ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿ.ವಿ. ಸ್ವಾಯತ್ತತೆ: ಕಾಲದ ಅಗತ್ಯ

Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

* ಡಾ. ಅರುಣ್ ಜೋಳದಕೂಡ್ಲಿಗಿ

‘ಕನ್ನಡ ವಿ.ವಿ. ಸ್ವಾಯತ್ತೆಗೆ ಆತಂಕ’ (ಸಂಗತ, ನ.8) ಲೇಖನದಲ್ಲಿ ಡಾ.ಕರೀಗೌಡ ಬೀಚನಹಳ್ಳಿಯವರು, ವಿ.ವಿ.ಯ ಸ್ವಾಯತ್ತತೆಯ ಅಗತ್ಯವನ್ನು ಸರಿಯಾಗಿ ವಿಶ್ಲೇಷಿಸಿದ್ದಾರೆ. ಕನ್ನಡ ಕಟ್ಟುವ ಮಾತುಗಳು ಅಬ್ಬರದಿಂದ ಕೇಳುವ ನವೆಂಬರ್ ತಿಂಗಳಲ್ಲಿಯೇ ಕನ್ನಡ ಕೆಡವುವ ಮಾತಾಗಿ ಕನ್ನಡ ವಿ.ವಿ. ಸ್ವಾಯತ್ತತೆ ಕಳೆದುಕೊಳ್ಳುವ ಆತಂಕದ ಚರ್ಚೆ ನಡೆಯಬೇಕಾಗಿದೆ. ಇದರ ಜೊತೆಗೆ ಕನ್ನಡ ವಿ.ವಿ. ಸ್ವಾಯತ್ತತೆಯು ಕಾಲದ ಅಗತ್ಯವೇ ಎನ್ನುವ ಪ್ರಶ್ನೆಯೂ ಎದುರು ನಿಲ್ಲುತ್ತದೆ.

‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ– 2017’ ಕಾಯ್ದೆಯಾಗಿ ಜಾರಿಯಾಗುವ ಹಂತದಲ್ಲಿದೆ. ಈ ಮಸೂದೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಆಳದಲ್ಲಿ ವಿಶ್ವವಿದ್ಯಾಲಯಗಳನ್ನು ಸರ್ವ ರೀತಿಯಲ್ಲಿಯೂ ನಿಯಂತ್ರಣದಲ್ಲಿಟ್ಟುಕೊಂಡು ವಿ.ವಿ.ಗಳ ಸ್ವಾಯತ್ತತೆಯನ್ನು ಮೊಟಕುಗೊಳಿಸುವ ಹುನ್ನಾರ ಗೋಚರಿಸುತ್ತದೆ. ಕನ್ನಡ ವಿಶ್ವವಿದ್ಯಾಲಯವನ್ನೂ ಈ ಮಸೂದೆಯಡಿ ಸೇರಿಸುವ ಮೂಲಕ ಇದಕ್ಕಿರುವ ವಿಶಿಷ್ಟ ಅಸ್ತಿತ್ವವನ್ನು ಅಳಿಸಿ ಹಾಕಲಾಗುತ್ತಿದೆ. ಇದು ನಿಜಕ್ಕೂ ಸರ್ಕಾರದ ಕನ್ನಡ ವಿರೋಧಿ ನಿಲುವಾಗಿದೆ.

ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಕನ್ನಡ ವಿಶ್ವವಿದ್ಯಾಲಯ ತಾನು ನಡೆದು ಬಂದ ಹಾದಿಯ ಪುನರ್‌ ಅವಲೋಕನ ನಡೆಸುತ್ತಿದೆ. ಅದೇ ಹೊತ್ತಿಗೆ ಸ್ವಾಯತ್ತತೆಯನ್ನು ಕಳೆದುಕೊಳ್ಳುವ ಆತಂಕವನ್ನೂ ಎದುರಿಸುತ್ತಿದೆ. ದೆಹಲಿಯ ಜೆ.ಎನ್‍.ಯು.ನ ಪ್ರೊ. ಜಾನಕಿ ನಾಯರ್, ಜೆ.ಎನ್‌.ಯು.ನಲ್ಲಿ ನಡೆದ ‘ನ್ಯಾಷನಲಿಸಂ’ ಸರಣಿ ಭಾಷಣಗಳ, ‘ವಾಟ್ ದ ನೇಷನ್ ರಿಯಲಿ ನೀಡ್ಸ್ ಟು ನೋ’ ಸಂಪಾದಿತ ಕೃತಿಯ ಪ್ರಸ್ತಾವನೆಯಲ್ಲಿ, ಜೆ.ಎನ್‌.ಯು.ವನ್ನು ಹೋಲುವ ದೇಶದ ಇತರ ವಿ.ವಿ.ಗಳ ಪಟ್ಟಿಯಲ್ಲಿ ಕನ್ನಡ ವಿ.ವಿ.ಯನ್ನು ಉಲ್ಲೇಖಿಸಿ ಜೆ.ಎನ್‌.ಯು. ಜೊತೆ ಸಮೀಕರಿಸಿದ್ದಾರೆ. ಈ ಬಗೆಯ ರಾಷ್ಟ್ರಮಟ್ಟದ ಗುರುತಿಸುವಿಕೆ ಸಾಧ್ಯವಾಗಲು ಕನ್ನಡ ವಿಶ್ವವಿದ್ಯಾಲಯಕ್ಕಿರುವ ಸ್ವಾಯತ್ತತೆ ಕಾರಣವಾಗಿದೆ.

ಕರ್ನಾಟಕ ಮತ್ತು ಕನ್ನಡ ಚಿಂತನೆಗಳ ದಿಕ್ಕನ್ನು ಬದಲಿಸಿದ ಹಲವು ಸಂಸ್ಥೆಗಳಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಿಶೇಷ ಸ್ಥಾನವಿದೆ. ತಿಳಿವಿನ ಕ್ರಮವನ್ನು ಪ್ರಭುತ್ವ ಕೇಂದ್ರದಿಂದ ಜನರೆಡೆಗೆ, ಮೇಲ್ಜಾತಿ– ಮೇಲ್ವರ್ಗದಿಂದ ಕೆಳಜಾತಿ–ಕೆಳವರ್ಗದೆಡೆಗೆ, ಪ್ರಬಲರಿಂದ ಅಲಕ್ಷಿತ ಮತ್ತು ದುರ್ಬಲರೆಡೆಗೆ, ಪುರುಷರಿಂದ ಸ್ತ್ರೀಚಿಂತನೆಯೆಡೆಗೆ, ಏಕತ್ವದಿಂದ ಬಹುತ್ವದೆಡೆಗೆ, ನಗರದಿಂದ ಗ್ರಾಮಜಗತ್ತಿನೆಡೆಗೆ, ಸಾಂಪ್ರದಾಯಿಕತೆಯಿಂದ ವೈಚಾರಿಕ ಆಧುನಿಕತೆಯೆಡೆಗೆ, ಉಳ್ಳವರ ಜ್ಞಾನಕೇಂದ್ರದಿಂದ ಜನಸಾಮಾನ್ಯರ ವಿವೇಕದೆಡೆಗೆ... ಹೀಗೆ ಹಲವು ನೆಲೆಗಳಲ್ಲಿ ಪ್ರತಿಸಂಸ್ಕೃತಿ ಕಟ್ಟಿಕೊಡುವ ಕನ್ನಡ ಚಿಂತನೆಯ ಕೇಂದ್ರಗಳನ್ನು ಈ ವಿ.ವಿ. ಪಲ್ಲಟಗೊಳಿಸಿದೆ. ಅದನ್ನು ಪ್ರಸಾರಾಂಗದ
ಬಹುಪಾಲು ಪ್ರಕಟಣೆಗಳು ಸಾಕ್ಷೀಕರಿಸುತ್ತವೆ. ಈ ಅರ್ಥದಲ್ಲಿ ಕನ್ನಡ ವಿಶ್ವವಿದ್ಯಾಲಯ ವಿಶಿಷ್ಟವಾದ ಆಲೋಚನಾ ಕ್ರಮವೊಂದನ್ನು ರೂಪಿಸಿಕೊಂಡಿದೆ.

ವೈಯಕ್ತಿಕ ನೆಲೆಯಲ್ಲಿ ಮಂಡನೆಯಾಗುತ್ತಿದ್ದ ವಿದ್ವಾಂಸರ ಪ್ರಖರ ಚಿಂತನೆಗಳನ್ನು, ವಿಶ್ವವಿದ್ಯಾಲಯಗಳ ಹೊರಗಿದ್ದ ಚಿಂತಕರನ್ನು ವಿ.ವಿ.ಯು ಒಳಗುಮಾಡಿಕೊಂಡು ಅವರ ಆಲೋಚನೆಗಳನ್ನು ಹೊರಜಗತ್ತಿಗೆ ನೀಡುತ್ತಿದೆ. ಇದು ವಿ.ವಿ.ಯಲ್ಲಿ ವಿಶಿಷ್ಟ ಚಿಂತನಾಕ್ರಮ ರೂಪುಗೊಳ್ಳಲು ಕಾರಣ. ಈ ಕ್ರಮವೇ ಕನ್ನಡ ವಿ.ವಿ.ಯನ್ನು ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿಸಿದೆ. ಇಂತಹದ್ದೊಂದು ನೆಲೆಯನ್ನು ಮೊದಲ ಕುಲಪತಿ ಚಂದ್ರಶೇಖರ ಕಂಬಾರರು ರೂಪಿಸಿದರು. ಹೊಸ ಆಲೋಚನೆಗಳಿಗೆ ಮುಕ್ತವಾಗಿ ತೆರೆದುಕೊಳ್ಳುವುದು ವಿಶ್ವವಿದ್ಯಾಲಯದ ಜೀವಂತಿಕೆಯ ಲಕ್ಷಣವಾಗಿದೆ. ಅಂತಹ ಜೀವಂತಿಕೆಯನ್ನು ಉಳಿಸಿಕೊಳ್ಳುವಂತಹ ಮುಕ್ತತೆಯನ್ನು ಕನ್ನಡ ವಿ.ವಿ.ಯ ಪ್ರತ್ಯೇಕ ಕಾಯ್ದೆ ಮಾತ್ರ ಒದಗಿಸಲು ಸಾಧ್ಯ.

ಕನ್ನಡ ವಿ.ವಿ. ತಾಂತ್ರಿಕ ಮತ್ತು ಪರಿಸರ ವಿಜ್ಞಾನದ ವಿಷಯಗಳನ್ನು ಮಾತ್ರ ಒಳಗೊಳ್ಳದೆ, ಸಮಾಜ ವಿಜ್ಞಾನ ಮತ್ತು ಮಾನವಿಕ ಶಿಸ್ತನ್ನೂ ಒಳಗೊಂಡಿದೆ. ಈ ಬಗೆಯ ಶಿಸ್ತುಗಳನ್ನು ಕಲಿಯಲು ಬರುವ ವಿದ್ಯಾರ್ಥಿ ಸಮುದಾಯದಲ್ಲಿ ಶೇ 90 ರಷ್ಟು ಗ್ರಾಮೀಣ, ದಲಿತ, ಮಹಿಳೆ, ಅಲಕ್ಷಿತ, ಬುಡಕಟ್ಟು, ಅಲ್ಪಸಂಖ್ಯಾತ ವರ್ಗದವರಿದ್ದಾರೆ. ಇವರೆಲ್ಲಾ ತಮ್ಮ ಬದುಕಿನ ಸಂಕಷ್ಟಗಳಿಂದಲೇ ಸಹಜವಾಗಿ ಜೀವಪರ ಆಲೋಚನೆಗೆ ತೆರೆದುಕೊಳ್ಳುವ ಸಿದ್ಧತೆಯಲ್ಲಿರುತ್ತಾರೆ. ಫೆಲೋಶಿಪ್ ಮೊದಲಾದ ಆಂತರಿಕ ಸೌಲಭ್ಯಗಳನ್ನು ಆಶ್ರಯಿಸಿ ಇವರು ವಿ.ವಿ.ಯ ಹಾಸ್ಟೆಲ್‌ ನಲ್ಲಿದ್ದು, ಓದು– ಸಂಶೋಧನೆ ಮುಂದುವರಿಸುತ್ತಾರೆ. ಈ ಬಗೆಯ ಆಂತರಿಕ ಸ್ವಾತಂತ್ರ್ಯ ಹೊಸ ಮಸೂದೆಯಿಂದ ಮೊಟಕುಗೊಳ್ಳುತ್ತದೆ.

ಬೆಳ್ಳಿಹಬ್ಬದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯ ಮತ್ತೊಮ್ಮೆ ಸಂಶೋಧನೆಗಳ ದೃಷ್ಟಿಕೋನ ಮತ್ತು ಅದು ಸೃಷ್ಟಿಸುತ್ತಿರುವ ಆಕರಗಳಲ್ಲಿ ದೊಡ್ಡ ಜಿಗಿತಕ್ಕೆ ಅಣಿಯಾಗಬೇಕಿದೆ. ಧಾರ್ಮಿಕ ಮತ್ತು ಆರ್ಥಿಕ ಮೂಲಭೂತವಾದ ಹೆಚ್ಚುತ್ತಿರುವ ಈ ಹೊತ್ತಲ್ಲಿ ಬಹುತ್ವದ ನೆಲೆಯ ಅಧ್ಯಯನ ಮತ್ತು ಆಕರಗಳ ಸೃಷ್ಟಿ ಮತ್ತಷ್ಟು ನಡೆಯಬೇಕಿದೆ. ಉದ್ಯಮಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳು ಸಂವಿಧಾನದ ಜೀವಪರತೆಯನ್ನು ದಮನಗೊಳಿಸುತ್ತಿರುವ ಕಾರಣ ಸಂವಿಧಾನದ ಆಶಯಗಳನ್ನು ಸಾಮಾನ್ಯ ಜನರಲ್ಲಿ ಗಟ್ಟಿಗೊಳಿಸುವ ನೆಲೆಯ ಸಂಶೋಧನೆಗಳು ಹೆಚ್ಚಬೇಕು. ಸತ್ಯವನ್ನು ಹೋಲುವ ಹಲವು ಬಗೆಯ ಸುಳ್ಳಿನ ಅವತರಿಣಿಕೆಗಳಿಂದ ಜನರನ್ನು ಮೋಸಗೊಳಿಸುತ್ತಿರುವ ಈ ಕಾಲವನ್ನು ‘ಪೋಸ್ಟ್ ಟ್ರೂಥ್ ಪಾಲಿಟಿಕ್ಸ್’ನ ಕಾಲ ಎನ್ನಲಾಗುತ್ತಿದೆ. ಕನ್ನಡದಲ್ಲಿ ಇದನ್ನು ‘ಸತ್ಯೋತ್ತರಕಾಲ’ ಎಂದು ಕರೆಯಲಾಗುತ್ತದೆ.

