ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಪರ್ ಸ್ಟಾರ್’ ಅಂತರಂಗ

Last Updated 10 ನವೆಂಬರ್ 2017, 19:30 IST
ಅಕ್ಷರ ಗಾತ್ರ

* ‘ದಂಗಲ್’, ‘ಸೀಕ್ರೆಟ್ ಸೂಪರ್ ಸ್ಟಾರ್’ ಎರಡರಲ್ಲಿ ಹೆಚ್ಚು ಇಷ್ಟವಾದ ಸಿನಿಮಾ ಯಾವುದು? ಏಕೆ?

‘ದಂಗಲ್’ ಮೊದಲ ಸಿನಿಮಾವಾದ್ದರಿಂದ ಅದರ ಮೇಲೆ ಪ್ರೀತಿ ಇದ್ದೇ ಇದೆ. ಎರಡರಲ್ಲಿ ನನಗೆ ಬಹಳ ಇಷ್ಟವಾದದ್ದು ‘ಸೀಕ್ರೆಟ್ ಸೂಪರ್ ಸ್ಟಾರ್’. ಇದಕ್ಕೆ ಬಹಳಷ್ಟು ಕಾರಣಗಳಿವೆ. ಮೊದಲನೆಯದಾಗಿ ಈ ಚಿತ್ರದ ಕಥೆಯೇ ತುಂಬಾ ಸುಂದರವಾಗಿದೆ. ಎಷ್ಟೊಂದು ಅದ್ಭುತ ಪಾತ್ರಗಳಿವೆ ಈ ಸಿನಿಮಾದಲ್ಲಿ. ನನ್ನಲ್ಲಿರುವ ನಟಿಯನ್ನು ಒರೆಹಚ್ಚಿದ ಸಿನಿಮಾವಿದು ಎಂದು ಹೇಳಬಹುದು. ಬೇರೆಬೇರೆ ಭಾವನೆಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಯಿತು. ಈ ಸಿನಿಮಾದಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅನುಭವಿಸಿ, ಅದ್ಭುತವಾಗಿ ನಟಿಸಿದ್ದಾರೆ. ಹಾಗಾಗಿ, ‘ಸೀಕ್ರೆಟ್‌ ಸೂಪರ್ ಸ್ಟಾರ್’ ಸಿನಿಮಾ ನನ್ನ ನೆಚ್ಚಿನ ಸಿನಿಮಾ.

* ಓದು ಮತ್ತು ಶೂಟಿಂಗ್ ಎರಡನ್ನೂ ಹೇಗೆ ನಿರ್ವಹಿಸುತ್ತೀರಿ?

ನನ್ನ ಸಹಪಾಠಿಗಳು ಮತ್ತು ಪೋಷಕರು ಈ ವಿಷಯದಲ್ಲಿ ನನಗೆ ತುಂಬಾ ಸಹಾಯ ಮಾಡುತ್ತಾರೆ. ಈ ವಿಚಾರದಲ್ಲಿ ನಾನು ನಿಜಕ್ಕೂ ಅದೃಷ್ವವಂತೆ. ಓದು– ನಟನೆ ಎರಡನ್ನೂ ಸುಲಭವಾಗಿ ನಿರ್ವಹಣೆ ಮಾಡುತ್ತಿರುವೆ.

* ದೊಡ್ಡವಳಾದ ಮೇಲೆ ಏನು ಆಗಬೇಕು ಅಂದುಕೊಂಡಿದ್ದೀರಿ?

ಸದ್ಯಕ್ಕಂತೂ ನನಗೆ ಗೊತ್ತಾಗುತ್ತಿಲ್ಲ. ಇನ್ನೂ ಸ್ವಲ್ಪ ದೊಡ್ಡವಳಾದ ಮೇಲೆಯೇ ಗೊತ್ತಾಗುತ್ತೆ. ಎಲ್ಲಕ್ಕಿಂತ ಮೊದಲು ನಾನು ಒಬ್ಬ ಒಳ್ಳೆಯ ಮನುಷ್ಯಳಾಗಬೇಕೆಂದು ಅಂದುಕೊಂಡಿದ್ದೇನೆ. ತುಂಬಾ ಚಿಕ್ಕವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಬಂದಿರುವೆ. ಹಾಗಾಗಿ, ನನಗೆ ಯಾವುದು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಗೊಂದಲವಿದೆ. ನಟನೆ, ಓದು ಹೀಗೆ ನನ್ನ ಆಯ್ಕೆ ಯಾವುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

* ನಿಜ ಜೀವನದಲ್ಲಿ ನಿಮ್ಮ ಅಪ್ಪ ಹೇಗಿದ್ದಾರೆ?

‘ದಂಗಲ್‌’, ‘ಸೀಕ್ರೆಟ್ ಸೂಪರ್ ಸ್ಟಾರ್’ ಸಿನಿಮಾಗಳಲ್ಲಿರುವ ಅಪ್ಪನಿಗಿಂತ ನನ್ನ ನಿಜಜೀವನದ ಅಪ್ಪ ತುಂಬಾ ಭಿನ್ನವಾಗಿದ್ದಾರೆ. ರೀಲ್ ಲೈಫ್‌ಗಿಂತ ರಿಯಲ್ ಲೈಫ್‌ನ ಅಪ್ಪ ಚೆನ್ನಾಗಿದ್ಧಾರೆ. ನನ್ನಪ್ಪ ನನ್ನ ಬಗ್ಗೆ ತುಂಬಾ ಪೊಸೆಸಿವ್ ಆಗಿದ್ದಾರೆ. ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ನನ್ನ ಪಾಲಿಗೆ ಅವರೇ ಹೀರೊ.

**

ನಟನೆಗೆ ಒಪ್ಪಿಗೆ ಸಿಕ್ಕಿರಲಿಲ್ಲ!

ಝೈರಾ ವಾಸಿಂ ನಿಜಜೀವನದ ಕಥೆ ಯಾವ ಸಿನಿಮಾ ಕಥೆಗಿಂತಲೂ ಕಮ್ಮಿ ಇಲ್ಲ. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಝೈರಾಗೆ ಆರಂಭದ ಹಂತದಲ್ಲಿ ನಟಿಸಲು ಪೋಷಕರಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಆಗ ಝೈರಾ ಓದುತ್ತಿದ್ದ ಶಾಲೆಯ ಪ್ರಾಂಶುಪಾಲರು ಪೋಷಕರನ್ನು ಕರೆದು ಮನವೊಲಿಸಿದ್ದರು. ಆಗ ಝೈರಾ ಮೊದಲ ಬಾರಿಗೆ ಮೈಕ್ರೋಸಾಫ್ಟ್ ಲೂಮಿಯಾ ಮತ್ತು ಟಾಟಾ ಸ್ಕೈ ಜಾಹೀರಾತುಗಳಲ್ಲಿ ನಟಿಸಿದರು. ಮೈಕ್ರೋಸಾಫ್ಟ್ ಲೂಮಿಯಾದ ಜಾಹೀರಾತು ಕೂಡಾ ಝೈರಾ ಜೀವನದ ಘಟನೆಯನ್ನೇ ಹೋಲುವಂತೆ ರೂಪಿಸಲಾಗಿದೆ.

‘ದಂಗಲ್’ ಸಿನಿಮಾದಲ್ಲಿ ಕುಸ್ತಿಪಟು ಗೀತಾ ಪೋಗಟ್ ಅವರ ಬಾಲ್ಯದ ಪಾತ್ರಕ್ಕೆ ಝೈರಾ ಆಯ್ಕೆಯಾದರು. ಮೊದಲ ಚಿತ್ರದಲ್ಲೇ ಅಮೀರ್ ಖಾನ್ ಜತೆ ಅಭಿನಯಿಸುವ ಅವಕಾಶ ಪಡೆದ ಝೈರಾ ಆ ಚಿತ್ರಕ್ಕಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೂ ಭಾಜನರಾದರು. ಎರಡನೇ ಸಿನಿಮಾ ‘ಸೀಕ್ರೆಟ್ ಸೂಪರ್ ಸ್ಟಾರ್’ ಸಿನಿಮಾದಲ್ಲಿ ಮುಸ್ಲಿಂ ಮಹಿಳೆಯರ ತಲ್ಲಣಗಳನ್ನು ತಮ್ಮ ಭಾವಾಭಿನಯದ ಮೂಲಕ ಯಶಸ್ವಿಯಾಗಿ ಬಿಂಬಿಸಿರುವ ಝೈರಾ ನಟನೆಯಲ್ಲಿ ಅಮೀರ್‌ಗಿಂತಲೂ ಮೈಲುಗೈ ಸಾಧಿಸಿದ್ದಾರೆ ಎಂದು ಸಿನಿ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದಾರೆ.

ವಿವಾದ: ‘ದಂಗಲ್’ ಸಿನಿಮಾದ ಗೀತಾ ಪೋಗಟ್ ಪಾತ್ರಕ್ಕಾಗಿ ಝೈರಾ ಚಿಕ್ಕದಾಗಿ ಕೂದಲು ಕತ್ತರಿಸಿಕೊಂಡಾಗ, ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಬುರ್ಖಾ ತೊಟ್ಟಿಲ್ಲ ಎಂಬ ಕಾರಣಕ್ಕಾಗಿ ಮುಸ್ಲಿಂ ಮೂಲಭೂತವಾದಿಗಳ ಕೆಂಗೆಣ್ಣಿಗೆ ಗುರಿಯಾಗಬೇಕಾಯಿತು. ಝೈರಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳ ಸುರಿಮಳೆಯೂ ಆಯಿತು. ಇದರಿಂದ ಬೇಸತ್ತ ಝೈರಾ ತನ್ನ ಫೇಸ್‌ಬುಕ್ ಮತ್ತು  ಇನ್‌ಸ್ಟಾಗ್ರಾಂ ಖಾತೆಯನ್ನು ಬಂದ್ ಮಾಡಿದ್ದರು. ಆ ಸಂದರ್ಭದಲ್ಲಿ ಬಾಲಿವುಡ್‌ನ ಖ್ಯಾತನಾಮರು ಝೈರಾಗೆ ಬೆಂಬಲ ಸೂಚಿಸಿದ್ದರು.

**

ಝೈರಾ ಬಗ್ಗೆ ಒಂದಿಷ್ಟು...

* ಹುಟ್ಟಿದ್ದು: ಶ್ರೀನಗರ (ಕಾಶ್ಮೀರ), ಅಕ್ಟೋಬರ್ 23, 2000
* ಕುಟುಂಬ: ಅಪ್ಪ ಜಾಹೀದ್ ವಾಸಿಂ ಶ್ರೀನಗರದ ಬ್ಯಾಂಕೊಂದರಲ್ಲಿ ಕಾರ್ಯನಿರ್ವಾಹಕ ವ್ಯವಸ್ಥಾಪಕ, ಅಮ್ಮ ಝರ್ಖಾ ವಾಸಿಂ ಶಾಲಾ ಶಿಕ್ಷಕಿ, ಸಹೋದರ ಝೋರೈಸ್ ವಾಸಿಂ
* ಶಿಕ್ಷಣ: ಝೈರಾ ಸಿನಿಮಾವಷ್ಟೇ ಅಲ್ಲ ಓದಿನಲ್ಲೂ ಮುಂದು (10ನೇ ತರಗತಿಯಲ್ಲಿ ಶೇ 92 ಅಂಕ ಪಡೆದಿದ್ದಾರೆ)
* ಇಷ್ಟದ ಬಣ್ಣ, ಪ್ರಾಣಿ: ಕಪ್ಪು, ಬೆಕ್ಕು
* ಹವ್ಯಾಸ: ಸ್ನೇಹಿತರೊಂದಿಗೆ ಸುತ್ತಾಟ, ಓದುವುದು, ಸಂಗೀತ ಕೇಳುವುದು, ನಿದ್ದೆ ಮಾಡುವುದು
* ಇಷ್ಟದ ಗಾಯಕ: ಈದ್ ಶೀರನ್‌
* ಝೈರಾ ನಟಿಯಷ್ಟೇ ಅಲ್ಲ ಉತ್ತಮವಾಗಿ ಗಿಟಾರ್ ಅನ್ನೂ ನುಡಿಸಬಲ್ಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT