ಗುರುವಾರ , ಮಾರ್ಚ್ 4, 2021
18 °C

ರಜೆಗಳ ಉಬ್ಬರ ಪ್ರಗತಿಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಜೆಗಳ ಉಬ್ಬರ ಪ್ರಗತಿಗೆ ಹಿನ್ನಡೆ

ಕರ್ನಾಟಕ ಸರ್ಕಾರ ಪ್ರಕಟಿಸಿರುವ 2018ರ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿ ಅಭಿವೃದ್ಧಿಗೆ ಮಾರಕವಾಗಿದ್ದು, ಕೆಲಸದ ಸಂಸ್ಕೃತಿಯ ಸ್ಪಷ್ಟ ಪರಿಕಲ್ಪನೆ ನಮ್ಮ ವ್ಯವಸ್ಥೆಗೆ ಇಲ್ಲದಿರುವುದನ್ನು ಸೂಚಿಸುವಂತಿದೆ. 23 ಸಾರ್ವತ್ರಿಕ ರಜೆಗಳ ಜೊತೆಗೆ, 52 ಭಾನುವಾರ ಹಾಗೂ ಎರಡನೇ ಶನಿವಾರದ 12 ರಜೆಗಳು ಸೇರಿದಂತೆ ವರ್ಷದಲ್ಲಿ 87 ದಿನ ಸರ್ಕಾರಿ ಕಚೇರಿಗಳು ಬಾಗಿಲು ಮುಚ್ಚುವುದನ್ನು ಯಾವ ಪ್ರಜ್ಞಾವಂತ ಸಮಾಜವೂ ಸಮರ್ಥಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಈ ರಜೆಗಳ ಜೊತೆಗೆ ಸಾಂದರ್ಭಿಕ ರಜೆ, ಗಳಿಕೆ ರಜೆ, ನಿರ್ಬಂಧಿತ ರಜೆ ಇತ್ಯಾದಿಗಳು ಸೇರಿಕೊಳ್ಳುವ ಮೂಲಕ ನೌಕರನೊಬ್ಬ ವರ್ಷದಲ್ಲಿ ನೂರಕ್ಕೂ ಹೆಚ್ಚು ದಿನಗಳ ಕಾಲ ಕಚೇರಿಯಿಂದ ದೂರವೇ ಉಳಿಯುತ್ತಾನೆ. ‘ಸರ್ಕಾರಿ ಕೆಲಸ ದೇವರ ಕೆಲಸ’ ಎನ್ನುವುದು ವಿಧಾನಸೌಧದಲ್ಲಿನ ಘೋಷವಾಕ್ಯ. ಆದರೆ, ಅಲ್ಲಿ ನಡೆಯುವ ಕೆಲಸಗಳು ಹಾಗೂ ಅಲ್ಲಿಂದ ಹೊರಬೀಳುವ ಆದೇಶಗಳು ಮಾತ್ರ ‘ದೇವರ ಕೆಲಸ’ ಎನ್ನುವ ಆದರ್ಶದಿಂದ ದೂರವೇ ಉಳಿಯುವಂತಿವೆ.ಸರ್ಕಾರಿ ಕಚೇರಿಗಳಲ್ಲಿನ ಕೆಲಸಗಳು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಗುಟ್ಟು. ಕೆಲಸದ ವೇಳೆಯಲ್ಲಿ ನೌಕರರು ತಮ್ಮ ಕುರ್ಚಿಗಳಲ್ಲಿ ಕೂರುವುದಕ್ಕಿಂತಲೂ ಕಾಫಿ-ಊಟಕ್ಕೆ ಹೋಗುವ ಸಮಯ ಹೆಚ್ಚಾಗಿದ್ದರೆ ಅದು ಅಸಹಜವೇನೂ ಅಲ್ಲ ಎಂದು ಭಾವಿಸುವ ಸ್ಥಿತಿ ಅನೇಕ ಕಚೇರಿಗಳಲ್ಲಿದೆ. ಮೀಟಿಂಗ್‍ಗಳ ಹೆಸರಲ್ಲಿ ಜನಸಾಮಾನ್ಯರಿಂದ ಅಂತರ ಕಾಪಾಡಿಕೊಳ್ಳುವ ಅಧಿಕಾರಿಗಳ ಸಂಖ್ಯೆಯೂ ದೊಡ್ಡದಿದೆ. ಯಾವ ಸರ್ಕಾರ ಬಂದರೂ ಚುರುಕಾಗದಷ್ಟರ ಮಟ್ಟಿಗೆ ಆಡಳಿತಯಂತ್ರ ಜಡಗಟ್ಟಿದೆ. ಈ ದಡ್ಡುಗಟ್ಟುವಿಕೆಗೆ ರಜೆಗಳ ಉಬ್ಬರ ಕೂಡ ಕಾರಣವಾಗಿದೆ. ವ್ಯವಸ್ಥೆಗೆ ಚುರುಕು ಮುಟ್ಟಿಸುವುದಾಗಿ ಹೇಳುವ ಸರ್ಕಾರದ ಹೇಳಿಕೆಗಳು ಬಾಯಿಮಾತಿನ ಶೌರ್ಯದ ರೂಪದಲ್ಲಿ ಕೊನೆಗೊಂಡಿರುವುದೇ ಹೆಚ್ಚು. ಸರ್ಕಾರಿ ಕಚೇರಿಗಳಿಗೆ ಅಲೆದು ಬೇಸತ್ತಿರುವ ಹಾಗೂ ತಮ್ಮ ಕೆಲಸಗಳು ಆಗುತ್ತಿಲ್ಲ ಎಂದು ಅಲವತ್ತುಕೊಳ್ಳುವ ಜನಸಾಮಾನ್ಯರ ಧ್ವನಿಗೆ ಯಾವ ಕಿಮ್ಮತ್ತೂ ಇಲ್ಲ.

ಸರ್ಕಾರಿ ನೌಕರರಿಗೆ ಹೆಚ್ಚಿನ ರಜೆ ದೊರಕುವ ಬಗ್ಗೆ ತಕರಾರುಗಳಿಲ್ಲ. ನೌಕರರ ದಕ್ಷತೆ ಹೆಚ್ಚಲಿಕ್ಕೆ ಕಾಲಕಾಲಕ್ಕೆ ಬಿಡುವು ಅಗತ್ಯ. ಆದರೆ, ಈಗಿನ ರಜೆ ದಿನಗಳನ್ನು ನೋಡಿದರೆ ಕೆಲಸಕ್ಕಿಂತಲೂ ಬಿಡುವಿಗೇ ಹೆಚ್ಚು ಆದ್ಯತೆ ಎನ್ನುವಂತಾಗಿದೆ. ಅನುತ್ಪಾದಕ ದಿನಗಳ ಸಂಖ್ಯೆ ಹೆಚ್ಚುವುದು ಇಡೀ ಆರ್ಥಿಕ ವ್ಯವಸ್ಥೆಗೆ ಪೆಟ್ಟು ನೀಡಿದಂತೆ. ಇದರ ನೇರ ಹೊಡೆತ ಬೀಳುವುದು ಜನಸಾಮಾನ್ಯರ ಬದುಕಿನ ಮೇಲೆ. ಅಧಿಕಾರಿಗಳು ರಜೆ ಅನುಭವಿಸುತ್ತ ಊರೂರು ತಿರುಗುತ್ತಿದ್ದರೆ, ಅಭಿವೃದ್ಧಿ ಚಟುವಟಿಕೆಗಳ ಗತಿಯೇನಾಗಬೇಕು? ಇತ್ತೀಚಿನ ವರ್ಷಗಳಲ್ಲಿ ಹೊಸ ಹೊಸ ಜಯಂತಿಗಳು ಸರ್ಕಾರಿ ರಜೆಗಳ ಪಟ್ಟಿಯಲ್ಲಿ ಸೇರಿಕೊಳ‍್ಳುತ್ತಿವೆ. ಈ ಜಯಂತಿಗಳ ಹಿಂದೆ ಹಿರಿಯ ಚೇತನಗಳನ್ನು ಗೌರವಿಸುವುದಕ್ಕಿಂತಲೂ ಸಮುದಾಯಗಳನ್ನು ಓಲೈಸುವ ರಾಜಕಾರಣವೇ ಹೆಚ್ಚಾಗಿದೆ. ಜನಮಾನಸದಲ್ಲಿ ಉಳಿದಿರುವ ಚೇತನಗಳನ್ನು ಜಯಂತಿ ಆಚರಿಸುವ ಮೂಲಕ ನೆನಪಿಸಿಕೊಳ್ಳುವುದು ತಪ್ಪೇನೂ ಅಲ್ಲ.ಇಂಥ ಆಚರಣೆಗಳು ನಿರ್ಲಕ್ಷಿತ ಹಾಗೂ ಸಣ್ಣ ಸಮುದಾಯಗಳಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನಗಳೂ ಹೌದು. ಸಮಸ್ಯೆ ಇರುವುದು ಆಚರಣೆಯನ್ನು ರಜಾ ರೂಪದಲ್ಲಿ ಗೌಣಗೊಳಿಸುತ್ತಿರುವುದರ ಬಗ್ಗೆ. ಹಿರಿಯರನ್ನು ನೆನಪಿಸಿಕೊಳ್ಳುವ ಅತ್ಯುತ್ತಮ ವಿಧಾನ ಅವರ ಆಶಯಗಳನ್ನು ಕಾರ್ಯಗತಗೊಳಿಸುವ ಪ್ರಯತ್ನವೇ ಹೊರತು ರಜೆ ನೀಡುವುದಲ್ಲ. ಹೀಗೆ ರಜೆ ನೀಡುವುದು ಆಯಾ ಮಹಾತ್ಮರ ಆಶಯಗಳನ್ನು ಅಗೌರವಿಸಿದಂತೆ ಎನ್ನುವುದನ್ನು ಜಯಂತಿ ಹೆಸರಿಗೆ ರಜೆ ಹಚ್ಚುವವರು ತಿಳಿದುಕೊಳ್ಳಬೇಕಿದೆ. ರಜಾದಿನಗಳನ್ನು ನಿರ್ಣಯಿಸುವ ನಿಟ್ಟಿನಲ್ಲಿ ಸರ್ಕಾರ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸುವುದು ಅಗತ್ಯ. ಮಹಾತ್ಮರು, ದಾರ್ಶನಿಕರ ಹೆಸರಿನಲ್ಲಿ ಆಚರಿಸುವ ಜಯಂತಿಗಳಿಗೆ ತಳಕು ಹಾಕಿಕೊಂಡಿರುವ ರಜೆಯ ಕಳಂಕವನ್ನು ಸರ್ಕಾರ ತೊಡೆದುಹಾಕುವ ಮೂಲಕ ‘ಕೆಲಸದ ಸಂಸ್ಕೃತಿ’ಗೆ ಒತ್ತುನೀಡಬೇಕಿದೆ. ಕಾರ್ಪೊರೇಟ್‍ ಸಂಸ್ಥೆಗಳಲ್ಲಿನ ಕೆಲಸದ ಶಿಸ್ತು ಸರ್ಕಾರಿ ಕಚೇರಿಗಳಲ್ಲೂ ಅಪೇಕ್ಷಣೀಯ. ರಜೆಗಳನ್ನು ಅಗತ್ಯದ ರೂಪಕ್ಕೆ ಬದಲಾಗಿ ಹಕ್ಕಿನ ರೀತಿಯಲ್ಲಿ ಭಾವಿಸುವವರ ಸಂಖ್ಯೆ ದೊಡ್ಡದಿದೆ. ಇಂಥ ಮನೋಭಾವ ಕೂಡ ಸರ್ಕಾರಿ ಕೆಲಸ ಜನಪರವಾಗುವ ನಿಟ್ಟಿನಲ್ಲಿ ತೊಡಕಾಗಬಲ್ಲುದು. ಇಡೀ ದೇಶ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವ ದಿನಗಳಿವು. ಇಂಥ ಸಂದರ್ಭದಲ್ಲಿ ಪ್ರಗತಿಗೆ ಪೂರಕವಾದ ಕಾರ್ಯವೈಖರಿಯನ್ನು ರೂಪಿಸುವಲ್ಲಿ ಸರ್ಕಾರ ಹಿಂದೆಬಿದ್ದರೆ, ಅಭಿವೃದ್ಧಿ ಕುರಿತ ಅದರ ಸಂಕಲ್ಪಶಕ್ತಿ ದುರ್ಬಲವಾಗಿದೆ ಎಂದೇ ಭಾವಿಸಬೇಕಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.