ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತು ಕಳ್ಳಸಾಗಣೆ ತಡೆಗೆ ಪ್ರತ್ಯೇಕ ಶ್ವಾನದಳ

Last Updated 7 ನವೆಂಬರ್ 2017, 19:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಕಳ್ಳಸಾಗಣೆಗೆ ಕಡಿವಾಣ ಹಾಕಲು ಮಾದಕ ವಸ್ತು ತಡೆ ಘಟಕವು ಪ್ರತ್ಯೇಕ ಶ್ವಾನದಳವನ್ನು ಬಳಸಿಕೊಳ್ಳಲು ಚಿಂತನೆ ನಡೆಸಿದೆ.

‘ಪ್ರತ್ಯೇಕ ಶ್ವಾನದಳ ಸ್ಥಾಪನೆ ಸಂಬಂಧಿತ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಿದ್ದೇವೆ. 35 ಜರ್ಮನ್ ಶೆಫರ್ಡ್ ತಳಿಯ ನಾಯಿಮರಿಗಳನ್ನು ದತ್ತು ಪಡೆದು, ಅವುಗಳಿಗೆ ತರಬೇತಿ ನೀಡಲು ನಿರ್ಧರಿಸಿದ್ದೇವೆ. ಇದಕ್ಕೆ ಗೃಹ ಇಲಾಖೆಯ ಅನುಮತಿ ಸಿಗುವುದಷ್ಟೇ ಬಾಕಿ ಇದೆ’ ಎಂದು ಎಡಿಜಿಪಿ ಭಾಸ್ಕರ್ ರಾವ್ ಹೇಳಿದರು.

‘ಮಾದಕ ವಸ್ತು ಸಾಗಣೆ ಪ್ರಕರಣಗಳನ್ನು ಪತ್ತೆ ಹಚ್ಚಲು ಬಾತ್ಮೀದಾರರು ಹಾಗೂ ಮಾರಾಟಗಾರರ ಮೇಲೆ ಮಾತ್ರ ಅವಲಂಬಿತರಾಗಿದ್ದೇವೆ’ ಎಂದು ಮಾದಕ ವಸ್ತುಗಳ ತಡೆ ಘಟಕದ ಮುಖ್ಯಸ್ಥ ಬಿ.ಎಸ್.ಮೋಹನ್ ಕುಮಾರ್ ಹೇಳಿದರು. ‘ಅಪರಾಧ ಕಾರ್ಯಾಚರಣೆ ವೇಳೆ ಪ್ರತ್ಯೇಕ ಶ್ವಾನದಳ ಬಳಸಿಕೊಂಡು ನಿಷೇಧಿತ ವಸ್ತುಗಳನ್ನು ಪತ್ತೆ ಮಾಡಬಹುದು. ಮಾದಕ ವಸ್ತುಗಳ ಮಾರಾಟಗಾರರ ಮನೆಗಳ ಮೇಲೆ ದಾಳಿ ಮಾಡಲು ಪ್ರತ್ಯೇಕ ಶ್ವಾನದಳ ಸಹಕಾರಿಯಾಗುತ್ತವೆ’ ಎಂದು ಹೇಳಿದರು.

‘ಎಂ.ಜಿ.ರಸ್ತೆ, ಇಂದಿರಾನಗರ ಹಾಗೂ ಕೋರಮಂಗಲದಲ್ಲಿ ಮಾದಕ ವಸ್ತುಗಳನ್ನು ಮಾರುತ್ತಿದ್ದ ಮಾರಾಟಗಾರರು, ಈಗ ತಮ್ಮ ಕಾರ್ಯಾಚರಣೆಯ ವ್ಯಾಪ್ತಿಯನ್ನು ನಗರದ ಹೊರವಲಯಕ್ಕೂ ವಿಸ್ತರಿಸಿದ್ದಾರೆ. ಕೆ.ಆರ್.ಪುರ, ಬಾಣಸವಾಡಿ, ಕಮ್ಮನಹಳ್ಳಿ, ಟಿ.ಸಿ.ಪಾಳ್ಯ ಹಾಗೂ ಹೆಬ್ಬಾಳದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದೆ’ ಎಂದು ಘಟಕದ ಮೂಲಗಳು ತಿಳಿಸಿವೆ.

‘ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಮಾದಕ ವಸ್ತುಗಳ ಸಾಗಣೆ ಪತ್ತೆ ಹಚ್ಚುವ ಸಲುವಾಗಿ ಮೂರು ಜರ್ಮನ್ ಶೆಫರ್ಡ್‌ಗಳನ್ನು ಬಳಸಲಾಗುತ್ತಿದೆ. ಅವುಗಳು ಮಾದಕ ವಸ್ತುಗಳನ್ನು ಪತ್ತೆ ಮಾಡುವುದರಲ್ಲಿ ಪರಿಣಿತಿ ಹೊಂದಿವೆ. ಹೀಗಾಗಿ, ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಶ್ವಾನದಳ ಬಳಕೆಗೆ ಮುಂದಾಗಿದ್ದೇವೆ’ ಎಂದು ಘಟಕದ ಅಧಿಕಾರಿ ತಿಳಿಸಿದರು.

‘ಜರ್ಮನ್ ಶೆಫರ್ಡ್‌ಗಳ ಮಾರಾಟ ಬೆಂಗಳೂರು ಹಾಗೂ ಮೈಸೂರಿನಲ್ಲಿ ಹೆಚ್ಚಾಗಿ ನಡೆಯುತ್ತದೆ. ಪ್ರತಿ ನಾಯಿ ಮರಿಯ ಬೆಲೆ ₹ 20,000 ರಿಂದ ₹40,000 ಇರುತ್ತದೆ’ ಎಂದು ಮಾಹಿತಿ ನೀಡಿದರು.

ಆಡುಗೋಡಿಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿರುವ ಶ್ವಾನ ತರಬೇತಿ ಕೇಂದ್ರದಲ್ಲಿ 60 ನಾಯಿಗಳಿವೆ. ಇವುಗಳು ಅಪರಾಧ ಪತ್ತೆಕಾರ್ಯ, ಗಣ್ಯರ ಭದ್ರತೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಾದಕ ವಸ್ತುಗಳ ತಡೆಗೆ ಹಾಗೂ ಸ್ಫೋಟಕ ಪತ್ತೆ ಕಾರ್ಯದಲ್ಲಿ ಪ್ರತಿ ನಿತ್ಯ 10ರಿಂದ 11 ಗಂಟೆ ಕರ್ತವ್ಯ ನಿರ್ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT