ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ವಿಭಿನ್ನವಾಗಿ ಆಡಬೇಕು: ಗಂಗೂಲಿ

Last Updated 12 ನವೆಂಬರ್ 2017, 20:11 IST
ಅಕ್ಷರ ಗಾತ್ರ

ಕೋಲ್ಕತ್ತ: ಚುಟುಕು ಕ್ರಿಕೆಟ್ ಮಾದರಿಯಲ್ಲಿ ಮಹೇಂದ್ರ ಸಿಂಗ್ ದೋನಿ ಅವರ ಆಟದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಹಿರಿಯ ಆಟಗಾರ ಸೌರವ್ ಗಂಗೂಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗೆ ವಿಭಿನ್ನ ಆಟದ ತಂತ್ರಗಳನ್ನು ಬಳಸಿ ಆಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್‌, ವಿ.ವಿ.ಎಸ್‌. ಲಕ್ಷ್ಮಣ್‌, ಅಜಿತ್‌ ಅಗರ್‌ಕರ್ ಅವರು ಅಂತರರಾಷ್ಟ್ರೀಯ ಟಿ–20 ಪಂದ್ಯಗಳ ವೇಳೆ ಭಾರತ ತಂಡದಲ್ಲಿ ದೋನಿ ಅವರ ಸ್ಥಾನವನ್ನು ನಿರ್ಧರಿಸಬೇಕು ಎಂದು ಹೇಳಿದ್ದರು.

‘ಏಕದಿನ ಮಾದರಿಗೆ ಹೋಲಿಸಿದರೆ ಟಿ–20ಯಲ್ಲಿ ದೋನಿ ಅವರ ಸಾಧನೆ ಅಷ್ಟಕ್ಕಷ್ಟೇ. ನಾಯಕ ವಿರಾಟ್‌ ಕೊಹ್ಲಿ ಹಾಗೂ ತಂಡದ ಆಡಳಿತ ಮಂಡಳಿ ದೋನಿ ಅವರೊಂದಿಗೆ ಮಾತನಾಡಬೇಕು. ಅವರಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಆಡಲು ಸಲಹೆ ನೀಡಬೇಕು. ಹೀಗಾದಲ್ಲಿ ಮಾತ್ರ ಅವರು ಯಶಸ್ವಿಯಾಗಬಹುದು’ ಎಂದು ಗಂಗೂಲಿ ಹೇಳಿದ್ದಾರೆ.

ರಾಜ್‌ಕೋಟ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ–20 ಪಂದ್ಯದಲ್ಲಿ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಗೆಲುವಿನ ದಡ ತಲುಪಿಸುವಲ್ಲಿ ದೋನಿ ವಿಫಲರಾಗಿದ್ದರು.

‘ಏಕದಿನ ಮಾದರಿಯಲ್ಲಿ ದೋನಿ ಸಾಕಷ್ಟು ವಿಭಿನ್ನವಾಗಿ ಆಡುತ್ತಾರೆ. ಆದರೆ ಟಿ–20ಯಲ್ಲಿ ಅವರು ತಮ್ಮ ಶೈಲಿ ಬದಲಿಸಿಕೊಳ್ಳಬೇಕು. ಚುಟುಕು ಮಾದರಿಯಲ್ಲಿ ಅವರು ಮುಕ್ತವಾಗಿ ಆಡುತ್ತಿಲ್ಲ. ದೋನಿಗೆ ಅವಕಾಶ ನೀಡುವುದು ಆಯ್ಕೆ ಸಮಿತಿಗೆ ಬಿಟ್ಟ ನಿರ್ಧಾರ’ ಎಂದು ಹೇಳಿದ್ದಾರೆ.

ಪಾಂಡ್ಯ ಅವರನ್ನು ಕೈಬಿಟ್ಟಿದ್ದು ಆಶ್ಚರ್ಯ ತಂದಿದೆ: ‘ಹಾರ್ದಿಕ್ ಪಾಂಡ್ಯ ಅವರನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿಲ್ಲ. ಕೇವಲ ಮೂರು ಟೆಸ್ಟ್‌ ಪಂದ್ಯಗಳನ್ನು ಆಡಿರುವ ಆಲ್‌ರೌಂಡ್ ಆಟಗಾರನಿಗೆ ವಿಶ್ರಾಂತಿ ನೀಡಿರುವುದು ಆಶ್ಚರ್ಯ ಉಂಟುಮಾಡಿದೆ. ಚೆನ್ನಾಗಿ ಆಡುವ ವಯಸ್ಸಿನಲ್ಲಿ ಅವಕಾಶ ಸಿಗಬೇಕು. ಪಾಂಡ್ಯ ಯಾವ ಸಂದರ್ಭದಲ್ಲಿ ಗಾಯಗೊಂಡರು ನನಗೆ ಗೊತ್ತಿಲ್ಲ. ಅವರು ಫಿಟ್‌ ಆಗಿರಬಹುದು ಎಂದು ನಾನು ನಂಬಿದ್ದೇನೆ’ ಎಂದು ಗಂಗೂಲಿ ಹೇಳಿದ್ದಾರೆ.

‘ಭಾರತ ತಂಡಕ್ಕೆ ಮೂವರು ಸ್ಪಿನ್ನರ್‌ಗಳ ಅಗತ್ಯವಿಲ್ಲ. ಅದರಲ್ಲೂ ಈಡನ್ ಗಾರ್ಡನ್‌ ಭಿನ್ನವಾದ ಅಂಗಳ. ಇಬ್ಬರು ಸ್ಪಿನ್ನರ್‌ಗಳು ತಂಡದಲ್ಲಿ ಇದ್ದರೆ ಸಾಕು. ಈಗ ಹಾರ್ದಿಕ್ ಇಲ್ಲದಿರುವುದರಿಂದ ಆಲ್‌ರೌಂಡ್ ವಿಭಾಗಕ್ಕೆ ಬಲ ತುಂಬುವ ಕೆಲಸ ಆಗಬೇಕು’ ಎಂದು ಹೇಳಿದ್ದಾರೆ.

‘ಶ್ರೀಲಂಕಾ ತಂಡ ಪಾಕಿಸ್ತಾನದ ಎದುರು ಕಳಪೆಯಾಗಿ ಆಡಿದೆ. ಭಾರತವೇ ಜಯಗಳಿಸುವ ನೆಚ್ಚಿನ ತಂಡ. ಆದರೆ ಎದುರಾಳಿಯನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ’ ಎಂದು ಗಂಗೂಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT