ಶುಕ್ರವಾರ, ಮಾರ್ಚ್ 5, 2021
27 °C
ಮೈಸೂರು ವಿ.ವಿ ರಾಜ್ಯಶಾಸ್ತ್ರ ವಿಭಾಗದ ಪ್ರಶ್ನೆಪತ್ರಿಕೆಯಲ್ಲಿ ಲೋಪ

ಮೈಸೂರು ವಿ.ವಿ: ಪಿಎಚ್‌ಡಿ ಪ್ರಶ್ನೆಪತ್ರಿಕೆಯಲ್ಲಿ ನಕಲು

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

ಮೈಸೂರು ವಿ.ವಿ: ಪಿಎಚ್‌ಡಿ ಪ್ರಶ್ನೆಪತ್ರಿಕೆಯಲ್ಲಿ ನಕಲು

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು ಈಚೆಗೆ ನಡೆಸಿದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪಿಎಚ್‌.ಡಿ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ವೆಬ್‌ಸೈಟ್ ಒಂದರಿಂದ ಯಥಾವತ್ ನಕಲು ಮಾಡಿ ಸಿದ್ಧಪಡಿಸಿರುವುದು ಬಹಿರಂಗವಾಗಿದೆ.

100 ಅಂಕಗಳ ಪರೀಕ್ಷೆಯಲ್ಲಿ 50 ಅಂಕಗಳಿಗೆ ಬಹುಆಯ್ಕೆ ಪ್ರಶ್ನೆಗಳು, 50 ಅಂಕಗಳಿಗೆ ದೀರ್ಘ ಉತ್ತರದ ಪ್ರಶ್ನೆಗಳು ಇರುತ್ತವೆ. ಬಹುಆಯ್ಕೆ ಪ್ರಶ್ನೆಗಳ ಪೈಕಿ 18 ಪ್ರಶ್ನೆಗಳನ್ನು www.currentgk.com ವೆಬ್‌ಸೈಟ್‌ನಿಂದ ನಕಲು ಮಾಡಲಾಗಿದೆ. ಇದರಿಂದ ಪರೀಕ್ಷೆಗೆ ಮುಂಚೆಯೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆಗಳ ಬಗ್ಗೆ ವಿದ್ಯಾರ್ಥಿಗಳು ಅನುಮಾನ ವ್ಯಕ್ತ‍ಪಡಿಸಿದ್ದಾರೆ.

ಯುಜಿಸಿ ನಿಯಮಾವಳಿ ಪ್ರಕಾರ ವಿದ್ಯಾರ್ಥಿಗಳು ಪಿಎಚ್‌.ಡಿ ಕೋರ್ಸಿಗೆ ನೋಂದಣಿಯಾಗಲು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ವರ್ಷದೊಳಗೆ ಸಂಶೋಧನೆ ಆರಂಭಿಸಬಹುದು.

‘ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದರಿಂದ ನಮ್ಮ ಶ್ರಮ ವ್ಯರ್ಥವಾಗಿದೆ. ಭವಿಷ್ಯದ ಮೇಲೆ ಬರೆ ಎಳೆದಂತಾಗಿದೆ. ಇದರ ಹಿಂದೆ ಏನೋ ಸಂಚು ನಡೆದಿದೆ’ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ವಿ.ವಿ ಪ್ರಭಾರಿ ಕುಲಪತಿ ಪ್ರೊ.ದಯಾನಂದ ಮಾನೆ, ‘ಇದು ಗಂಭೀರ ಲೋಪವಾಗಿದ್ದು, ಪ್ರಶ್ನೆಪತ್ರಿಕೆ ರೂಪಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನೋಟಿಸ್‌ ನೀಡಲು ತೀರ್ಮಾನಿಸಲಾಗಿದೆ. ಈ ವಿಚಾರ ನನ್ನ ಗಮನಕ್ಕೂ ಬಂದಿದೆ’ ಎಂದರು.

‘ಇದು ತರಾತುರಿಯಲ್ಲಿ ಪ್ರಶ್ನೆಪತ್ರಿಕೆ ರೂಪಿಸಿರುವುದಕ್ಕೆ ಉದಾಹರಣೆ. ಒಂದೆರಡು ಪ್ರಶ್ನೆಗಳನ್ನು ವೆಬ್‌ಸೈಟ್‌ನಿಂದ ತೆಗೆದುಕೊಂಡಿದ್ದರೆ ದೊಡ್ಡ ತಪ್ಪಲ್ಲ. 18 ಪ್ರಶ್ನೆಗಳನ್ನು ಯಥಾವತ್‌ ಪಡೆದಿರುವುದು ಲೋಪ. 50 ಬಹುಆಯ್ಕೆ ಪ್ರಶ್ನೆಗಳನ್ನು ರೂಪಿಸಲು 10 ಸಿಬ್ಬಂದಿಯನ್ನು ಬಳಸಿಕೊಂಡಿರುತ್ತೇವೆ. ಅವರಿಗೆ 1 ಪ್ರಶ್ನೆಗೆ ₹ 3 ಸಾವಿರ ಪಾವತಿಸುತ್ತೇವೆ. ಇದನ್ನು ಗಮನಿಸಿದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಅನುಮಾನವೂ ಬರುತ್ತದೆ. ಹೀಗಾಗಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು’ ಎಂದು ತಿಳಿಸಿದರು.

ಬದಲಿ ಪರೀಕ್ಷೆಗೆ ಚಿಂತನೆ: ‘ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ಬದಲಿ ಪರೀಕ್ಷೆಗೆ ಚಿಂತನೆ ನಡೆಸಿದ್ದೇವೆ. ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್‌ ಜತೆ ಚರ್ಚಿಸಲಾಗಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.