ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ: ಕಟ್ಟೆಚ್ಚರ

Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು / ಮಂಗಳೂರು: ಟಿಪ್ಪು ಸುಲ್ತಾನ್ ಜಯಂತಿ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಗುತ್ತಿದ್ದರೆ, ಶಾಂತಿಯುತ ವಾತಾವರಣದಲ್ಲಿ ಕಾರ್ಯಕ್ರಮ ನಡೆಸಲು ರಾಜ್ಯ ಸರ್ಕಾರ ತಯಾರಿ ನಡೆಸುತ್ತಿದ್ದು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಇದೇ 10ರಂದು ಟಿಪ್ಪು ಜಯಂತಿ ನಡೆಯಲಿದೆ. ಆದರೆ, ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಳೆದ ಎರಡು ದಿನಗಳಿಂದ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಸಮಾರಂಭದ ಎದುರು ಪ್ರತಿಭಟನೆ ನಡೆಸಲು ಬಿಜೆಪಿ, ಶ್ರೀರಾಮಸೇನೆ, ಬಜರಂಗದಳ ಸಿದ್ಧತೆ ನಡೆಸಿವೆ.

ಈಚೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಟಿಪ್ಪು ಜಯಂತಿ ವಿರೋಧಿಸುವ ಹೆಸರಿನಲ್ಲಿ ಸಾಮರಸ್ಯ ಕದಡಲು ಬಿಜೆಪಿ ಯತ್ನಿಸಲಿದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಪರಿಸ್ಥಿತಿ ದುರುಪಯೋಗ ಪಡಿಸಿಕೊಂಡು ಶಾಂತಿ ಭಂಗಮಾಡುವ ಸಮಾಜಘಾತುಕ ಶಕ್ತಿಗಳ ಮೇಲೆ ಕಣ್ಣಿಡಬೇಕು’ ಎಂದಿದ್ದರು.

ಭದ್ರತಾ ಬಾಂಡ್: ದಕ್ಷಿಣ ಕನ್ನಡ ಜಿಲ್ಲೆ ಪರಿಸ್ಥಿತಿ ಕುರಿತು ಮಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು– ಸುವ್ಯವಸ್ಥೆ ಎಡಿಜಿಪಿ ಕಮಲ್‌‍ಪಂತ್‌ ‘ರಾಜ್ಯ ಸರ್ಕಾರದ ವತಿಯಿಂದ ನಡೆಯುವ ಟಿಪ್ಪು ಜಯಂತಿ ವಿರುದ್ಧ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

‘ಟಿಪ್ಪು ಜಯಂತಿ ಮತ್ತು ಬಿಜೆಪಿಯ ಪರಿವರ್ತನಾ ಯಾತ್ರೆ ವೇಳೆ ಅಹಿತಕರ ಘಟನೆ ನಡೆಯದಂತೆ ನಿಯಂತ್ರಿಸಲು ಒಂದು ವಾರದ ಅವಧಿಯಲ್ಲಿ 128 ಮಂದಿ ಕೋಮು ಗೂಂಡಾಗಳಿಂದ ಭದ್ರತಾ ಬಾಂಡ್‌ ಪಡೆಯಲಾಗಿದೆ’ ಎಂದರು.

‘ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪರಿಸ್ಥಿತಿ ಅವಲೋಕಿಸಿ, ಅಗತ್ಯ ಕಂಡುಬಂದರೆ ಜಿಲ್ಲಾಧಿಕಾರಿಗಳು ಅಂತಹ ಆದೇಶ ಹೊರಡಿಸುತ್ತಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪರಿಸ್ಥಿತಿ ಅವಲೋಕಿಸಿ, ಅಗತ್ಯ ಕಂಡುಬಂದರೆ ಜಿಲ್ಲಾಧಿಕಾರಿಗಳು ಅಂತಹ ಆದೇಶ ಹೊರಡಿಸುತ್ತಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪೊಲೀಸ್‌ ಕಣ್ಗಾವಲಿನಲ್ಲಿ ಕೊಡಗು: ಕೊಡಗಿನಲ್ಲಿ ಟಿಪ್ಪು ಜಯಂತಿಗೆ ಈ ಬಾರಿಯೂ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣಾ ವೇದಿಕೆ ಹಾಗೂ ಕೊಡವ ಸಮಾಜ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ ಜಯಂತಿ ಕೈಬಿಡಲು ಮನವಿ ಮಾಡಿವೆ. ಈ ಮಧ್ಯೆ ಟಿಪ್ಪು ಜಯಂತಿ ವಿರೋಧಿಸಿ 10ರಂದು ಸ್ವಯಂ ಪ್ರೇರಿತ ಕೊಡಗು ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿದೆ.

2015ರಲ್ಲಿ ನಡೆದಿದ್ದ ಗಲಭೆಗೆ ಹೊರ ರಾಜ್ಯದಿಂದ ಬಂದವರು ಕಾರಣವೆಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡ ಕೇರಳದ ಕಣ್ಣೂರು, ಕಾಸರಗೋಡು ಚೆಕ್‌ಪೋಸ್ಟ್‌ಗಳನ್ನು ಪರಿಶೀಲಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ 249 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸ
ಲಾಗಿದೆ. ಹೋಮ್‌ಸ್ಟೇ, ವಸತಿ ಗೃಹಗಳಿಗೆ ಅಚರಿಚಿತರು ಬಂದರೆ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಕಲಬುರ್ಗಿ ಜಿಲ್ಲೆ ಪ್ರವೇಶಿದಂತೆ ಜಿಲ್ಲಾಡಳಿತ ಆದೇಶಿಸಿದೆ. ಈಚೆಗೆ ನಗರಕ್ಕೆ ಬಂದಿದ್ದ ಅವರನ್ನು ಪೊಲೀಸರು ಬಂಧಿಸಿ, ಮುಚ್ಚಳಿಕೆ ಬರೆಸಿಕೊಂಡು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

‘ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ನಮೂದಿಸಬಾರದು’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ  ಜಿಲ್ಲಾಡಳಿತಕ್ಕೆ ಬುಧವಾರ ಪತ್ರ ಬರೆದಿದ್ದಾರೆ. ಮತ್ತೊಂದೆಡೆ ಬೆಳಗಾವಿ ಜಿಲ್ಲಾಡಳಿತ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹಾಗೂ ಸಂಸದ ಸುರೇಶ ಅಂಗಡಿ ಅವರ ಹೆಸರು ಕೈಬಿಟ್ಟು ಆಹ್ವಾನ ಪತ್ರಿಕೆ ಮರುಮುದ್ರಿಸಿದೆ.

ಟಿಪ್ಪುಜಯಂತಿ ಅಂಗವಾಗಿ ಚಿತ್ರದುರ್ಗ ನಗರದಲ್ಲಿ ವಿಧಿಸಿರುವ ನಾಲ್ಕು ದಿನಗಳ ನಿಷೇಧಾಜ್ಞೆ ತೆರವುಗೊಳಿಸುಂತೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.
ನವೀನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ಗುರುವಾರಕ್ಕೆ ಮುಂದೂಡಿತು.

*

‘ಟಿಪ್ಪು ಜಯಂತಿ ವಿರೋಧಿಸುವ ಸಚಿವ ಅನಂತಕುಮಾರ್ ಹೆಗಡೆ ಮತಾಂಧ. ಆತನ ಬಗ್ಗೆ ಇಲ್ಲಿ ಮಾತನಾಡುವುದು ಬೇಡ’
- ಸಿದ್ದರಾಮಯ್ಯ,
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT