ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಾಲ್–ಫೆಡರರ್‌ ಹಣಾಹಣಿ ಕುತೂಹಲ

ಎಟಿಪಿ ವಿಶ್ವ ಟೂರ್‌: ಮೊಣಕಾಲು ನೋವಿನಿಂದ ಬಳಲುತ್ತಿರುವ ರಫೆಲ್‌
Last Updated 11 ನವೆಂಬರ್ 2017, 19:50 IST
ಅಕ್ಷರ ಗಾತ್ರ

ಲಂಡನ್‌: ವರ್ಷದ ಕೊನೆಯ ಪ್ರಮುಖ ಟೂರ್ನಿಯಾದ ಎಟಿಪಿ ವಿಶ್ವ ಟೂರ್‌ನಲ್ಲಿ ರಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ನಡುವಿನ ಹಣಾಹಣಿಗೆ ವೇದಿಕೆ ಸಜ್ಜಾಗುವ ಸಾಧ್ಯತೆ ಇದೆ. ಟೆನಿಸ್ ಪ್ರಿಯರು ಈ ಕ್ಷಣಕ್ಕಾಗಿ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಆದರೆ ರಫೆಲ್ ನಡಾಲ್‌ ಮೊಣಕಾಲಿನ ನೋವಿನಿಂದ ಬಳಲುತ್ತಿರುವುದು ಸಂಘಟಕರಲ್ಲಿ ಆತಂಕ ಸೃಷ್ಟಿಸಿದೆ. ಅವರು ಟೂರ್ನಿಯ ಪ್ರಮುಖ ಘಟ್ಟ ತಲುಪುವುದು ಸಾಧ್ಯವೇ ಎಂಬ ಸಂದೇಹ ಅವರನ್ನು ಕಾಡುತ್ತಿದೆ.

ನಡಾಲ್‌ ಮತ್ತು ಫೆರಡರ್‌ ಈ ಋತುವಿನಲ್ಲಿ ಯಶಸ್ಸು ಕಂಡಿದ್ದಾರೆ. ನೊವಾಕ್ ಜಕೊವಿಚ್‌ ಮತ್ತು ಆ್ಯಂಡಿ ಮರೆ ಗಾಯದ ಸಮಸ್ಯೆಯಿಂದಾಗಿ ಬಳಲಿದ ಕಾರಣ ನಡಾಲ್‌ ಮತ್ತು ಫೆರಡರ್‌ ವರ್ಷ ಪೂರ್ತಿ ಟೆನಿಸ್ ಅಂಗಣಗಳಲ್ಲಿ ಗಮನ ಸೆಳೆದಿದ್ದಾರೆ. ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ನಡಾಲ್‌ ಈ ವರ್ಷ ಫ್ರೆಂಚ್ ಓಪನ್ ಮತ್ತು ಅಮೆರಿಕ ಓಪನ್ ಪ್ರಶಸ್ತಿಗಳನ್ನು ಗೆದ್ದು ಬೀಗಿದ್ದಾರೆ. ಭಾನುವಾರ ನಡೆಯುವ ಎಟಿಪಿ ವಿಶ್ವ ಟೂರ್‌ನ ಮೊದಲ ಪಂದ್ಯದಲ್ಲಿ ಅವರು ಬೆಲ್ಜಿಯಂನ ಡೇವಿಡ್‌ ಗಫಿನ್ ಅವರನ್ನು ಎದುರಿಸುವರು.

ಆದರೆ ಅಭ್ಯಾಸದ ನಡುವೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವಾಗ ಅವರಲ್ಲಿ ಆತ್ಮವಿಶ್ವಾಸ ಇರಲಿಲ್ಲ. ‘ನಾನು ಸಂಪೂರ್ಣವಾಗಿ ಫಿಟ್‌ ಇಲ್ಲ’ ಎಂದು  ಹೇಳಿದ ಅವರು ‘ಕಣಕ್ಕೆ ಇಳಿಯಲು ಯಾವುದೇ ತೊಂದರೆ ಇಲ್ಲ’ ಎಂದು ಕೂಡ ಅಭಿಪ್ರಾಯಪಟ್ಟರು.

ವಿಶ್ವಾಸದಲ್ಲಿ ಫೆಡರರ್‌: ಆರು ಬಾರಿ ವಿಶ್ವ ಟೂರ್‌ ಫೈನಲ್‌ನಲ್ಲಿ ಆಡಿರುವ ರೋಜರ್ ಫೆಡರರ್‌ ವಿಶ್ವಾಸದಲ್ಲೇ ಇಲ್ಲಿ ಅಭ್ಯಾಸ ನಡೆಸಿದ್ದಾರೆ. ಕಳೆದ ಬಾರಿ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ‘ಈ ಋತುವಿನಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದೇನೆ.’ ಎಂದು ಹೇಳಿದ್ದಾರೆ.
*
ಜ್ವೆರೆವ್‌ ಮೇಲೆ ಕಣ್ಣು
ಟೂರ್ನಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಎರಡು ಮಾಸ್ಟರ್ಸ್‌ ಟೂರ್ನಿ ಸೇರಿದಂತೆ ಒಟ್ಟು ಐದು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಅವರು ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ‘ಒಂದು ಋತುವಿನಲ್ಲಿ ಎರಡು ಮಾಸ್ಟರ್ಸ್‌ ಸರಣಿ ಗೆಲ್ಲುವುದೆಂದರೆ ಯಾವುದೇ ಆಟಗಾರನ ಪಾಲಿಗೆ ಮಹತ್ವದ ವಿಷಯ. ನಾನು ಕೂಡ ಈ ಸಾಧನೆಯಿಂದ ಪುಳಕಿತನಾಗಿದ್ದೇನೆ’ ಎಂದು ಜ್ವೆರೆವ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT