯರ್ ಜಿ.ವೆಂಟರಮಣ ಪುಷ್ಪಾರ್ಪಣೆ ಮಾಡಿದರು. ಇದೇ ವೇಳೆಯಲ್ಲಿ ಸಿಬ್ಬಂದಿ ಎಲ್ಲರಿಗೂ ಸಿಹಿ ಹಂಚಿದರು. ಉಪಮೇಯರ್ ಉಮಾದೇವಿ, ಆಯುಕ್ತರು ಎಂ.ಕೆ.ನಲ್ವಡಿ, ಸದಸ್ಯರಾದ ಬಿ.ಕುಮಾರಸ್ವಾಮಿ, ಶಾಷಾಬ, ಬಸವರಾಜ, ಕರೆಕೊಡಪ್ಪ, ಮಲ್ಲನಗೌಡ, ನಾಗಮ್ಮ ಉಪಸ್ಥಿತರಿದ್ದರು.

ಜೆಡಿಎಸ್‌ ಕಚೇರಿ: ನಗರದ ಜೆಡಿಎಸ್‌ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶಿವಪ್ಪ ಪುಷ್ಪಾರ್ಪಣೆ ಮಾಡಿದರು. ಬಳಿಕ ಇಲ್ಲಿನ ಕನಕದಾಸರ ಪುತ್ಥಳಿಗೆ ಮುಖಂಡರು ಹೂವಿನ ಹಾರ ಹಾಕಿದರು. ಮುಖಂಡರಾದ ಲಕ್ಷ್ಮೀಕಾಂತ್ ರೆಡ್ಡಿ, ಮೀನಳ್ಳಿ ತಾಯಣ್ಣ, ಗೌರೀಶ್, ವಸಂತಕುಮಾರ್, ವಾದಿರಾಜ ಶೆಟ್ಟಿ, ಕೊರ್ಲಗುಂದಿ ಪಂಪಾಪತಿ, ಗಾದಿಲಿಂಗ ಇದ್ದರು.

ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜು: ಕನಕದಾಸರ ಜಯಂತಿ ಅಂಗವಾಗಿ ನಗರದ ಕಾಲೇಜಿನಲ್ಲಿ ಶಿಕ್ಷಕಿ ಜ್ಯೋತಿ ಅವರು ದಾಸರ ಕೀರ್ತನೆ ಹಾಡಿದರು. ಕನ್ನಡ ಶಿಕ್ಷಕಿ ಕುಮಾರಿ ಉಷಾ ಮಾತನಾಡಿ, ‘ಕನಕದಾಸರು ಕೀರ್ತನೆಗಳನ್ನು ಸರಳ ಭಾಷೆಯಲ್ಲಿ ರಚಿಸಿದ್ದರು. ಹೀಗಾಗಿ ಅವುಗಳು ಅಗಾದ ಪರಿಣಾಮ ಬೀರಿದವು. ಕೀರ್ತನೆಗಳು ಕನ್ನಡ ಸಾಹಿತ್ಯ ಸೊಬಗನ್ನು ಹೆಚ್ಚಿಸಿವೆ’ ಎಂದರು. ಪ್ರಾಚಾರ್ಯ ಅನಿಲ್ ಕುಮಾರ ಇದ್ದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ: ನಗರದ ಕುಮಾರಸ್ವಾಮಿ ದೇವಸ್ಥಾನದ ಬಳಿ ಇರುವ ಕನಕದಾಸರ ಪುತ್ಥಳಿಗೆ ಸಂಘಟನೆ ಮುಖಂಡರು ಹೂವಿನ ಹಾರ ಹಾಕಿದರು. ಮುಖಂಡರಾದ ಮುಂಡ್ರಿಗಿ ನಾಗರಾಜ್, ಪಿ.ಜಗದೀಶ್ವರ ರೆಡ್ಡಿ, ಜಿ.ಗೋವರ್ಧನ, ಕುಬೇರ, ಎಚ್‌.ವೀರಭದ್ರಪ್ಪ, ರಾಜು, ನಾಟರಾಜ ಪಾಲ್ಗೊಂಡಿದ್ದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ: ನಗರದ ಕುಮಾರಸ್ವಾಮಿ ದೇವಸ್ಥಾನದ ಬಳಿ ಇರುವ ಕನಕದಾಸರ ಪುತ್ಥಳಿಗೆ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಎ.ಈಶ್ವರಪ್ಪ ಹೂವಿನ ಹಾರಹಾಕಿ ಮಾತನಾಡಿದರು. ಮುಖಂಡರಾದ ಸಿ.ಸೋಮಶೇಖರ್, ಬಿ.ಗುರುಸಿದ್ದಪ್ಪ, ರಾಮಣ್ಣ ಚೇಳಗುರ್ಕಿ, ಎಂ.ಮುಕ್ಕಣ್ಣ, ರುದ್ರಪ್ಪ ಹಲಕುಂದಿ, ಸುಂಕಣ್ಣ, ಶಿವಕುಮಾರ, ಎಚ್‌.ಎಸ್‌.ರಂಗಪ್ಪ ಭಾಗವಹಿಸಿದ್ದರು.

ಕರ್ನಾಟಕ ಸಮತಾ ಸೈನಿಕ ದಳ: ನಗರದ ನಗರದ ಕುಮಾರಸ್ವಾಮಿ ದೇವಸ್ಥಾನದ ಬಳಿ ಇರುವ ಕನಕದಾಸರ ಪುತ್ಥಳಿಗೆ ಸಂಘದ ಹೈದರಾಬಾದ್ ಕರ್ನಾಟಕದ ವಿಭಾಗೀಯ ಕಾರ್ಯಾಧ್ಯಕ್ಷ ಕೆ.ಪೃಥ್ವಿರಾಜ್ ಸೋಮವಾರ ಹೂವಿನ ಹಾರ ಹಾಕಿದರು. ಮುಖಂಡರಾದ ಹೆಚ್.ಈರಣ್ಣ, ಡಿ.ಹನುಮೇಶ, ಪರ್ವಿನ್ ಬಾನು, ಸುವರ್ಣಮ್ಮ, ರೇಣುಕಾ ನಾಯ್ಡು, ಚಾಂದ ಬೀ, ಪುಷ್ಪಲತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT