ಸೋಮವಾರ, ಮಾರ್ಚ್ 1, 2021
24 °C

ಆಮೆಗತಿಯಲ್ಲಿ ಸಾಗಿದ ಕೆಶಿಪ್‌ ರಸ್ತೆ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಮೆಗತಿಯಲ್ಲಿ ಸಾಗಿದ ಕೆಶಿಪ್‌ ರಸ್ತೆ ಕಾಮಗಾರಿ

ಬಾದಾಮಿ: ಕೆಶಿಪ್‌ ಯೋಜನೆಯಲ್ಲಿ ಪಟ್ಟಣದಲ್ಲಿ ವರ್ಷದಿಂದ ಆರಂಭವಾಗಿರುವ ರಸ್ತೆ ಪಕ್ಕದ ಚರಂಡಿ ಕಾಮಗಾರಿ ಇನ್ನೂ  ಆಮೆಗತಿಯಲ್ಲಿ ಸಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಟ್ಟಣದ ಕುಳಗೇರಿ ರಸ್ತೆಯ ನೀರಾವರಿ ಇಲಾಖೆಯಿಂದ ರೈಲ್ವೆ ನಿಲ್ದಾಣ ರಸ್ತೆಯ ಪೆಟ್ರೋಲ್‌ ಬಂಕ್‌ ವರೆಗಿನ ಒಂದು ಕಿ.ಮೀ ಚರಂಡಿ ಕಾಮಗಾರಿ ಆರಂಭವಾಗಿದ್ದು, ವರ್ಷ ಕಳೆದರೂ ಮುಗಿಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ.

ಕುಳಗೇರಿ ರಸ್ತೆಯ ನೀರಾವರಿ ಇಲಾಖೆಯಿಂದ ವೀರಪುಲಿಕೇಶಿ ವೃತ್ತದ ವರೆಗೆ ಮತ್ತು ರೈಲ್ವೆ ನಿಲ್ದಾಣ ರಸ್ತೆಯ ಪೆಟ್ರೋಲ್‌ ಬಂಕ್‌ನಿಂದ ಟಾಂಗಾ ನಿಲ್ದಾಣದ ವರೆಗೆ ಚರಂಡಿ ಕಾಮಗಾರಿ ಮುಗಿದಿದೆ. ಟಾಂಗಾ ನಿಲ್ದಾಣದಿಂದ ವೀರಪುಲಿಕೇಶಿ ವೃತ್ತದವರೆಗೆ ಚರಂಡಿ ಕಾಮಗಾರಿ ಮಾಡಬೇಕಿದೆ. ಆದರೆ ಇಲ್ಲಿ ಇನ್ನೂ ಕೆಲವು ಕಟ್ಟಡಗಳ ತೆರವು ಕಾರ್ಯಾಚರಣೆ ಮಾಡಿದ ನಂತರ ಚರಂಡಿ ನಿರ್ಮಿಸಬೇಕು. ಹಾಗಾಗಿ ಇಲ್ಲಿ ಕಾಮಗಾರಿ ಸ್ಥಗಿತವಾಗಿದೆ.

ರಸ್ತೆಯನ್ನು ಅಗೆದ ಕಾರಣ ವಾಹನಗಳು ತಗ್ಗು ಗುಂಡಿಯಲ್ಲಿ ಸಂಚರಿಸಬೇಕು. ಅನೇಕ ವಾಹನಗಳು ಅಪಘಾತವಾಗಿವೆ. ಹಗಲು ಕಾಮಗಾರಿ ಜೊತೆಗೆ ರಾತ್ರಿ ಸಮಯದಲ್ಲಿಯೂ ಕಾಮಗಾರಿ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಕೇವಲ ಹಗಲು ಹೊತ್ತಿನಲ್ಲಿ ಕಾಮಗಾರಿ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಜನರಿಗೆ ತೀವ್ರ ತೊಂದರೆಯಾಗಿದೆ. ನಿತ್ಯ ವಾಹನ ದಟ್ಟಣೆ ಕಿರಿಕಿರಿ. ಪಟ್ಟಣದಲ್ಲಿ ನಡೆಯುವ ಜಯಂತಿ ಮೆರವಣಿಯಲ್ಲಿ ಗಂಟೆಗಟ್ಟಲೇ ವಾಹನ ನಿಲ್ಲುತ್ತವೆ. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ.

ಕಳೆದ ಮಾರ್ಚ್‌ನಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಮೇ ಒಳಗಾಗಿ ಕಾಮಗಾರಿ ಮುಗಿಸುವುದಾಗಿ ಕೆಶಿಪ್ ಅಧಿಕಾರಿಗಳು ಶಾಸಕರಿಗೆ ತಿಳಿಸಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಸಂಸದರು , ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಸಭೆಯಲ್ಲಿ ಅಕ್ಟೋಬರ್‌ ಒಳಗಾಗಿ ಕಾಮಗಾರಿ ಮುಗಿಯುತ್ತದೆ ಎಂದು ಹೇಳಿದ್ದರು. ಆದರೆ ಇನ್ನೂ ರೈಲ್ವೆ ನಿಲ್ದಾಣ ರಸ್ತೆಯ ಕೋಣಮ್ಮ ದೇಗುಲದಿಂದ ರಸ್ತೆ ಮತ್ತು ಸಿಡಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದೆ ಎನ್ನುತ್ತಾರೆ ಸ್ಥಳೀಯರು.

‘ಜನವರಿಯಲ್ಲಿ ಬನಶಂಕರಿದೇವಿ ಜಾತ್ರೆ ಇದೆ. ಉತ್ತರ ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಾತ್ರೆಯಾಗಿದೆ. ನಿತ್ಯ ಸಾವಿರಾರು ವಾಹನಗಳು ಜಾತ್ರೆಗೆ ಬರುತ್ತವೆ. ಚರಂಡಿ ಮತ್ತು ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಬೇಕು’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್‌.ವಾಸನ ಕೆಶಿಪ್‌ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

‘ಅಕ್ಟೋಬರ್‌ ತಿಂಗಳಲ್ಲಿಯೇ ರಸ್ತೆ ಕಾಮಗಾರಿ ಮುಗಿಯುತ್ತಿತ್ತು. ಆದರೆ ಚರಂಡಿ ಕಾಮಗಾರಿ ಇರುವುದರಿಂದ ತಡವಾಗಿದೆ. ಟಾಂಗಾ ನಿಲ್ದಾಣದಿಂದ ವೀರಪುಲಿಕೇಶಿ ವೃತ್ತದ ವರೆಗೆ ಚರಂಡಿ ಕಾಮಗಾರಿ ಆರಂಭಿಸಲಾಗುವುದು. ಡಿಸೆಂಬರ್ 15ರೊಳಗಾಗಿ ಕಾಮಗಾರಿ ಮುಗಿಸಲು ತಿಳಿಸಲಾಗಿದೆ ಎಂದು ಕೆಶಿಪ್‌ ಎಂಜಿನಿಯರ್‌ ಎಸ್‌.ಸಿ. ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.