ಶನಿವಾರ, ಫೆಬ್ರವರಿ 27, 2021
28 °C

ಆಸ್ಪತ್ರೆ ಆವರಣದಲ್ಲಿ ತುಂಬಿ ಹರಿಯುತ್ತಿರುವ ಶೌಚಗುಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಪತ್ರೆ ಆವರಣದಲ್ಲಿ ತುಂಬಿ ಹರಿಯುತ್ತಿರುವ ಶೌಚಗುಂಡಿ

ಗುಡಿಬಂಡೆ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶೌಚಗುಂಡಿ ತುಂಬಿ ಹರಿದು, ದುರ್ನಾತ ಬೀರುತ್ತಿದೆ. ವಾಸನೆ ತಡೆಯಲಾರದೇ ರೋಗಿಗಳು, ವಸತಿಗೃಹದಲ್ಲಿರುವ ಸಿಬ್ಬಂದಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಶೌಚ ಗುಂಡಿ ತುಂಬಿ ಎರಡು ವಾರ ಕಳೆದಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಅವರು ಅದು ತಮಗೆ ಸಂಬಂಧ ಇಲ್ಲ ಎನ್ನುವಂತೆ ಮೌನವಾಗಿದ್ದಾರೆ. ಆಸ್ಪತ್ರೆಗೆ ಪ್ರತಿ ದಿನ ಸುಮಾರು 500ಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಾರೆ. 100ಕ್ಕೂ ಹೆಚ್ಚು ಒಳರೋಗಿಗಳು ದಾಖಲಾಗಿರುತ್ತಾರೆ. ಈ ಸಮಸ್ಯೆಯಿಂದಾಗಿ ಮಹಿಳೆಯರು, ಆಸ್ಪತ್ರೆ ಸಿಬ್ಬಂದಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

‘ತುಂಬಿದ ಶೌಚಗುಂಡಿಯ ರಸ್ತೆ ಪಕ್ಕದಲ್ಲೇ ಇದೆ. ಹೀಗಾಗಿ ಅದರ ವಾಸನೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡುವಂತೆ ಮಾಡಿದೆ. ಸೊಳ್ಳೆ ಕಾಟ ಮಿತಿ ಮೀರಿದೆ. ನಮಗಂತೂ ರೋಗ ಭೀತಿ ಕಾಡುತ್ತಿದೆ’ ಎಂದು ವಸತಿ ಗೃಹದಲ್ಲಿರುವ ಕುಮಾರಿ ಅವರು ಬೇಸರ ವ್ಯಕ್ತಪಡಿಸಿದರು.

‘ಆರೋಗ್ಯ ಜಾಗೃತಿ ಮೂಡಿಸುವ ಆರೋಗ್ಯ ಇಲಾಖೆಯಲ್ಲಿಯೇ ಆಸ್ಪತ್ರೆ ಆವರಣದಲ್ಲಿಯೇ ಸ್ವಚ್ಛತೆ ಮರೀಚಿಕೆಯಾಗಿದೆ. ರಸ್ತೆ ಮೇಲೆ ಹರಿಯುವ ಗಲೀಜು ನೀರಿನಲ್ಲಿ ನಡೆದುಕೊಂಡು ಸಾರ್ವಜನಿಕರು ಆಸ್ಪತ್ರೆಯೊಳಗೆ ಹೋಗುವ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಸ್ಥಳೀಯರಾದ ಅಶ್ವದಳ ವೆಂಕಟೇಶ್ ದೂರಿದರು.

‘ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಶೌಚಗುಂಡಿ ಸ್ವಚ್ಛಗೊಳಿಸುವಂತೆ ಈಗಾಗಲೇ ಪಟ್ಟಣ ಪಂಚಾಯಿತಿಗೆ ತಿಳಿಸಿದ್ದೇವೆ. ಅವರು ಶೌಚಗುಂಡಿ ಸ್ವಚ್ಛಗೊಳಿಸುವ ಯಂತ್ರ ಕೆಟ್ಟಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಆ ಯಂತ್ರ ರಿಪೇರಿಯಾಗುವರೆಗೂ ನಾವು ಏನು ಮಾಡಲು ಆಗುವುದಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯಕುಮಾರಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.