ಮಂಗಳವಾರ, ಮಾರ್ಚ್ 9, 2021
23 °C

ತುರುವೇಕೆರೆ: ನುಂಗಲಾರದ ತುತ್ತಾದ ಬಂಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ನುಂಗಲಾರದ ತುತ್ತಾದ ಬಂಡಾಯ

ತುಮಕೂರು: ’ಕಾಯಿ ಸೀಮೆ’ ಎಂದೇ ಪ್ರಸಿದ್ಧಿಯಾಗಿರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪ್ರಮುಖ ಮೂರು ಪಕ್ಷಗಳು ಆಂತರಿಕ ಕಚ್ಚಾಟದಲ್ಲಿ ತೊಡಗಿವೆ. ’ಎಲ್ಲವೂ ಚೆನ್ನಾಗಿದೆ’  ಎಂದು ಎದೆಯುಬ್ಬಿಸಿ ಹೇಳುವ ಪಕ್ಷ ಯಾವುದೂ ಇಲ್ಲ. ಚಿತ್ರನಟ ಜಗ್ಗೇಶ್‌ ಗೆಲುವು ಸಾಧಿಸಿದ್ದ ಅತ್ಯಲ್ಪ ಅವಧಿ ಹೊರತುಪಡಿಸಿ ಕಳೆದ ಹದಿನೈದು ವರ್ಷಗಳಿಂದ ಶಾಸಕರಾಗಿ ಬೀಗುತ್ತಿರುವ ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೂ ಈ ಸಲ ಬಂಡಾಯದ ಬಿಸಿ ಜೋರಾಗಿಯೇ ತಟ್ಟಿದೆ.

ಜೆಡಿಎಸ್‌ ಭದ್ರಕೋಟೆಯಾಗಿರುವ ಇಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿರುವ ನೆಲಮಂಗಲ ಪುರಸಭೆ ಸದಸ್ಯ ನಾರಾಯಣ ಗೌಡ ಬಂಡಾಯದ ಬಾವುಟ ಆರಿಸಿದ್ದಾರೆ.  ನಾರಾಯಣಗೌಡ ಅವರ ತಾತನ ಊರು ಕಲ್ಲೂರು. ಆದರೆ ನೆಲಮಂಗಲದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದಾರೆ. ಈಗ ರಾಜಕೀಯ ಭವಿಷ್ಯ ಅರಸಿಕೊಂಡು ತುರುವೇಕೆರೆಗೆ ಬಂದಿದ್ದಾರೆ. ಇದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.

ಕ್ಷೇತ್ರದಲ್ಲಿ ಈಗಾಗಲೇ ’ಬಂಡವಾಳ’ ಹೂಡಲು ಆರಂಭಿಸಿರುವ ನಾರಾಯಣಗೌಡ ತಮ್ಮ ಹಿಂಬಾಲಕರಿಗೆ ಚುನಾವಣೆಗೆ ನಿಂತೇ ನಿಲ್ಲುವುದಾಗಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ’ಕಾಂಗ್ರೆಸ್‌’ನಲ್ಲೂ ಟಿಕೆಟ್‌ಗೆ ಪ್ರಯತ್ನಿಸುತ್ತೇನೆ’ ಎಂದು ನಾರಾಯಣ ಗೌಡ ಅವರು ಹೇಳುತ್ತಿದ್ದರೂ ಕಾಂಗ್ರೆಸ್ ಅವರಿಗೆ ಬಾಗಿಲು ಮುಚ್ಚಿದೆ.

’ಜಿಲ್ಲೆಯ ಹಾಲಿ ಎಲ್ಲ ಶಾಸಕರಿಗೂ ಟೆಕೆಟ್‌ ನೀಡುತ್ತೇವೆ’ ಎಂದು ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಈಗಾಗಲೇ ಘೋಷಣೆ ಮಾಡಿರುವುದರಿಂದ  ನಾರಾಯಣ ಗೌಡ ಟಿಕೆಟ್‌ ಹೇಗೆ ತಂದಾರು ಎಂಬ ಪ್ರಶ್ನೆ ಜನರಲ್ಲಿದೆ.

ಸದ್ಯದ ಸ್ಥಿತಿಯಲ್ಲಿ ನಾರಾಯಣ ಗೌಡ ಬಂಡಾಯವಾಗಿಯಾದರೂ ಸ್ಪರ್ಧಿಸುವುದಾಗಿ ಗಟ್ಟಿಯಾಗಿ ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ಅಲ್ಲಲ್ಲಿ ಪ್ರಚಾರ ಕೂಡ ಆರಂಭಿಸಿದ್ದಾರೆ. ಇದು ಜೆಡಿಎಸ್‌ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ.

ಇನ್ನೂ ಎಂ.ಟಿ. ಕೃಷ್ಣಪ್ಪ ಪಾಳೆಯದಲ್ಲಿ ಎಲ್ಲವೂ ಸರಿ ಇಲ್ಲ. ಈಗಾಗಲೇ ಅವರನ್ನು ಒಬ್ಬಂಟಿಯಾಗಿಸುವ ಪ್ರಯತ್ನ ನಡೆಯುತ್ತಿದೆ.  ಜೆಡಿಎಸ್‌ನ ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯ ಅವರ ಪತಿ ರಮೇಶ್‌ಗೌಡ, ಶಂಕರೇಗೌಡ, ಕೊಂಡಜ್ಜಿ ವಿಶ್ವನಾಥ್ ಸಹಿತ ಸಾಕಷ್ಟು ಮುಖಂಡರು ಶಾಸಕರ ವಿರುದ್ಧ ತಿರುಗಿ ನಿಂತಿದ್ದಾರೆ.

’ನಮ್ಮನ್ನು ಶಾಸಕರು ಕಡೆಗಣಿಸಿದ್ದಾರೆ’ ಎಂಬ ಕಾರಣವನ್ನು ಈ ಮುಖಂಡರು ನೀಡುತ್ತಿದ್ದಾರೆ. ರಮೇಶ್‌ಗೌಡ ಅವರು ನ.20ರಂದು ತಮ್ಮ ಬೆಂಬಲಿಗರ ಸಭೆಯನ್ನು ಸಹ ಕರೆದಿದ್ದಾರೆ. ಈ ಸಭೆಯ ಮೇಲೆ ಎಲ್ಲರ ಚಿತ್ತ ಇದೆ.

‘ಕ್ಷೇತ್ರದಲ್ಲಿ ಯಾರೂ ಮುಖ್ಯರಲ್ಲ. ಒಮ್ಮೆ ಕುಮಾರಸ್ವಾಮಿ ಬಂದು ಹೋದರೆ ಎಲ್ಲವೂ ಸರಿ ಹೋಗಲಿದೆ. ಹೆಚ್ಚು ಆತಂಕಪಡುವ ಅಗತ್ಯವಿಲ್ಲ’ ಎಂಬ ಮಾತುಗಳನ್ನು ಶಾಸಕರ ಪರ ಇರುವವರು ಹೇಳುತ್ತಿದ್ದಾರೆ. ಜತೆಗೆ ’ಪಕ್ಷದಲ್ಲಿ ಒಗ್ಗಟ್ಟು ಇದ್ದರೆ ಒಳ್ಳೆಯದಿತ್ತು’ ಎಂಬ ಮಾತನ್ನೂ ಸೇರಿಸುತ್ತಿದ್ದಾರೆ.

ಜೆಡಿಎಸ್‌  ಪರಿಸ್ಥಿತಿಗಿಂತ ಬಿಜೆಪಿ ಸ್ಥಿತಿ ಭಿನ್ನವಾಗಿಲ್ಲ. ಕಳೆದ ಸಲ ಕೆಜಿಪಿಯಿಂದ ಕ್ಷೇತ್ರದ ಅಭ್ಯರ್ಥಿಯಾಗಿ ಕಡಿಮೆ ಮತಗಳ ಅಂತರದಿಂದ ಸೋತ್ತಿದ್ದ ಮಸಾಲೆ ಜಯರಾಮ್ ಅವರನ್ನು ಬಿಜೆಪಿಗೆ ಕರೆತಂದ ಬಳಿಕ ಆ ಪಕ್ಷದಲ್ಲಿ ಗೊಂದಲ, ಗೋಜಲು ಹೆಚ್ಚಾಗಿದೆ.

ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆಯಲ್ಲಿ ರಥಯಾತ್ರೆಯ ಬಸ್‌ಗೆ ತೆಂಗಿನಕಾಯಿಯನ್ನು ಬೀಸುವ ಮೂಲಕ ಬಂಡಾಯದ ಕಾರ್ಯಕರ್ತರು, ಮುಖಂಡರು ಆಕ್ರೋಶ ಹೊರಹಾಕಿರುವುದು ’ಕಡಿಮೆ ಸಾಹಸ’ವೇನಲ್ಲ. ಇದರೊಂದಿಗೆ ಬಿಜೆಪಿಯಲ್ಲಿ ಬಂಡಾಯದ ಬಾವುಟ ಜೋರಾಗಿಯೇ ಹಾರುತ್ತಿದೆ ಎನ್ನುತ್ತಾರೆ ಆ ಪಕ್ಷದ ಕೆಲವು ಮುಖಂಡರು.

ಮೂಲ ಬಿಜೆಪಿ ಹಾಗೂ ವಲಸೆ ಬಂದವರು ಎಂಬ ಎರಡು ಗುಂಪುಗಳು ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕಿನಲ್ಲಿ ಪಕ್ಷ ಕಟ್ಟಿದ ಬೋರೇಗೌಡ ಅವರ ಸಹಿತ ಮೂಲ ಬಿಜೆಪಿಗರು ಮಸಾಲೆ ಜಯರಾಮ್‌ ಪರ ಇಲ್ಲ. ‘ಮಸಾಲೆ ಜಯರಾಮ್‌ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ಎಂದು ಮೂಲ ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಅಳಿಯ, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಚೌದ್ರಿ ನಾಗೇಶ್‌, ರಾಯಸಂದ್ರ ರವಿ, ಅರಳೇಕೆರೆ ರವಿಕುಮಾರ್‌, ಮಮತಾ ಅಶೋಕ್‌ ಬಂಡಾಯ ಸಾರಿರುವ ಪ್ರಮುಖರು. ಮತ್ತೊಬ್ಬ ಬಿಜೆಪಿ ಮುಖಂಡ  ಗೋವಿಂದರಾಜ ಗೌಡ ಅವರ ಪರ ಇನ್ನೊಂದು ಗುಂಪು ಕೆಲಸ ಮಾಡುತ್ತಿದೆ. ಗೋವಿಂದರಾಜ ಗೌಡ ಅವರಿಗೆ ಟಿಕೆಟ್‌ ಕೊಡಬೇಕೆಂದು ಒತ್ತಾಯ ಮಾಡುತ್ತಿದೆ.

ಈಗಾಗಲೇ ಯಡಿಯೂರಪ್ಪ ಅವರು ಮಸಾಲೆ ಜಯರಾಂ ಗೆ ಟಿಕೆಟ್‌ ಕೊಡುವುದಾಗಿ ಘೋಷಿಸಿರುವುದರಿಂದ ಬಿಜೆಪಿಯಲ್ಲಿ ಬೇರೆಯವರಿಗೆ ಟಿಕೆಟ್‌ ನೀಡುವುದು ಅನುಮಾನ ಎಂಬುದು ಕಾರ್ಯಕರ್ತರ ಅಭಿಪ್ರಾಯ.

’ ಜಯರಾಂ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ದೊಡ್ಡ ದ್ವನಿ ತೆಗೆಯುವುದಿಲ್ಲ, ಸರಿಯಾಗಿ ಸಂಘಟನೆ ಮಾಡುವುದಿಲ್ಲ, ಶಾಸಕರ ವಿರುದ್ಧವೂ ಗಟ್ಟಿ ದ್ವನಿಯಲ್ಲಿ ಮಾತನಾಡುವುದಿಲ್ಲ, ರಾಜಕೀಯ ಚಾಕ್ಯಚಕ್ಯತೆ ಇಲ್ಲ. ಇದರ ಜತೆಗೆ ಬಂಡಾಯ ಶಮನಗೊಳಿಸುವ ಕೆಲಸ ಕೂಡ ಮಾಡಬೇಕಾಗಿದೆ’ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.