ಇಂಥ ಕಾಲದಲ್ಲಿ ಸಂಶೋಧನೆಯನ್ನೇ ಆದ್ಯತೆಯನ್ನಾಗಿಸಿಕೊಂಡ ಕನ್ನಡ ವಿಶ್ವವಿದ್ಯಾಲಯವು ಸುಳ್ಳುಗಳನ್ನು ಬಯಲುಗೊಳಿಸುವ ನಿಜದನೆಲೆಗೆ ಸಜ್ಜಾಗಬೇಕಿದೆ. ಜನಸಮುದಾಯಗಳಲ್ಲಿ ಧರ್ಮ, ಜಾತಿ, ವರ್ಗ ಮತ್ತು ಲಿಂಗದ ತರತಮ ರಹಿತ ಸ್ವಾವಲಂಬಿ ಬದುಕಿನ ಪರ್ಯಾಯಗಳನ್ನು ಪ್ರೇರೇಪಿಸುವ ಪ್ರಾಯೋಗಿಕ ಅಧ್ಯಯನಗಳು ಪ್ರಕಟವಾಗಬೇಕಿವೆ. ಜನಪರವಾದ ಹೋರಾಟ, ಚಳವಳಿಗಳಿಗೆ ಬೇಕಾದ ಅಗತ್ಯ ಆಕರಗಳನ್ನೂ ಸೃಷ್ಟಿಸಬೇಕಿದೆ. ದಮನಿತ ಜನಸಮುದಾಯಗಳನ್ನು ಕಾಲಕಾಲಕ್ಕೆ ಮರುಭೇಟಿ ಮಾಡಿ, ಅವುಗಳ ವರ್ತಮಾನದ ಬದುಕನ್ನು ದಾಖಲಿಸಿ, ಆಯಾ ಸಮುದಾಯಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರಕ್ಕೆ ನೆರವಾಗಬೇಕಿದೆ.

ಅಂತೆಯೇ ಪ್ರಭುತ್ವದ ಯೋಜನೆಗಳ ಯಶಸ್ಸು ಮತ್ತು ವೈಫಲ್ಯಗಳನ್ನು ಸಾರ್ವಜನಿಕಗೊಳಿಸುವ ಅಧ್ಯಯನಗಳೂ ನಡೆಯಬೇಕಿವೆ. ಈ ಹೊಣೆಗಾರಿಕೆಯು ವಿ.ವಿ.ಯ ಸ್ವಾಯತ್ತತೆಯಿಂದ ಮಾತ್ರ ಸಾಧ್ಯ. ಎಲ್ಲಾ ಜೀವಪರ ಚಟುವಟಿಕೆಗಳು ಅಕಾಡೆಮಿಕ್ ಮತ್ತು ಆಡಳಿತಾತ್ಮಕ ಸಂಗತಿಗಳಲ್ಲಿ ಪ್ರಭುತ್ವದ ಹಿಡಿತವಿಲ್ಲದೆ ಮುಕ್ತತೆ ಇದ್ದಾಗ ಮಾತ್ರ ನಡೆಸಲು ಸಾಧ್ಯ.

ಹಾಗಾಗಿ ಇದಕ್ಕೆ ಕುಲಪತಿಗಳ ಜೊತೆ ಜೀವಪರ ಚಿಂತಕರ ಮತ್ತು ಕನ್ನಡ ವಿ.ವಿ.ಯ ಎಲ್ಲರ ನಿರಂತರ ಕೂಡುಕೆಲಸ ಮತ್ತು ಅಖಂಡ ಬದ್ಧತೆಯೂ ಬೇಕಾಗಿದೆ. ಕನ್ನಡ ವಿ.ವಿ.ಯ ಸ್ವಾಯತ್ತತೆಯ ಅಗತ್ಯ, ಇಂದು ಕಾಲದ ಅಗತ್ಯವೂ ಆಗಿದೆ.

***

ವಿಳಾಸ:ಪೋಸ್ಟ್ ಡಾಕ್ಟರಲ್ ಫೆಲೋ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ವಿದ್ಯಾರಣ್ಯ-583276

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT