ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗರು ಲಜ್ಜೆಗೆಟ್ಟವರು: ಸಿ.ಎಂ ಟೀಕೆ

ಚುನಾವಣಾ ಪ್ರಚಾರ ಭಾಷಣದಲ್ಲಿ ಬಣ್ಣ ಬಯಲು ಮಾಡುವೆ; ಸಿದ್ದರಾಮಯ್ಯ
Last Updated 10 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇಂಡಿ (ವಿಜಯಪುರ ಜಿಲ್ಲೆ): ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಈ ಇಬ್ಬರೂ ಸಮಾಜದಲ್ಲಿ ತಲೆ ಎತ್ತಿ ತಿರುಗಾಡಬಾರದು. ಇವರು ಮಾನಗೆಟ್ಟವರು, ಲಜ್ಜೆಗೆಟ್ಟವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಇದು ಸರ್ಕಾರಿ ಕಾರ್ಯಕ್ರಮ. ಹೆಚ್ಚಿಗೆ ಅವರ ಬಗ್ಗೆ ಮಾತನಾಡಲ್ಲ. ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಬಂದು ಚುನಾವಣಾ ಭಾಷಣ ಮಾಡುವಾಗ ಅವರ ಬಣ್ಣ ಬಯಲು ಮಾಡುವೆ’ ಎಂದು ಹೇಳಿದರು.

‘ಯಡಿಯೂರಪ್ಪ ನೀ ಎಷ್ಟೇ ವೇಷ ಬದಲಾಯಿಸಿದ್ರು ಮತ್ತೆ ಅಧಿಕಾರಕ್ಕೆ ಬರಲ್ಲ. ತಿಪ್ಪರಲಾಗ ಹಾಕಿದ್ರೂ ಸಾಧ್ಯವಿಲ್ಲ. ಅಲ್ಲಾಹು ಮೇಲಾಣೆ, ನಾ ಬಿಜೆಪಿ ಸೇರಲ್ಲ ಎಂದಿದ್ದೆ. ಆದರೆ ಇದೀಗ ನೀನೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ. ಜನರು ಯಾವುದನ್ನೂ ಮರೆತಿಲ್ಲ. ನಿನ್ನ ಎರಡು ನಾಲಗೆಯ ಮಾತುಗಳನ್ನು ನೆನಪಿಟ್ಟಿದ್ದಾರೆ. ನಾನು ಜನರೆದುರು ಸತ್ಯ ಹೇಳಿದ್ರೇ ಸಿದ್ದರಾಮಯ್ಯಗೆ ಅಹಂಕಾರ. ತಲೆ ತಿರುಗ್ತಿದೆ ಅಂತೀಯಾ. ಕಾದು ನೋಡು. ಜನರೇ ಎಲ್ಲವನ್ನೂ ತೀರ್ಮಾನಿಸುತ್ತಾರೆ’ ಎಂದು ಕಿಡಿಕಾರಿದರು.

‘ನುಡಿದಂತೆ ನಾನು ನಡೆದಿದ್ದೇನೆ. ನೀವೇನು ಮಾಡಿದ್ದೀರಿ. ಅಧಿಕಾರದಲ್ಲಿದ್ದಾಗ ಸೀರೆ ಹಂಚೀವಿ. ಸೈಕಲ್‌ ಕೊಟ್ಟೀವಿ ಅಂಥ ಹೋದ ಕಡೆ ಹೇಳಿಕೊಂಡು ಬರ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ಜೈಲಿಗೆ ಹೋಗಿ ಬಂದಿವ್ನಿ ಎಂಬೋದೊಂದನ್ನು ಮಾತ್ರ ಹೇಳ್ತಿಲ್ಲ’ ಎಂದು ಸಿದ್ದರಾಮಯ್ಯ ಛೇಡಿಸಿದರು.

‘ರೈತರ ಪರ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟರೆ ನೀವೇನು ಮಾಡಿದ್ದೀರಿ ಎಂಬುದನ್ನು ಜನತೆಗೆ ತಿಳಿಸಿ’ ಎಂದು ಏರು ದನಿಯಲ್ಲಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT